ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಗದಗದಲ್ಲಿ ಬೃಹತ್ ಪ್ರತಿಭಟನೆ

KannadaprabhaNewsNetwork | Published : Apr 20, 2025 1:58 AM

ಸಾರಾಂಶ

ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಗದಗ-ಬೆಟಗೇರಿ ಅಂಜುಮನ್ ಸಂಸ್ಥೆ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಗದಗ: ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಗದಗ-ಬೆಟಗೇರಿ ಅಂಜುಮನ್ ಸಂಸ್ಥೆ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ಅಂಜುಮನ್‌-ಎ-ಇಸ್ಲಾಂ ಸಂಸ್ಥೆಯಿಂದ ನಗರದ ಮುಳಗುಂದ ನಾಕಾದಲ್ಲಿರುವ ಶಾಹಿ ಈದ್ಗಾ ಮೈದಾನದಿಂದ ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ಪ್ರಾರಂಭಿಸಿ ಮುಳಗುಂದ ನಾಕಾ, ಟಿಪ್ಪುಸುಲ್ತಾನ್ ಸರ್ಕಲ್ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಬೃಹತ್‌ ಪ್ರತಿಭಟನೆ ನಡೆಸುವ ಮೂಲಕ ಯಾವುದೇ ಕಾರಣಕ್ಕೂ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ನಾವು ಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ಕೋಮುವಾದಿ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮೌಲಾನ್‌ ಅಬ್ದುಲಸಮ್ಮದ ಜಕಾತಿ ಮಾತನಾಡಿ, ಇಡೀ ದೇಶದಲ್ಲಿ ಕೋಟ್ಯಂತರ ಮುಸ್ಲಿಂ ಸಮುದಾಯದ ಜನರು ಬೀದಿಗಿಳಿದು ವಿವಾದಾತ್ಮಕ ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕೆಂದು ಕೇಂದ್ರ ಸರ್ಕಾರದ ವಿರುದ್ಧ ಹೋರಾಟಗಳನ್ನು ನಡೆಸಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ನಾವು ಮಾಡಿದ್ದೇ ಸರಿ ಎಂದು ತಮ್ಮ ಬೆನ್ನು ತಟ್ಟಿಕೊಳ್ಳುತ್ತಿದೆ. ಇಂತಹ ಸರ್ವಾಧಿಕಾರಿ ಧೋರಣೆಯನ್ನು ನಾವು ಖಂಡಿಸುತ್ತೇವೆ, ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಹಿಂದಕ್ಕೆ ಪಡೆಯವರೆಗೊ ನಾವು ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೌಲಾನಾ ಶಬ್ಬೀರಅಹ್ಮದ ಬೋದ್ಲೇಖಾನ ಮಾತನಾಡಿ, ವಕ್ಫ್ ಎಂದರೆ ಮುಸ್ಲಿಂ ಕಾನೂನಿನಿಂದ ಧಾರ್ಮಿಕ ದತ್ತಿ ದಾನ ಮಾಡಿರುವ ಆಸ್ತಿಗಳು ಎಂದು ಗುರುತಿಸಲ್ಪಟ್ಟ ಈ ಆಸ್ತಿಗಳು ಧಾರ್ಮಿಕ ಮಸೀದಿಗಳು, ದರ್ಗಾಗಳು, ಈದ್ಗಾಗಳು ಮತ್ತು ಸ್ಮಶಾನಗಳನ್ನು ನಿರ್ವಹಿಸುವುದಾಗಿದೆ. ದತ್ತಿ ಮತ್ತು ಧಾರ್ಮಿಕ ಸಂಸ್ಥೆಗಳು ಇದರ ಧಾರ್ಮಿಕ ಆಚರಣೆಗಳು ನಮ್ಮ ದೇಶದ ಸಂವಿಧಾನದ ಸಮಕಾಲೀನ ಪಟ್ಟಿಯಲ್ಲಿ ಬರುತ್ತದೆ. ನಮ್ಮ ಧಾರ್ಮಿಕ ಸ್ವತಂತ್ರವನ್ನು ಕಸಿದುಕೊಳ್ಳುವ ಹುನ್ನಾರ ಕೇಂದ್ರ ಸರ್ಕಾರದಾಗಿದೆ. ನಮ್ಮ ದೇಶದ ಸಂವಿಧಾನವು ನೀಡಿರುವ ಸಮಾನತೆಯ ಹಕ್ಕು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ತದ್ವಿರುದ್ಧವಾಗಿ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದೆ. ವಕ್ಫ್ ಸುಧಾರಣೆಯು ಸರ್ಕಾರದ ಉದ್ದೇಶ ಅಲ್ಲ, ಬದಲಿಗೆ ವಕ್ಫ್ ಮೇಲೆ ಕೇಂದ್ರದ ನಿಯಂತ್ರಣ ಹೇರಿ ಅದರ ನಿರ್ವಹಣೆಯನ್ನು ಕೈಗೆ ತೆಗೆದುಕೊಂಡು ದೇಶದಲ್ಲಿರುವ ವಕ್ಫ್ ಆಸ್ತಿಗಳನ್ನು ಮಾರಾಟ ಮಾಡುವ ಕೆಟ್ಟ ಉದ್ದೇಶವಾಗಿದೆ. ಕೂಡಲೇ ಇಂತಹ ಸಂವಿಧಾನ ವಿರೋಧಿ, ಜನವಿರೋಧಿ ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಅಂಜುಮನ್‌ ಸಂಸ್ಥೆ ಅಧ್ಯಕ್ಷ ಮಹ್ಮದಯೂಸುಫ ನಮಾಜಿ ಮಾತನಾಡಿ, ನಮ್ಮ ರಾಜ್ಯದಲ್ಲಿ ಎಲ್ಲಾ ಜಾತಿ, ಧರ್ಮದ ಜನರು ಯಾವುದೇ ಭೇದ-ಭಾವಗಳ ಇಲ್ಲದೇ ಒಂದಾಗಿ ತಮ್ಮ ಜೀವನವನ್ನು ನಡೆಸುತ್ತ ಬಂದಿದ್ದಾರೆ. ರಾಜ್ಯದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಹಬ್ಬಗಳಲ್ಲಿ ಎಲ್ಲಾ ಸಮುದಾಯದ ಜನರು ಜಾತಿ, ಧರ್ಮಗಳನ್ನು ಬಿಟ್ಟು ಒಂದಾಗಿ ಹಬ್ಬಗಳನ್ನು ಆಚರಿಸುತ್ತ ಬಂದಿರುವುದು ನಮ್ಮ ರಾಜ್ಯದ ಸೌಹಾರ್ದತೆಯ ಸಂಕೇತವಾಗಿದೆ. ಅಂತಹ ರಾಜ್ಯದಲ್ಲಿ ಜಾತಿವಾದಿ, ಕೋಮುವಾದಿ ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮ ರಾಜಕೀಯ ಲಾಭಕ್ಕಾಗಿ ಪದೇ-ಪದೇ ಒಂದು ಸಮುದಾಯವನ್ನು ಟೀಕಿಸುವುದು, ಬೈಯುವುದು, ಧಾರ್ಮಿಕ ಆಚರಣೆಗಳ ವಿರುದ್ಧ ನಿಂದಿಸುವುದನ್ನು ಮಾಡುತ್ತ ರಾಜ್ಯದಲ್ಲಿ ಕೋಮು ಘರ್ಷಣೆಗೆ ಕುಮ್ಮಕು ನೀಡುತ್ತ ಬಂದಿರುವ ಯತ್ನಾಳ ಪ್ರವಾದಿ ಹಜರತ್ ಮೊಹ್ಮಮದ ಪೈಗಂಬರ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದು ಇಡೀ ಮುಸ್ಲಿಂ ಸಮುದಾಯಕ್ಕೆ ನೋವುಂಟು ಆಗಿದೆ. ಸರ್ವಜನಾಂಗದ ಶಾಂತಿಯ ತೋಟದಂತಹ ನಮ್ಮ ರಾಜ್ಯದಲ್ಲಿ ಜಾತಿ-ಧರ್ಮಗಳ ಮಧ್ಯ ವಿಷ ಬೀಜ ಬಿತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಕೋಮು ಪ್ರಚೋದನೆಗೆ ಅವಕಾಶ ನೀಡದೇ ಇಂತಹ ಜಾತಿವಾದಿ, ಕೋಮುವಾದಿ ಯತ್ನಾಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮೌಲಾನಾ ಶಮಶುದ್ದಿನ ಅಣ್ಣಿಗೇರಿ, ಮಾಜಿ ನಗರಸಭೆ ಸದಸ್ಯ ಎಂ.ಸಿ. ಶೇಖ, ನಗರಸಭೆ ಸದಸ್ಯ ಬರಕತಅಲಿ ಮುಲ್ಲಾ, ಜೂನಸಾಬ ನಮಾಜಿ, ಮೆಹಬೂಬಸಾಬ (ಚಿಮ್ಮಿ) ನದಾಫ, ಮುನ್ನಾ ರೇಶ್ಮಿ, ಬಾಬಾಜಾನ ಬಳಗಾನೂರ, ಇಮ್ತಿಯಾಜ ಆರ್. ಮಾನ್ವಿ, ಇಲಿಯಾಸ ಖೈರಾತಿ, ರಫೀಕ ಜಮಾಲಖಾನವರ, ಮುನ್ನಾ ಶೇಖ, ಮಹ್ಮದಹನೀಫ ಶಾಲಗಾರ, ಅಶ್ಫಾಕಅಲಿ ಹೊಸಳ್ಳಿ, ಅನ್ವರ ಶಿರಹಟ್ಟಿ, ಸೈಯದ ಖಾಲೀದ ಕೊಪ್ಪಳ, ಎಂ.ಎಂ. ಮಾಳೆಕೊಪ್ಪ, ಜೂನೇದ ಉಮಚಗಿ, ಉಮರಫಾರುಖ ಹುಬ್ಬಳ್ಳಿ, ಎಂ.ಬಿ. ನದಾಫ, ಸಮೀರ ಜಮಾದಾರ ಹಾಗೂ ಇತರರು ಇದ್ದರು.

Share this article