ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಹೇಮಾವತಿ ಕಚೇರಿಗೆ ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ಆಗಮಿಸಿದ ರೈತ ಮುಖಂಡರು ನೀರಿಗಾಗಿ ಆಗ್ರಹಿಸಿ ಚಳವಳಿ ಸಂಘಟಿಸುವ ಎಚ್ಚರಿಕೆ ನೀಡಿದರು.
ಹೇಮಾವತಿ ಜಲಾಶಯದಲ್ಲಿ 29 ಟಿಎಂಸಿ ನೀರಿದೆ. ಇನ್ನು 8 ಟಿಎಂಸಿ ನೀರು ಬಂದರೆ ಜಲಾಶಯ ತುಂಬುತ್ತದೆ. ಹೇಮಾವತಿ ನದಿಗೆ 6758 ಕ್ಯುಸೆಕ್ ಒಳಹರಿವಿದೆ. ಜಲಾಶಯದ ಎಡದಂಡೆ ನಾಲೆ ಮುಖಾಂತರ ತುಮಕೂರು ಭಾಗಕ್ಕೆ 2800 ಹಾಗೂ ಮಂಡ್ಯ ಭಾಗಕ್ಕೆ 1200 ಕ್ಯುಸೆಕ್ ನೀರಿ ಅಗತ್ಯವಿದೆ ಎಂದರು.ನಮಗೆ ಬೆಳೆ ಬೆಳೆಯಲು ನೀರು ಬೇಡ. ಆದರೆ, ಜನ-ಜಾನುವಾರುಗಳ ಕುಡಿಯುವ ನೀರಿನ ಅಗತ್ಯತೆಗಾಗಿ ಕೆರೆಗಳಿಗೆ ನೀರು ಹರಿಸಲು ಕ್ರಮ ವಹಿಸಬೇಕು. ಕೆರೆಗಳನ್ನು ತುಂಬಿಸಿದರೆ ಅಂತರ್ಜಲ ಮಟ್ಟವೂ ಸುಧಾರಿಸಿ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ ಎಂದರು.
ಹೇಮೆಯ ಬಗೆಗಿನ ಸರ್ಕಾರದ ತಾರತಮ್ಯ ಸಲ್ಲದು. ನೀರಾವರಿ ಇಲಾಖೆ ಅಧಿಕಾರಿಗಳು ಈ ಭಾಗದ ರೈತರ ಅಸಹನೆಯನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದು ಕೆರೆ ಕಟ್ಟೆಗಳನ್ನು ತುಂಬಿಸಲು ಕ್ರವಹಿಸಬೇಕು. ಇಲ್ಲದಿದ್ದರೆ ಆಗಸ್ಟ್ 11ರಿಂದ ನೀರಿಗಾಗಿ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿ ಹೇಮಾವತಿ ಜಲಾಶಯದ ನಂ.3 ವಿಭಾಗದ ಕಾರ್ಯಪಾಲಕ ಅಭಿಯಂತರ ಬಿ.ಮಂಜುನಾಥ್, ಸಹಾಯಕ ಕಾರ್ಯಪಾಲಕ ಅಭಿಯಂತರ ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದರು.