ಹೊಸಕೋಟೆ: ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಅಪೌಷ್ಟಿಕತೆ, ರಕ್ತಹೀನತೆಯಿಂದ ಬಳಲುತ್ತಿದ್ದು, ಅವರಲ್ಲಿ ಪೌಷ್ಟಿಕತೆ ಹೆಚ್ಚಿಸಿ ಸದೃಢರನ್ನಾಗಿ ಮಾಡಲು ಪೋಷಣ್ ಮಾಸಾಚರಣೆ ಆಯೋಜಿಸಲಾಗುತ್ತಿದೆ. ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮವಹಿಸಬೇಕು ಎಂದು ಸಿಡಿಪಿಒ ಶಿವಮ್ಮ ತಿಳಿಸಿದರು.
ಆರೋಗ್ಯವಂತ ಮಕ್ಕಳಿಂದ ದೇಶ ಸದೃಢವಾಗುತ್ತದೆ. ಗರ್ಭಿಣಿಯರಿಗೆ ರಾಷ್ಟ್ರೀಯ ಪೋಷಣ್ ಅಭಿಯಾನದ ಮೂಲಕ ಪೌಷ್ಟಿಕಾಂಶಭರಿತ ಆಹಾರ ನೀಡಲಾಗುತ್ತಿದೆ. ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾಗೊಳಿಸಬೇಕು. ಮಹಿಳೆಯರು ಯಾವ ರೀತಿಯಲ್ಲಿ ಪೌಷ್ಟಿಕ ಆಹಾರ ಸೇವಿಸಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಹೇಗೆ ನೀಡಬೇಕು ಎಂಬುದರ ಕುರಿತು ಈ ಪೋಷಣ್ ಅಭಿಯಾನದ ಸಂದರ್ಭದಲ್ಲಿ ತಿಳಿಸಿಕೊಡಬೇಕು ಎಂದು ಹೇಳಿದರು.
ಎಸಿಡಿಪಿಒ ಸಂದ್ಯಾ ಆನಂದ್ ಮಾತನಾಡಿ, ಗರ್ಭಿಣಿಯರಲ್ಲಿನ ರಕ್ತಹೀನತೆ ನಿವಾರಣೆ ಹಾಗೂ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವುದೇ ರಾಷ್ಟ್ರೀಯ ಪೋಷಣ್ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ರಕ್ತಹೀನತೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಸೆಪ್ಟೆಂಬರ್ ತಿಂಗಳಲ್ಲಿ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಯೋಜನೆ ಅಡಿ ಇರುವ ತಾಯಿ ಮತ್ತು ಮಗುವಿನ ಸಂಪೂರ್ಣ ಆರೈಕೆಯ ಮಾರ್ಗಸೂಚಿಗಳ ಬಗ್ಗೆ ಜನಸಾಮಾನ್ಯರಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಅರಿವು ಮೂಡಿಸಬೇಕು. ರಕ್ತಹೀನತೆ, ಸ್ವಚ್ಛತೆ ಬಗ್ಗೆ ಪ್ರತಿ ಗ್ರಾಮ ಮಟ್ಟದಲ್ಲಿ ಜಾಥಾ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದರು.ಈ ಕಾರ್ಯಕ್ರಮದಲ್ಲಿ ಹತ್ತು ಜನ ಗರ್ಭಿಣಿ ಮಹಿಳೆಯರಿಗೆ ಸಿಮಂತ ಹಾಗೂ ಆರು ತಿಂಗಳು ತುಂಬಿದ ಮಕ್ಕಳಿಗೆ ಅನ್ನಪ್ರಾಶನ, ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಸಂಯೋಜಕರಾದ ಆನಂದ್ , ಗ್ರಾಮದ ಮುಖಂಡ ಟಿ.ಸಿ ಮುನಿರಾಜು, ಮೇಲ್ವಿಚಾರಕಿ ಭಾರತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಜಯಂತಿ ಪ್ರಶಾಂತ್, ಗ್ರಾಮದ ಮುಖಂಡರಾದ ಶ್ರೀನಿವಾಸ, ಶಾಲಾ ಮುಖ್ಯೋಪಾಧ್ಯಾಯರಾದ ನಾಗರತ್ನ, ಆಶಾ ಕಾರ್ಯಕರ್ತೆ ಅಭಿಲಾಶ, ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರಾದ ಅಭಾಸಿಂಗ್, ಎಂ.ಕೆ ಸುಗುಣ ಹಾಗೂ ಅಂಗನವಾಡಿ ಸಹಾಯಕರು, ದೇವನಗುಂದಿ ವೃತ್ತದ ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು, ಪೋಷಕರು, ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.