ಕನ್ನಡಪ್ರಭ ವಾರ್ತೆ ಶಿರಾ
ಬುಧವಾರ ನಗರದ ಎಪಿಎಂಸಿ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಭದ್ರ ಮೇಲ್ದಂಡೆ ಯೋಜನೆಯ ಕಾಮಗಾರಿಗಳು ಕಳೆದ ೨೬ ವರ್ಷ ಕಳೆದರೂ ಪೂರ್ಣಗೊಳಿಸಿ ನೀರನ್ನು ಕೊಡಲು ಸರ್ಕಾರಗಳು ವಿಫಲವಾಗಿವೆ. ತುಮಕೂರು ನಾಲೆಯ ಯೋಜನೆಗೆ ಒಳಪಡುವ ಹೊಸದುರ್ಗ, ಚಿಕ್ಕನಾಯಕನಹಳ್ಳಿ, ಶಿರಾ ತಾಲೂಕಿನಲ್ಲಿ ಅಂತರ್ಜಲ ಕುಸಿದಿದ್ದು, ಕುಡಿಯುವ ನೀರು ಮತ್ತು ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಕಷ್ಟವಾಗಿದೆ. ಈ ವರ್ಷ ಸಮರ್ಪಕ ಮಳೆ ಬಾರದೆ ಮುಂಗಾರು ವಿಫಲವಾಗಿದೆ. ನೂರಾರು ಕೊಳವೆ ಬಾವಿಗಳು ಬತ್ತಿ ಹೋಗಿವೆ. ಕೇಂದ್ರ ಸರಕಾರ ಭದ್ರ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ೫೩೦೦ ಕೋಟಿ ಅನುದಾನ ಘೋಷಣೆ ಮಾಡಿ ೩ ವರ್ಷ ಕಳೆದರೂ ಹಣ ಬಿಡುಗಡೆ ಮಾಡಿಲ್ಲ. ಆದ್ದರಿಂದ ಕುಂಟುತ್ತ ಸಾಗುತ್ತಿರುವ ಭದ್ರ ಮೇಲ್ದಂಡೆ ಯೋಜನೆ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿ ಅಡೆತಡೆಗಳನ್ನು ನಿವಾರಿಸಿ ನೀರು ಹರಿಸಲು ರೈತರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮಹಂತೇಶ್.ಬಿ ಅವರು ಮಾತನಾಡಿ, ತುಮಕೂರು ನಾಲೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ಹಣ ಬಿಡುಗಡೆ ಮಾಡಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು. ಈ ಯೋಜನೆಯಲ್ಲಿ ಭೂಮಿ ಕಳೆದುಕೊಂಡಿರುವ ರೈತರಿಗೆ ಹಣ ಬಿಡುಗಡೆ ಮಾಡಬೇಕು. ಯೋಜನೆಯಲ್ಲಿ ಸೇರದೆ ಕೈಬಿಟ್ಟಿರುವ ಕೆರೆಗಳನ್ನು ಯೋಜನೆ ವ್ಯಾಪ್ತಿಗೆ ಸೇರಿಸಬೇಕು. ಹೇಮಾವತಿ ನಾಲೆಯಿಂದ ಕಳ್ಳಂಬೆಳ್ಳ ಕಾಲುವೆಗೆ ನೀರು ಬಿಡುಗಡೆ ಮಾಡಿ ಕಳ್ಳಂಬೆಳ್ಳ, ಶಿರಾ, ಮದಲೂರು ಸೇರಿದಂತೆ ೧೫ ಕೆರೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹಸಿರು ಸೇನೆ ತಾಲೂಕು ಅಧ್ಯಕ್ಷ ಗಿರೀಶ್.ಬಿ.ಟಿ., ಕಸಬಾ ಯೋಬಳಿ ಅಧ್ಯಕ್ಷ ನಾಗರಾಜು, ಎಐಬಿಎಸ್‌ಪಿ ಜಿಲ್ಲಾ ಸಂಯೋಜಕ ಜಿ.ಎಸ್.ಮಂಜುನಾಥ್, ತಾಲೂಕು ಅಧ್ಯಕ್ಷ ವೀರಕ್ಯಾತಯ್ಯ, ಉಪಾಧ್ಯಕ್ಷೆ ರಂಗಮ್ಮ, ರೈತ ಮುಖಂಡರಾದ ಹನುಮಂತಪ್ಪ, ಚಿಕ್ಕಗೂಳ ನಾಗರಾಜು, ತೇರುಮಲ್ಲಪ್ಪ, ಕಳ್ಳಂಬೆಳ್ಳ ನಾಗರಾಜು, ಕುದುರೇ ಕುಂಟೆ ಲಕ್ಕಣ್ಣ, ರಾಜಣ್ಣ ಬುಕ್ಕಾಪಟ್ಟಣ, ಎಂ.ಮುದ್ದರಾಜು, ರೇಣುಕಾರಾಧ್ಯ, ರಮೇಶ್ ಸೇರಿದಂತೆ ಹಲವರು ಹಾಜರಿದ್ದರು.