ಅಕ್ರಮ ಮರಳು ದಂಧೆ ವಿರುದ್ಧ ಮಂಗಳೂರಲ್ಲಿ ಭಾರಿ ಪ್ರತಿಭಟನೆ

KannadaprabhaNewsNetwork |  
Published : Sep 28, 2024, 01:21 AM IST
ಮಂಗಳೂರಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಭಾರಿ ಪ್ರತಿಭಟನೆ  | Kannada Prabha

ಸಾರಾಂಶ

ಕೆಥೋಲಿಕ್‌ ಸಭಾ ನೇತೃತ್ವದಲ್ಲಿ ಬಲ್ಮಠದಿಂದ ಮಿನಿ ವಿಧಾನಸೌಧ ವರೆಗೆ ಮೆರವಣಿಗೆ ನಡೆದು ಬಳಿಕ ಪ್ರತಿಭಟನಾ ಸಭೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಹೊರವಲಯದ ಪಾವೂರು ಉಳಿಯ, ಉಳ್ಳಾಲ ಪೊಯ್ಯೆ ಮೊದಲಾದ ಕುದ್ರು (ದ್ವೀಪ)ಗಳನ್ನು ಮರಳು ಮಾಫಿಯಾ ನಾಶಪಡಿಸುತ್ತಿರುವುದನ್ನು ವಿರೋಧಿಸಿ ಮಂಗಳೂರು ಕೆಥೋಲಿಕ್‌ ಸಭಾ ನೇತೃತ್ವದಲ್ಲಿ ಸ್ಥಳೀಯ ದ್ವೀಪವಾಸಿಗಳು, ಪ್ರಗತಿಪರ ಸಂಘಟನೆಗಳು ಸೇರಿ ಶುಕ್ರವಾರ ಮಂಗಳೂರಲ್ಲಿ ಭಾರಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ವಿರುದ್ಧ ಧಿಕ್ಕಾರ ಕೂಗಿದರು. ಜಿಲ್ಲಾಡಳಿತದ ಆದೇಶವನ್ನು ನಿರ್ಲಕ್ಷಿಸಿ ಮರಳು ದಂಧೆಕೋರರು ಪೋಲೀಸರು, ಗಣಿ ಇಲಾಖೆಯ ಬೆಂಬಲದೊಂದಿಗೆ ನಿಷೇಧಿತ ಪ್ರದೇಶದಲ್ಲಿ ಮರಳುಗಾರಿಕೆ ಮುಂದುವರಿಸುತ್ತಿರುವುದಕ್ಕೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಜಿಲ್ಲಾಧಿಕಾರಿ ನೇಮಿಸಿದ ಸಮಿತಿ 2 ತಿಂಗಳಲ್ಲಿ ತನಿಖಾ ವರದಿ ಸಲ್ಲಿಸಿದೆ. ತನಿಖಾ ವರದಿಯಲ್ಲಿ ಮರಳು ದಂಧೆ ತಡೆಗೆ ಹಲವು ಶಿಫಾರಸು ಮಾಡಿದೆ. ದ್ವೀಪವಾಸಿ 40 ಕುಟುಂಬಗಳು ಮರಳು ಮಾಫಿಯಾ ಅಟ್ಟಹಾಸಕ್ಕೆ ಅಕ್ಷರಶಃ ನಲುಗಿವೆ. 10-15 ಕುಟುಂಬಗಳು ಊರು ಬಿಟ್ಟಿವೆ. ಅಕ್ರಮ ಮರಳುಗಾರಿಕೆ ಗೂಗಲ್‌ ಮ್ಯಾಪ್‌ನಲ್ಲೂ ದಾಖಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದು ಕೇವಲ ಪಾವೂರು, ಉಳಿಯ ದ್ಚೀಪದಲ್ಲಿ ನಡೆಯುವ ದಂಧೆಯಲ್ಲ, ಜಿಲ್ಲೆಯಲ್ಲಿ ಎಲ್ಲ ಕಡೆಗಳಲ್ಲೂ ಮರಳು ಮಾಫಿಯಾ ಅಟ್ಟಹಾಸ ಮೆರೆಯುತ್ತಿದೆ. ಜಿಲ್ಲೆಯ ದ್ವೀಪಗಳಷ್ಟೆ ಅಲ್ಲ, ಸೇತುವೆಗಳೂ ಅಕ್ರಮ ಮರಳುಗಾರಿಕೆಯಿಂದ ದುರ್ಬಲಗೊಂಡು ಕುಸಿಯು ಸ್ಥಿತಿ ತಲುಪಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಜಿಲ್ಲಾಡಳಿತ, ಜನಪ್ರತಿನಿಧಿಗಳು ಈಗಲಾದರು ಎಚ್ಚೆತ್ತುಕೊಳ್ಳಬೇಕು, ಇಲ್ಲಿನ ಎರಡು ಪ್ರಬಲ ಪಕ್ಷಗಳ ಒಳಗಡೆಯೂ ಮರಳು ಮಾಫಿಯಾ ನುಸುಳಿದೆ. ಜನಪ್ರತಿನಿಧಿಗಳ ಎಡ ಬಲಗಳಲ್ಲಿ ಇವರೇ ಇರುತ್ತಾರೆ. ಅಕ್ರಮ ಮರಳು ದಂಧೆ, ಸಾಗಾಟಕ್ಕೆ ಎಸ್ಕಾರ್ಟ್ ಕೊಡುವ ಪೊಲೀಸ್ ಇಲಾಖೆ ಅಕ್ರಮವನ್ನು ಮಟ್ಟಹಾಕಬೇಕು. ಇನ್ನೂ ಅಕ್ರಮ ಮುಂದುವರಿದರೆ ಆಯಾ ಪೊಲೀಸ್ ಠಾಣೆಗಳ ಮುಂಭಾಗ ಪ್ರತಿಭಟನೆ ನಡೆಯಲಿದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು. ಹೋರಾಟಗಾರರ ಪರವಾಗಿ ಡಿವೈಎಫ್‌ಐ ಮುಖಂಡ ಮುನೀರ್‌ ಕಾಟಿಪಳ್ಳ ಮಾತನಾಡಿದರು.

ಕೆಥೋಲಿಕ್‌ ಸಭಾ ನೇತೃತ್ವದಲ್ಲಿ ಬಲ್ಮಠದಿಂದ ಮಿನಿ ವಿಧಾನಸೌಧ ವರೆಗೆ ಮೆರವಣಿಗೆ ನಡೆದು ಬಳಿಕ ಪ್ರತಿಭಟನಾ ಸಭೆ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!