ಶಿರಸಿ: ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ವಿದ್ಯುತ್ ಸರಬರಾಜು ಕೇಂದ್ರದ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಬೇಕೆಂದು ಆಗ್ರಹಿಸಿ ತಾಲೂಕಿನ ಬನವಾಸಿ ಭಾಗದ ವಿದ್ಯುತ್ ಬಳಕೆದಾರರು ಹಾಗೂ ರೈತರು ಪಂಪ ವೃತ್ತದ ಬಳಿ ಜಮಾಯಿಸಿ, ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರ, ಹೆಸ್ಕಾಂ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ, ಇಲ್ಲಿನ ಜನರಿಗೆ ಭರವಸೆ ನೀಡಿದ ಬಳಿಕ ಪ್ರತಿಭಟನೆ ಮುಕ್ತಾಯಗೊಳಿಸುತ್ತೇವೆ. ಅಲ್ಲಿಯವರಗೆ ಹೋರಾಟ ನಡೆಯುತ್ತೇವೆ ಎಂದು ಪಟ್ಟು ಹಿಡಿದಾಗ ಶಿರಸಿ ತಹಸೀಲ್ದಾರ ಶೈಲೇಶ ಪರಮಾನಂದ ಸ್ಥಳಕ್ಕಾಗಮಿಸಿ, ಪ್ರತಿಭಟನಾಕಾರರನ್ನು ಮನವೋಲಿಸಿದರು.
ಜಯಶೀಲ ಗೌಡ ಮಾತನಾಡಿ, ಬನವಾಸಿಯಲ್ಲಿ ವಿದ್ಯುತ್ ಸರಬರಾಜು ಕೇಂದ್ರ ಇಲ್ಲದಿರುವುದು ಹಾಗೂ ವಿದ್ಯುತ್ ಸರಬರಾಜು ಕೇಂದ್ರ ಉದ್ಘಾಟನೆಯಾಗಲು ಸಾಕಷ್ಟು ಅಡೆ-ತಡೆಗಳು ಉಂಟಾಗಿರುವುದರಿಂದ ಸಮಸ್ಯೆಗೆ ಕಾರಣವಾಗಿದೆ. ಈ ಭಾಗದ ಸಾರ್ವಜನಿಕರು ಹಲವು ಬಾರಿ ಮನವಿ ನೀಡಿದ್ದರೂ ಪರಿಹಾರ ದೊರಕದಿರುವ ಕಾರಣ ಪ್ರತಿಭಟನೆಯ ಹಾದಿ ಹಿಡಿಯುವ ಪರಿಸ್ಥಿತಿ ಎದುರಾಗಿದೆ ಎಂದರು.ವಿನಯ ಗೌಡ, ಶಾಂತಲಾ ಕಾನಳ್ಳಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಶಿವಕುಮಾರ ದೇಸಾಯಿಗೌಡ, ಶಿವಾಜಿ ಕಾಳೇರಮನೆ, ವಿ.ಜಿ.ನಾಯಕ, ವೀರಭದ್ರ ಗೌಡ ತಿಗಣಿ, ವಿರೇಂದ್ರ ಗೌಡ ಬಾಶಿ, ಗಜಾನನ ಗೌಡ, ವಿಶ್ವನಾಥ ಹಾದಿಮನಿ ನೂರಾರು ರೈತರು ಭಾಗವಹಿಸಿದ್ದರು.
ಕರಾಳ ಉತ್ಸವ ಎಂದು ಆಚರಿಸಲು ಮುಂದಾಗುತ್ತೇವೆ?ವಿದ್ಯುತ್ ವ್ಯತ್ಯಯ ಸಮಸ್ಯೆಗೆ ಶೀಘ್ರವೇ ಪರಿಹಾರ ಕಂಡುಕೊಳ್ಳದಿದ್ದರೆ ಎ.೧೨, ೧೩ರಂದು ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಕದಂಬೋತ್ಸವವನ್ನು ಕರಾಳ ಉತ್ಸವ ಎಂದು ಆಚರಿಸಲು ಮುಂದಾಗುತ್ತೇವೆ. ಇದರಿಂದ ಮುಂದೆ ಆಗುವ ಅನಾಹುತಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.
ಕಳೆದ ೧೦ ವರ್ಷಗಳಿಂದ ಈ ಭಾಗದ ಜನರು ವೋಲ್ಟೇಜ್ ಸಮಸ್ಯೆ ಎದುರಿಸುತ್ತಿದ್ದಾರೆ. ಅದನ್ನು ಸರಿಪಡಿಸಲು ಸಾಧ್ಯವಾಗದೇ ಹೆಸ್ಕಾಂ ನಿರ್ಲಕ್ಷ್ಯವಹಿಸುತ್ತಿರುವುದಕ್ಕೆ ಅಧಿಕಾರಿಗಳನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.