ಹೆಗ್ಗಡೆ ಕುಟುಂಬಕ್ಕೆ ಕಳಂಕ ತರಲು ಸಂಚು: ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : Aug 13, 2025, 12:30 AM IST
12ಎಚ್ಎಸ್ಎನ್17 :  | Kannada Prabha

ಸಾರಾಂಶ

ಧರ್ಮಸ್ಥಳ ಕ್ಷೇತ್ರದ ಮೇಲೆ ಅಪಚಾರ ಮಾಡಿ ಪಾವಿತ್ರಕ್ಕೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ನಾವು ಒಗ್ಗಟ್ಟು ಆಗದಿದ್ದ ಪರಿಣಾಮ ಇಂದು ದೇವಸ್ಥಾನದ ಮೇಲೆ ಈ ಕಳಂಕ ಬಂದಿದೆ.

ಕನ್ನಡಪ್ರಭ ವಾರ್ತೆ ಹಾಸನ

ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಜವಾಬ್ದಾರಿ ಹೊತ್ತಿರುವ ಹೆಗ್ಗಡೆ ಕುಟುಂಬಕ್ಕೆ ಕಳಂಕ ತರಲು ಒಳಸಂಚು ನಡೆಸುತ್ತಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಹಾಗೂ ವಿವಿಧ ಸಂಘ ಸಂಸ್ಥೆ, ವಕೀಲರ ಸಂಘದಿಂದ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಸಾವಿರಾರು ಮಂದಿ, ಎನ್. ಆರ್.ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ಕೆಲ ಸಮಯ ರಸ್ತೆತಡೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದರು.

ಯಸಳೂರಿನ ತೆಂಕಲಗೂಡು ಮಠದ ಮಠಾಧೀಶರಾದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ಮೇಲೆ ಅಪಚಾರ ಮಾಡಿ ಪಾವಿತ್ರಕ್ಕೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ನಾವು ಒಗ್ಗಟ್ಟು ಆಗದಿದ್ದ ಪರಿಣಾಮ ಇಂದು ದೇವಸ್ಥಾನದ ಮೇಲೆ ಈ ಕಳಂಕ ಬಂದಿದೆ. ಮುಂದೆ ನಮ್ಮ ಮನೆ ಬಾಗಿಲಿಗೆ ಬರುವ ದಿನಗಳು ದೂರ ಇಲ್ಲ. ನಾವು ಒಗ್ಗಟ್ಟಾಗಿ ಹಿಂದು ಸಮಾಜವನ್ನು ಸಂರಕ್ಷಣೆ ಮಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇಲ್ಲಿವರೆಗೂ ಎಷ್ಟೊ ಸರ್ಕಾರಗಳು ಬಂದಿವೆ. ಆದರೆ ಸರ್ಕಾರ ಮಾಡದ ಅನೇಕ ಕೆಲಸವನ್ನು ವೀರೇಂದ್ರ ಹೆಗಡೆಯವರು ಗ್ರಾಮೀಣ ಅಭಿವೃದ್ಧಿ ಸಂಘಗಳ ಮೂಲಕ ಮಾಡಿದ್ದಾರೆ. ಕೆರೆ ಕಟ್ಟೆ ಅಭಿವೃದ್ಧಿ ಮಾಡುವ ಮೂಲಕ, ಹೆಣ್ಣು ಮಕ್ಕಳ ಕ್ಷೇಮಾಭಿವೃದ್ಧಿ, ಹಿಂದು ದೇವಸ್ಥಾನಕ್ಕೆ ಹಣ ನೀಡಿ ಜೋರ್ಣೋದ್ಧಾರ ಸೇರಿದಂತೆ ಇತರೆ ಅನೇಕ ಸೇವಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತಹ ಉತ್ತಮ ವ್ಯಕ್ತಿತ್ವದ ಮೇಲೆ ತೇಜೋವಧೆ ಮಾಡುವ ಕೆಲಸ ಮಾಡುತ್ತಿರುವುದನ್ನು ಖಂಡಿಸಲೇಬೇಕು ಎಂದು ಆಗ್ರಹಿಸಿದರು.

ಧರ್ಮಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣ ಮೊದಲಾದ ಕಡೆಗಳಲ್ಲಿ ಇಲ್ಲ ಸಲ್ಲದ ಆರೋಪ, ವದಂತಿ, ಅಸಂಬದ್ಧ ಪದ ಬಳಕೆ ಮೂಲಕ ಕಳಂಕ ತರಲು ಪ್ರಯತ್ನ ಮಾಡುತ್ತಿರುವವರ ಮೇಲೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ನಿರಂತರವಾಗಿ ಹರಿದಾಡುತ್ತಿರುವ ಧರ್ಮಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಯೂಟ್ಯೂಬ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಷಡ್ಯಂತ್ರ ನಿಲ್ಲಬೇಕು. ಅಪಾರ ಭಕ್ತರ ಪಾಲಿನ ಪುಣ್ಯನೆಲೆ ಆಗಿರುವ ಧರ್ಮಸ್ಥಳ ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ, ಬುರುಡೆ ರಹಸ್ಯ ಭೇದಿಸಲು ನಡೆಯುತ್ತಿರುವ ಎಸ್‌ಐಟಿ ತನಿಖೆಯನ್ನು ಆದಷ್ಟು ಬೇಗ ಮುಗಿಸಲು ಒತ್ತಾಯಿಸಿದರು.ಈ ವಿಚಾರದಲ್ಲಿ ರಾಜಕೀಯ ಪ್ರಯೋಗ ಬೇಡ. ರಾಜ್ಯದ ಹಲವಡೆ ಬಡ ಹೆಣ್ಣುಮಕ್ಕಳ ಮರ್ಯಾದೆ ಹರಾಜಾದಾಗ ಯಾರು ಧ್ವನಿಯಾಗಲಿಲ್ಲ. ಎಸ್‌ಐಟಿ ತನಿಖೆಯ ದಿಕ್ಕನ್ನು ತಪ್ಪಿಸಲು ಕೆಲವೊಂದು ಶಕ್ತಿಗಳು ಪ್ರಯತ್ನಿಸುತ್ತಿವೆ. ತನಿಖೆಯಾಗಿ ಸತ್ಯಾಂಶ ಹೊರಬರಲಿ. ಆದರೆ ಧರ್ಮಸ್ಥಳ ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸವನ್ನು ಯಾರು ಮಾಡಬಾರದು. ಧರ್ಮಾಧಿಕಾರಿಗಳ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ಹಿಂದೂಗಳು ಒಗ್ಗಟ್ಟಿಂದ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು. ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಪ್ರಸನ್ನ ಕುಮಾರ್, ಗಗನ್ ಗಾಂಧಿ, ನಗರಸಭೆ ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ಡಾ.ನಿತಿನ್, ಅಖಿಲ ಭಾರತ ವೀರಶೈವ ಸಂಘದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ವಕೀಲೆ ವೇದಾವತಿ, ಡಾ. ನಾಗೇಶ್, ವಕೀಲ ಹೊಂಭೇಶ್, ವಿಶ್ವಕರ್ಮ ಆಲೂರು ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಪಿ ಹರೀಶ್, ರಾಮೇಗೌಡ, ಹೋರಾಟಗಾರ ಬಾಳ್ಳುಗೋಪಾಲ್, ವಿಶ್ವಕರ್ಮ ಸಮಾಜದ ಹೆಚ್.ವಿ. ಹರೀಶ್, ಇತಿಹಾಸ ತಜ್ಞರಾದ ಡಾ. ಎನ್. ರಮೇಶ್, ಡಾ. ಶಿವರಾಜಕುಮಾರ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರತೀಶ್ ಕುಮಾರ್ ಇತರರು ಇದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ