ಕನ್ನಡ ಪ್ರಭ ವಾರ್ತೆ ನೆಲಮಂಗಲ
ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ವೃಷಭಾವತಿ ಯೋಜನೆಯನ್ನು ಕೈಬಿಡಬೇಕು, ಇಲ್ಲವಾದಲ್ಲಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ತಿಳಿಸಿದರು.ತಾಲೂಕಿನ ಟಿ.ಬೇಗೂರು ಗ್ರಾಮದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ವೃಷಭಾವತಿ ಯೋಜನೆ ವಿರೋಧಿಸಿ ಆಯೋಜಿಸಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವೃಷಭಾವತಿ ಯೋಜನೆ ಕುರಿತು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಎರಡು ಜಿಲ್ಲೆಯಲ್ಲಿ ಬೆಳೆದ ತರಕಾರಿ ಹಾಗೂ ಸೊಪ್ಪನ್ನು ತೆಗೆದುಕೊಳ್ಳಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದು ಈ ಹಿಂದೆ ಸರ್ಕಾರವೇ ಈ ಯೋಜನೆಯನ್ನು ಕೈ ಬಿಟ್ಟಿತ್ತು. ಆದರೆ ಕ್ಷೇತ್ರದ ಶಾಸಕರು 1800 ಕೋಟಿ ವೆಚ್ಚದ ವೃಷಭಾವತಿ ಯೋಜನೆಗೆ ಉಪ ಮುಖ್ಯಮಂತ್ರಿಗಳಿಂದ ಗುದ್ದಲಿಪೂಜೆ ಮಾಡಿಸಿ ತಾಲೂಕಿನ ಕೆರೆಗಳಿಗೆ ಕೊಳಚೆ ನೀರು ಪೂರೈಸಲು ಮುಂದಾಗಿದ್ದಾರೆ. ತಾಲೂಕಿನ ಜನರ ವಿರೋಧದ ನಡುವೇ ಶಾಸಕರು ಯಾವ ಕಾರಣಕ್ಕೆ ಈ ಯೋಜನೆ ತರುತ್ತಿದ್ದಾರೋ ಗೊತ್ತಿಲ್ಲ. ಶಾಸಕ ಶ್ರೀನಿವಾಸ್ ಅವರು ಪಕ್ಕದ ಬೆಂಗಳೂರು ದಕ್ಷಿಣ ತಾಲೂಕಿನವರು ಈ ಯೋಜನೆ ನೀರಿನಿಂದ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಕ್ಷೇತ್ರದ ಜನರಿಗೆ ವೃಷಭಾವತಿ ಯೋಜನೆ ಬಗ್ಗೆ ಶಾಸಕರು ತಪ್ಪು ಸಂದೇಶ ನೀಡುತ್ತಿದ್ದಾರೆ. ವೃಷಭಾವತಿ ಯೋಜನೆ ನೀರು ಕೊಳಚೆ ನೀರು ಎಂದು ಸಾಕಷ್ಟು ಮಂದಿ ರಾಜಕೀಯ ವ್ಯಕ್ತಿಗಳು ಹಾಗೂ ಕಾಂಗ್ರೆಸ್ ಪಕ್ಷದವರೇ ತಿಳಿಸಿದ್ದಾರೆ. ಆದ್ದರಿಂದ ಕೂಡಲೇ ವೃಷಭಾವತಿ ಯೋಜನೆ ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದರು.
ವೃಷಭಾವತಿ ಯೋಜನೆ ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಸಭೆ ನಡೆಸುವ ವೇಳೆ ಶಾಸಕ ಎನ್.ಶ್ರೀನಿವಾಸ್ ಪೊಲೀಸರನ್ನು ಬಿಟ್ಟು ಸಭೆ ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ಪೊಲೀಸರು ಶಾಸಕರ ಕೈಗೊಂಬೆಯಂತೆ ಕುಣಿಯುತ್ತಿದ್ದಾರೆ. ಶಾಸಕರು ಹಾಗೂ ಪೊಲೀಸರ ದಬ್ಬಾಳಿಕೆಗೆ ಎನ್‌ಡಿಎ ಮುಖಂಡರು ಎಂದಿಗೂ ಜಗ್ಗುವುದಿಲ್ಲ ಎಂದು ಬಿಜೆಪಿ ತಾಲೂಕು ಅದ್ಯಕ್ಷ ಜಗದೀಶ್ ಚೌಧರಿ ಎಚಚ್ಚರಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ ಮಾತನಾಡಿ, ತಾಲೂಕಿನ ಬಹುತೇಕ ಮಂದಿ ಕೃಷಿಯನ್ನು ನಂಬಿ ಜೀವನ ಮಾಡುತ್ತಿದ್ದಾರೆ. ವೃಷಭಾವತಿ ಯೋಜನೆ ನೀರು ಯಾವುದೇ ರೀತಿಯಲ್ಲಿ ವೈಜ್ಞಾನಿಕವಾಗಿ ಸಂಸ್ಕರಿಸಿದ ನೀರಲ್ಲ. ಈ ಕೊಳಚೆ ನೀರಿನಿಂದ ಅರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜತೆಗೆ ತಾಲೂಕಿನ ಸಾರ್ವಜನಿಕರಿಗೆ, ರೈತರಿಗೆ ಜಾನುವಾರುಗಳಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಾ.ಕೆ.ಶ್ರೀನಿವಾಸ್, ನೆ.ಲ.ನರೇಂದ್ರಬಾಬು, ನಗರಸಭೆ ಸದಸ್ಯ ಸುನೇಲ್‌ಮೂಡ್, ನೆ.ಯೋ.ಪ್ರಾಧಿಕಾರ ಮಾಜಿ ಅದ್ಯಕ್ಷ ಎಸ್.ಮಲ್ಲಯ್ಯ, ಜೆಡಿಎಸ್ ತಾಲೂಕು ಅದ್ಯಕ್ಷ ಟಿ.ತಿಮ್ಮರಾಯಪ್ಪ, ಪ್ರಧಾನ ಕಾರ್ಯದರ್ಶಿ ಸುರೇಶ್, ಸೋಂಪುರ ಹೋಬಳಿ ಅದ್ಯಕ್ಷ ಮೋಹನ್‌ಕುಮಾರ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾಸುರೇಶ್, ಪ್ರಧಾನ ಕಾರ್ಯದರ್ಶಿ ಶೀಲಾ, ಮುಖಂಡ ಸಪ್ತಗಿರಿಶಂಕರ್ ನಾಯಕ್, ಪುಟ್ಟಣ್ಣ, ವರದನಾರಾಯಣ್, ಅರುಣ್‌ಗೌಡ, ಹ್ಯಾಡಾಳ್ ಹರ್ಷ, ಉಮೇಶ್ ಮತ್ತಿತರರಿದ್ದರು.