ಮುಡಾ ಹಗರಣ ವಿರೋಧಿಸಿ ಮೈಸೂರಿನಲ್ಲಿ 12ರಂದು ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Jul 12, 2024, 01:34 AM IST
ನವೀನ್‌ ಗುಳಗಣ್ಣವರ | Kannada Prabha

ಸಾರಾಂಶ

ಮೈಸೂರು ಮೂಡಾ ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜು. 12ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ ಹೇಳಿದರು.

ಕೊಪ್ಪಳ: ಮೈಸೂರು ಮೂಡಾ ಹಗರಣದಲ್ಲಿ ಅವರ ಪತ್ನಿಯೇ ಫಲಾನುಭವಿಯಾಗಿರುವುದರಿಂದ ಅವರೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪ ಎದುರಿಸುತ್ತಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜು. 12ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಜನರು ಭಾಗಿಯಾಗಲಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿಂದಲೂ ಅಪಾರ ಸಂಖ್ಯೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿರುವುದಾಗಿ ಹೇಳಿದರು.

ಸಿದ್ದರಾಮಯ್ಯ ಅವರು ಕ್ಲೀನ್ ಹ್ಯಾಂಡ್ ಎಂದು ಹೇಳಿಕೊಳ್ಳುತ್ತಾರೆ. ಹಾಗೊಂದು ವೇಳೆ ಅವರು ಕ್ಲೀನ್ ಹ್ಯಾಂಡ್ ಆಗಿದ್ದೇ ನಿಜವಾಗಿದ್ದರೆ ರಾಜೀನಾಮೆ ನೀಡಿ, ಸಿಬಿಐ ಅಥವಾ ನ್ಯಾಯಾಂಗ ತನಿಖೆ ಎದುರಿಸಿ, ತಾವೂ ಕ್ಲೀನ್ ಹ್ಯಾಂಡ್ ಎನ್ನುವುದನ್ನು ಸಾಬೀತು ಮಾಡಿಕೊಳ್ಳಲಿ ಎಂದು ಸವಾಲು ಹಾಕಿದರು.

ಬಿಜೆಪಿಯವರು ಇಡೀ ದಾಳಿ ಮಾಡಿಸುತ್ತಾರೆ, ಇದು ಅವರಿಗೆ ಚಟವಾಗಿದೆ ಎಂದು ಕಾಂಗ್ರೆಸ್‌ನವರು ಆರೋಪಿಸುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿ ಅವರು, ಕಾಂಗ್ರೆಸ್‌ನವರಿಗೆ ಹಗರಣ ಮಾಡುವುದೇ ಚಟವಾಗಿದೆ.

ಅವರು ಹಗರಣ ಮಾಡುತ್ತಿರುವುದರಿಂದಲೇ ಅವರ ಮೇಲೆ ಪದೇ ಪದೇ ದಾಳಿಯಾಗುತ್ತಿದೆ ಎಂದರು.

ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ಭೂಮಿ ನೀಡಿರುವ ಕುರಿತು ತನಿಖೆಯಾಗಬೇಕಾಗಿದೆ. ಅವರು ಈ ಹಿಂದೆ ಈ ಆಸ್ತಿಯ ವಿವರವನ್ನು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಸಲ್ಲಿಕೆ ಮಾಡಿಲ್ಲ, ಆನಂತರ ವಿವರ ನೀಡಿದ್ದಾರೆ. ಮಲ್ಲಿಕಾರ್ಜುನಸ್ವಾಮಿ ಎನ್ನುವವರು ಮುಖ್ಯಮಂತ್ರಿ ಅವರ ಪತ್ನಿಗೆ ದಾನ ನೀಡಿದ್ದಾರೆ ಎನ್ನುತ್ತಾರೆ. ಆದರೆ, ಮಲ್ಲಿಕಾರ್ಜುನಸ್ವಾಮಿ ಅವರಿಗೆ ಈ ಭೂಮಿ ಬಂದಿದ್ದು ಎಲ್ಲಿಂದ ಎನ್ನುವುದು ತನಿಖೆಯಾಬೇಕು ಎಂದು ಆಗ್ರಹಿಸಿದರು.

ಎಸ್‌ಐಟಿ ತನಿಖೆ ಸರಿಯಾಗಿ ಮಾಡುತ್ತಿಲ್ಲ ಮತ್ತು ಮಾಡುವುದು ಸಾಧ್ಯವೇ ಇಲ್ಲ. ಮುಖ್ಯಮಂತ್ರಿ ಮೇಲೆ ಬಂದಿರುವ ಆರೋಪದ ಕುರಿತು ಸರ್ಕಾರದ ಅಧೀನ ಸಂಸ್ಥೆ ತನಿಖೆ ಮಾಡಿದರೆ ಸತ್ಯ ಬಯಲಿಗೆ ಬರಲು ಸಾಧ್ಯವಿಲ್ಲ ಎಂದರು.

ವಾಲ್ಮೀಕಿ ನಿಗಮದ ಅಕ್ರಮವೂ ದೊಡ್ಡ ಪ್ರಮಾಣದಲ್ಲಿ ನಡೆದಿದ್ದು, ಅದರಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಮತ ಇಲ್ಲದೆ ಇರಲು ಸಾಧ್ಯವೇ ಇಲ್ಲ. ಕೇವಲ ಒಂದು ವರ್ಷದಲ್ಲಿ ಹಗರಣಗಳ ಸುರಿಮಳೆಯೇ ಆಗುತ್ತಿದೆ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಡಾ. ಬಸವರಾಜ ಕ್ಯಾವಟರ, ಪ್ರಮೋದ, ಸೋಮಶೇಖಗೌಡ ಇದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು