ಬಿಜೆಪಿಯಿಂದ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಜನಾಂದೋಲನ

KannadaprabhaNewsNetwork |  
Published : Nov 01, 2026, 03:30 AM IST
ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ನಳಿನ್‌ಕುಮಾರ್‌ ಕಟೀಲ್‌ ಮಾತನಾಡಿದರು. | Kannada Prabha

ಸಾರಾಂಶ

ರಾಹುಲ್ ಗಾಂಧಿ ಅವರು ಮೂರು ತಿಂಗಳಿಗೊಮ್ಮೆ ವಿದೇಶಕ್ಕೆ ತೆರಳಿ ತರಬೇತಿ ಪಡೆದು ಬಂದು ಯುವಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಹಲ್ಲೆ ಹಾಗೂ ಆಸ್ತಿಪಾಸ್ತಿ ಹಾನಿಗೆ ಕಾರಣವಾಗುವ ಹೋರಾಟಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಕಟೀಲ್ ವಾಗ್ದಾಳಿ ನಡೆಸಿದರು.

ಕಾರವಾರ: ಪ್ರಜಾಪ್ರಭುತ್ವವನ್ನು ಉಳಿಸಿ, ಅರಾಜಕತೆಯನ್ನು ಅಳಿಸಿ ಎಂಬ ಘೋಷವಾಕ್ಯದಡಿ ದೇಶಾದ್ಯಂತ ಬಿಜೆಪಿ ಬೃಹತ್ ಜನಾಂದೋಲನ ಅಭಿಯಾನ ಹಮ್ಮಿಕೊಂಡಿದೆ. ಕಾಂಗ್ರೆಸ್ ಅರಾಜಕತೆಯ ನಡವಳಿಕೆಯನ್ನು ಸಾರ್ವಜನಿಕರು ಹಾಗೂ ಯುವಜನತೆಗೆ ಮನವರಿಕೆ ಮಾಡಿಕೊಡುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಬಿಜೆಪಿ ಕೋರ್ ಕಮಿಟಿ ಸದಸ್ಯ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.ಕಾರವಾರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಕರೆಯ ಮೇರೆಗೆ ದೇಶಾದ್ಯಂತ ಈ ಅಭಿಯಾನ ನಡೆಯುತ್ತಿದೆ. ಕಳೆದ 12 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಆಡಳಿತವಿದ್ದು, ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲನುಭವಿಸಿದೆ. ಅಧಿಕಾರಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಇತರ ಸಂಘಟನೆಗಳೊಂದಿಗೆ ಕೈಜೋಡಿಸಿ ದೇಶದಲ್ಲಿ ಅರಾಜಕತೆ ಮತ್ತು ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.ರಾಹುಲ್ ಗಾಂಧಿ ಅವರು ಮೂರು ತಿಂಗಳಿಗೊಮ್ಮೆ ವಿದೇಶಕ್ಕೆ ತೆರಳಿ ತರಬೇತಿ ಪಡೆದು ಬಂದು ಯುವಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ಹಲ್ಲೆ ಹಾಗೂ ಆಸ್ತಿಪಾಸ್ತಿ ಹಾನಿಗೆ ಕಾರಣವಾಗುವ ಹೋರಾಟಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಕಟೀಲ್ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಸೋಲನುಭವಿಸಿದಾಗಲೆಲ್ಲ ‘ವೋಟ್ ಚೋರಿ’ ಹಾಗೂ ಇವಿಎಂ ಯಂತ್ರಗಳನ್ನು ದೂಷಿಸುತ್ತಾರೆ. ಆದರೆ ಇತ್ತೀಚೆಗೆ ರಾಜ್ಯದಲ್ಲಿ ನಡೆದ 4 ವಿಧಾನಪರಿಷತ್ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟ ನಾಲ್ಕೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇದು ಕಾಂಗ್ರೆಸ್‌ನ ವೈಫಲ್ಯವನ್ನು ತೋರಿಸುತ್ತದೆ ಎಂದರು. ಈ ಹಿಂದೆ ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾನ ಆರಂಭಕ್ಕೂ ಮುನ್ನವೇ ಮತಗಟ್ಟೆಗಳನ್ನು ವಶಪಡಿಸಿಕೊಳ್ಳುತ್ತಿದ್ದ ಕಾಂಗ್ರೆಸ್ ಪಕ್ಷವೇ ಮತಗಳ್ಳತನದ ಮೂಲ ಎಂದು ಅವರು ಟೀಕಿಸಿದರು.ಮಾಜಿ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ ಸಂದರ್ಭವೇ ದೇಶದಲ್ಲೇ ಪ್ರಜಾಪ್ರಭುತ್ವದ ಮೊದಲ ಕಗ್ಗೊಲೆ ನಡೆದಿದ್ದಾಗಿದೆ. 1984ರ ನ. 1ರಂದು ಕಾಂಗ್ರೆಸ್ ಆಡಳಿತದಲ್ಲಿ ಸಿಖ್ಖರ ವಿರುದ್ಧ ನರಮೇಧ ನಡೆದು ಅರಾಜಕತೆ ಸೃಷ್ಟಿಯಾಗಿತ್ತು ಎಂದು ಕಟೀಲ್ ಆರೋಪಿಸಿದರು.

ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಲೋಕಸಭೆಯಲ್ಲಿಯೇ ಹಲವು ವೇದಿಕೆಗಳಿವೆ. ಅವುಗಳನ್ನು ಬಳಸಿಕೊಳ್ಳುವ ಬದಲು ಬೀದಿಗಿಳಿದು ಗಲಭೆ ಸೃಷ್ಟಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರುಗಳಾದ ರೂಪಾಲಿ ನಾಯ್ಕ, ಸುನೀಲ್ ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಎಂಎಲ್ಸಿ ಗಣಪತಿ ಉಳ್ವೇಕರ್, ಮುಖಂಡರಾದ ಸುನೀಲ್ ಸೋನಿ, ಪ್ರಶಾಂತ ನಾಯ್ಕ, ರವಿರಾಜ ಅಂಕೋಲೆಕರ್, ಶಿವಾಜಿ ನರಸಾನಿ, ಮನೋಜ ಭಟ್, ಶುಭಂ ಕಳಸ ಹಾಗೂ ಕಿಶನ್ ಕಾಂಬ್ಳೆ ಉಪಸ್ಥಿತರಿದ್ದರು.

ಮೈತ್ರಿ ಸೀಟು ಹಂಚಿಕೆ ಬಗ್ಗೆ ಸ್ಪಷ್ಟನೆ

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯ ಸೀಟು ಹಂಚಿಕೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಎನ್‌ಡಿಎ ಮೈತ್ರಿಕೂಟವಾಗಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಚುನಾವಣೆ ಸಮೀಪಿಸಿದಾಗ ರಾಷ್ಟ್ರೀಯ ನಾಯಕರ ಮಟ್ಟದಲ್ಲಿ ಸೀಟು ಹಂಚಿಕೆ ಅಂತಿಮಗೊಳ್ಳಲಿದೆ. ವೈಯಕ್ತಿಕವಾಗಿ ಟಿಕೆಟ್ ಹಂಚಿಕೆ ಕುರಿತು ಯಾರೇ ಹೇಳಿಕೆ ನೀಡಿದರೂ ಅವು ಅಧಿಕೃತವಲ್ಲ ಎಂದು ಸ್ಪಷ್ಟಪಡಿಸಿದರು.

ಬೇಡ್ತಿ- ಅಘನಾಶಿನಿ ನದಿ ತಿರುವು ಯೋಜನೆ ಹಾಗೂ ಎತ್ತಿನಹೊಳೆ ಯೋಜನೆಗಳ ಕುರಿತು ಮಾತನಾಡಿದ ಅವರು, ಎರಡೂ ಜಿಲ್ಲೆಗಳ ನಾಯಕರು ಮತ್ತು ಸಾರ್ವಜನಿಕರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಉಗ್ರ ಹಿಂದುತ್ವ, ಸಾಫ್ಟ್ ಹಿಂದುತ್ವ ಅಂತೇನಿಲ್ಲ

ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದ ನಾಯಕರು ಈಗ ಮೃದು ಧೋರಣೆ ಅನುಸರಿಸುತ್ತಿದ್ದಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಉಗ್ರ ಹಿಂದುತ್ವ ಅಥವಾ ಸಾಫ್ಟ್ ಹಿಂದುತ್ವ ಎಂಬ ಭೇದವಿಲ್ಲ. ಮಾತನಾಡುವವರ ಮೇಲೆ ಅದು ಅವಲಂಬಿತವಾಗಿರುತ್ತದೆ. ಯಕ್ಷಗಾನದಲ್ಲಿ ಬೇರೆ ಬೇರೆ ವೇಷಗಳ ಪಾತ್ರಗಳಿರುವಂತೆ, ನಮಗೆ ಯಾವಾಗ ಪಾತ್ರ ಸಿಗುತ್ತದೆಯೋ ಆಗ ನಿರ್ವಹಿಸಬೇಕು ಅಷ್ಟೇ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ