ಕಾರವಾರ: ಕೇಣಿ ವಾಣಿಜ್ಯ ಬಂದರಿನ ಸರಕು ಸಾಗಣೆಗೆ ಪೂರಕವಾಗಿ ಅಂಕೋಲಾ ತಾಲೂಕಿನ 6 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ದೇಶಿಸಿರುವ ರಿಂಗ್ ರೋಡ್ ಯೋಜನೆಯಿಂದ ಸ್ಥಳೀಯ ಮೀನುಗಾರರು ಹಾಗೂ ರೈತರ ಬದುಕಿಗೆ ತೊಂದರೆಯಾಗಲಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಯೋಜನೆಯನ್ನು ಕೈಬಿಡದಿದ್ದರೆ ನವೆಂಬರ್ ತಿಂಗಳ ಕೊನೆಯಲ್ಲಿ ಅಂಕೋಲಾದಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಮೀನುಗಾರ ಮುಖಂಡ ಸಂಜೀವ ಬಲೆಗಾರ ಎಚ್ಚರಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಎಸ್‌ಡಬ್ಲ್ಯು ಕಂಪನಿಯ ಪರಿಸರ ಪರಿಣಾಮ ಮೌಲ್ಯಮಾಪನ(ಇಐಎ) ವರದಿಯಲ್ಲಿ ರಿಂಗ್ ರೋಡ್ ಯೋಜನೆಯ ಪ್ರಸ್ತಾಪವೇ ಇರಲಿಲ್ಲ. ಆದರೂ 5,000 ಸಾರ್ವಜನಿಕರು ಹಾಗೂ ಭೂಸ್ವಾಧೀನಕ್ಕೆ ಒಳಗಾಗಲಿರುವ 880 ಕುಟುಂಬಗಳ ಸಮ್ಮುಖದಲ್ಲಿ ಅ. 20ರಂದು ಸಭೆ ನಡೆಯಲಿದೆ ಎಂದು ನೋಟಿಫಿಕೇಶನ್ ಹೊರಡಿಸಲಾಗಿದೆ. ಆರು ಗ್ರಾಮ ಪಂಚಾಯಿತಿಗಳಿಗೂ ಸಮರ್ಪಕ ಮಾಹಿತಿ ನೀಡದೇ, ಆಕ್ಷೇಪಣೆ ಸಲ್ಲಿಸಲು ನಿಗದಿಪಡಿಸಿದ 60 ದಿನಗಳ ಅವಧಿ ಮುಗಿಯಲು ಕೇವಲ ಎರಡು ದಿನ ಬಾಕಿ ಇರುವಾಗ ಪ್ರಚಾರ ನಡೆಸಲಾಗಿದೆ ಎಂದು ಆರೋಪಿಸಿದರು.ಮೀನುಗಾರರ ಜಾಗವನ್ನು ವಶಪಡಿಸಿಕೊಳ್ಳುವುದಿಲ್ಲ ಎಂದು ಈ ಹಿಂದೆ ಹೇಳಿದ್ದ ಕಂಪನಿ, ಇದೀಗ ಮೀನುಗಾರರ ವಸತಿ ಕಾಲನಿ ಹಾಗೂ ವರ್ಷಕ್ಕೆ ಮೂರು ಬೆಳೆ ಬೆಳೆಯುವ ಫಲವತ್ತಾದ ಕೃಷಿಭೂಮಿಯ ಮೂಲಕ ರಸ್ತೆ ನಿರ್ಮಿಸಲು ಸರ್ವೇ ನಡೆಸಿದೆ. ಹಿಲ್ಲೂರಿನಿಂದ ಆರಂಭವಾಗುವ ರಸ್ತೆ ಬೊಗ್ರಿಬೈಲ್, ಬಾಳೆಗುಳಿ, ವಂದಿಗೆ, ಶೇಟಗೇರಿ, ಸೂರ್ವೆ, ಬಾಸಗೋಡ, ಬೆಳಂಬರ, ತೆಂಕಣಕೇರಿ, ನದಿಭಾಗ, ಶೇಡಿಕುಳಿ, ಬೇಳಾ, ಕೇಣಿ ಹಾಗೂ ಬಾವಿಕೇರಿ ಮೂಲಕ ಗೋವಾ- ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಿದೆ. ಬಾಳೆಗುಳಿ ಪ್ರಮುಖ ಪ್ರವೇಶ ದ್ವಾರವಾಗಲಿದ್ದು, ಈ ರಸ್ತೆಯಲ್ಲಿ ದಿನಕ್ಕೆ ಸುಮಾರು 10 ಸಾವಿರ ಸರಕು ಸಾಗಣೆ ವಾಹನಗಳು ಸಂಚರಿಸುವ ನಿರೀಕ್ಷೆಯಿದೆ ಎಂದರು.ಬಂದರಿನಿಂದ ಸಾಗಣೆಯಾಗುವ ಅಪಾಯಕಾರಿ ಅನಿಲಗಳು ಹಾಗೂ ಕ್ಯಾನ್ಸರ್ ಕಾರಕ ಧೂಳಿನ ಕಣಗಳಿಂದ ಸ್ಥಳೀಯರ ಆರೋಗ್ಯಕ್ಕೆ ಅಪಾಯ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.