ತುಷ್ಟೀಕರಣ ರಾಜಕೀಯದ ವಿರುದ್ಧ ಜುಲೈ 16ರಂದು ಬೃಹತ್ ಪ್ರತಿಭಟನೆ- ಸಂಸದ ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Jul 07, 2026, 02:30 AM IST
ರಟ್ಟಿಹಳ್ಳಿ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆಯಾದ ಶಿವಾಜಿರಾವ್ ಬೈರೋಜಿ ಅವರ ಮನೆಗೆ  ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರದ ತುಷ್ಟೀಕರಣ ರಾಜಕಾರಣ, ಕೋಮು ಸೌಹಾರ್ದತೆ ಕೆಡಿಸುವ ಸಂಚು ಹಾಗೂ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ವಿರುದ್ಧ ಬರುವ ಜು.16ರಂದು ಹಾವೇರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ರಟ್ಟಿಹಳ್ಳಿ: ರಾಜ್ಯ ಸರ್ಕಾರದ ತುಷ್ಟೀಕರಣ ರಾಜಕಾರಣ, ಕೋಮು ಸೌಹಾರ್ದತೆ ಕೆಡಿಸುವ ಸಂಚು ಹಾಗೂ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ವಿರುದ್ಧ ಬರುವ ಜು.16ರಂದು ಹಾವೇರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆಯಾದ ಶಿವಾಜಿರಾವ್ ಬೈರೋಜಿ ಅವರ ಮನೆಗೆ ಸೋಮವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ​ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಸರಣಿ ಅಪರಾಧ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಘಟನೆಗಳ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನರೇಗಲ್ ಮತ್ತು ರಟ್ಟಿಹಳ್ಳಿ ಕೊಲೆ ಪ್ರಕರಣವನ್ನು ವೈಯಕ್ತಿಕ ಗಲಾಟೆ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ತಂದೆ-ಮಗನ ಮೇಲೆ ನಡೆದಿರುವ ಹಲ್ಲೆ ಕೇವಲ ಸಣ್ಣ ಕಾರಣಕ್ಕೆ ಅಲ್ಲ. ಒಂದು ನಿರ್ದಿಷ್ಟ ಕೋಮಿನ ಜನರು ಅತ್ಯಂತ ಅಮಾನುಷ ಹಾಗೂ ಕ್ರೂರವಾಗಿ ಮರ್ಮಾಂಗಕ್ಕೆ ಒದ್ದು ತಂದೆಯನ್ನು ಕೊಲೆ ಮಾಡಿದ್ದಾರೆ ಎಂದರೆ, ಅವರ ಈ ಧೈರ್ಯದ ಹಿಂದೆ ರಾಜಕೀಯ ಕುಮ್ಮಕ್ಕಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.

ಭರತ್ ಮತ್ತು ಅವರ ತಂದೆ ಕಳೆದ 60 ವರ್ಷಗಳಿಂದ ಅಲ್ಲಿ ವ್ಯಾಪಾರ ಮಾಡಿಕೊಂಡಿದ್ದಾರೆ. ಮೊಟ್ಟೆ ಕೇಳಲು ಬಂದು, ಹಣದ ವಿಚಾರವಾಗಿ ಗಲಾಟೆ ಮಾಡಿದ್ದು ಕೇವಲ ಒಂದು ಸಣ್ಣ ಕಾರಣವಷ್ಟೇ. ಆದರೆ ಇದರ ಹಿಂದಿನ ಅಸಲಿ ಉದ್ದೇಶ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಿ, ಅಲ್ಲಿರುವ ಎಲ್ಲಾ ಅಂಗಡಿಗಳನ್ನು ತಮ್ಮ ವಶಕ್ಕೆ ಪಡೆಯುವುದಾಗಿದೆ ಎಂದು ಆರೋಪಿಸಿದರು. ಕುಮ್ಮಕ್ಕಿನಿಂದ ಹೆಚ್ಚಿದ ಧೈರ್ಯ: ಇಂತಹ ಶಕ್ತಿಗಳಿಗೆ ದೊಡ್ಡ ಪ್ರಮಾಣದಲ್ಲಿ ರಾಜಕೀಯ ಬೆಂಬಲ ಮತ್ತು ಕುಮ್ಮಕ್ಕು ಸಿಗುತ್ತಿರುವುದರಿಂದಲೇ ಇಷ್ಟೊಂದು ಧೈರ್ಯ ಬಂದಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಸಣ್ಣ ಕೋಮು ಗಲಭೆಯೂ ನಡೆದಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ, ವಿಶೇಷವಾಗಿ 7-8 ಗಂಭೀರ ಪ್ರಕರಣಗಳು ನಡೆದಿವೆ ಎಂದರು.

​ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಅತ್ಯಾಚಾರ ಎಸಗಿದ ಯುವಕರು ಬೇಲ್ ಮೇಲೆ ಬಂದಾಗ, ಏನೋ ಯುದ್ಧ ಗೆದ್ದು ಬಂದವರಂತೆ ಮೆರವಣಿಗೆ ನಡೆಸಿ, ತಲವಾರ್ ಪ್ರದರ್ಶಿಸಿದ್ದಾರೆ. ಈ ವೇಳೆ ಪೊಲೀಸರು ಕಣ್ಣು ಮುಚ್ಚಿ ಕುಳಿತಿದ್ದರು. ​ಶಿಗ್ಗಾಂವಿಯಲ್ಲಿ ಹಗಲು ಹೊತ್ತಿನಲ್ಲೇ ಭೀಕರ ಕೊಲೆ ನಡೆದಿದೆ. ​ಹಾನಗಲ್ ತಾಲೂಕಿನಲ್ಲಿ 4-5 ಲವ್ ಜಿಹಾದ್ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ನರೇಗಲ್ ಹಾಗೂ ಕಾಗಿನೆಲ್ಲಿಯಲ್ಲೂ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದು ಹೇಳಿದರು.

​ಜಿಲ್ಲೆಯಲ್ಲಿ ಓಸಿ, ಜೂಜಾಟ ಸೇರಿದಂತೆ ಅಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿವೆ. ಮಾಧ್ಯಮಗಳು ಹಾಗೂ ಸಾರ್ವಜನಿಕರು ವಿಡಿಯೋ ಮಾಡಿ ಕೊಟ್ಟರೂ ಪೊಲೀಸರು ಕೇವಲ ನಾಮ್ ಕೇ ವಾಸ್ತೆ ಕ್ರಮ ಜರುಗಿಸುತ್ತಿದ್ದಾರೆ. ಇದಕ್ಕೆ ಕಾರಣ ಪೊಲೀಸರು ಹಾಗೂ ರಾಜಕೀಯ ನಾಯಕರು ಇದರಲ್ಲಿ ಶಾಮೀಲಾಗಿದ್ದಾರೆ. ಎಲ್ಲವೂ ಪರ್ಸೆಂಟೇಜ್ ಲೆಕ್ಕದಲ್ಲೇ ನಡೆಯುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.

​ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಅರುಣಕುಮಾರ ಪೂಜಾರ, ಪಾಲಾಕ್ಷಗೌಡ ಪಾಟೀಲ, ಭೋಜರಾಜ ಕರೂದಿ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಭಯ ಗುರುಗಳು ಅದ್ಭುತ ರತ್ನಗಳು: ಮಲ್ಲಿಕಾರ್ಜುನ ಶ್ರೀ
ಕುಸ್ತಿ ಕ್ರೀಡೆಗೆ ಪ್ರೋತ್ಸಾಹ ಸಿಗಲಿ: ಕಲ್ಲಯ್ಯಜ್ಜನವರು