150ಕ್ಕೂ ಅಧಿಕ ಟ್ರ‍್ಯಾಕ್ಟರ್‌ಗಳ ಬೃಹತ್ ಪ್ರತಿಭಟನಾ ರ‍್ಯಾಲಿ

KannadaprabhaNewsNetwork |  
Published : Aug 28, 2026, 03:00 AM IST
ಬನಹಟ್ಟಿ : ಪ್ರಜಾಸೌಧಕ್ಕಾಗಿ ರೈತರ ೧೫೦ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳ ಘರ್ಜನೆ. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಪ್ರಜಾಸೌಧವನ್ನು ಬನಹಟ್ಟಿಯಲ್ಲಿಯೇ ನಿರ್ಮಿಸಬೇಕೆಂಬ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಗುರುವಾರ ಹೊಸ ಶಕ್ತಿ ದೊರೆಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಪ್ರಜಾಸೌಧವನ್ನು ಬನಹಟ್ಟಿಯಲ್ಲಿಯೇ ನಿರ್ಮಿಸಬೇಕೆಂಬ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಗುರುವಾರ ಹೊಸ ಶಕ್ತಿ ದೊರೆಯಿತು.

20ನೇ ದಿನದ ಸರದಿ ಸತ್ಯಾಗ್ರಹದ ಅಂಗವಾಗಿ ನೂರಾರು ರೈತರ ಸಮ್ಮುಖದಲ್ಲಿ 150ಕ್ಕೂ ಅಧಿಕ ಟ್ರ‍್ಯಾಕ್ಟರ್‌ಗಳ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಯಿತು. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆದ ಈ ಅಪರೂಪದ ರೈತ ಶಕ್ತಿ ಪ್ರದರ್ಶನದಲ್ಲಿ ಟ್ರ‍್ಯಾಕ್ಟರ್‌ಗಳ ನಿರಂತರ ಘರ್ಜನೆ ಬನಹಟ್ಟಿ ನಗರಾದ್ಯಂತ ಮೊಳಗಿತು. ಪ್ರಜಾಸೌಧ ಬನಹಟ್ಟಿಯಲ್ಲೇ ಆಗಬೇಕೆಂಬ ಘೋಷಣೆಳೊಂದಿಗೆ ಸಾಗಿದ ರ‍್ಯಾಲಿ ಸುಮಾರು 2 ಕಿ.ಮೀ. ಉದ್ದಕ್ಕೆ ವ್ಯಾಪಿಸಿತ್ತು. ಪ್ರಜಾಸೌಧ ಹೋರಾಟದ ಇತಿಹಾಸದಲ್ಲಿಯೇ ಇಂತಹ ಪ್ರಮಾಣದಲ್ಲಿ ಟ್ರ‍್ಯಾಕ್ಟರ್‌ಗಳೊಡನೆ ನಡೆದ ಪ್ರತಿಭಟನೆ ಇದೇ ಮೊದಲ ಬಾರಿಗೆ ಎಂಬುದು ವಿಶೇಷ.

ಬನಹಟ್ಟಿಯ ಟ್ರೆಜರಿ ಕಚೇರಿ ಆವರಣದಿಂದ ಹೊರಟ ನೂರಾರು ಟ್ರ‍್ಯಾಕ್ಟರ್‌ಗಳ ರ‍್ಯಾಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಕೊನೆಗೆ ಚೆನ್ನಮ್ಮ ವೃತ್ತದಲ್ಲಿರುವ ಸತ್ಯಾಗ್ರಹ ಸ್ಥಳಕ್ಕೆ ತಲುಪಿತು. ರೈತರ ಬೃಹತ್ ಪಡೆ, ಟ್ರ‍್ಯಾಕ್ಟರ್‌ಗಳ ಸಾಲು ಮತ್ತು ಘೋಷಣೆಗಳಿಂದ ಬನಹಟ್ಟಿ ನಗರವೇ ಹೋರಾಟದ ರಣರಂಗದಂತೆ ಮಾರ್ಪಟ್ಟಿತ್ತು.

ಟ್ರ‍್ಯಾಕ್ಟರ್‌ಳೊಂದಿಗೆ ಜಿಲ್ಲಾಡಳಿತ ಮುತ್ತಿಗೆ: ನಂತರ ನಡೆದ ಬೃಹತ್ ಸಭೆಯಲ್ಲಿ ರೈತ ಮುಖಂಡ ಈಶ್ವರ ಪಾಟೀಲ ಮಾತನಾಡಿ, ಇಂದಿನ ರೈತರ ಪ್ರತಿಭಟನಾ ರ‍್ಯಾಲಿ ಕೇವಲ ಆರಂಭಿಕ ಶಕ್ತಿ ಪ್ರದರ್ಶನ. ಪ್ರಜಾಸೌಧವನ್ನು ಬನಹಟ್ಟಿಯಲ್ಲಿಯೇ ನಿರ್ಮಿಸುವಲ್ಲಿ ಸರ್ಕಾರ ಮತ್ತು ಆಡಳಿತ ವಿಳಂಬ ಮಾಡಿದರೆ, ಮುಂದಿನ ಹಂತದಲ್ಲಿ ಬಾಗಲಕೋಟೆ ಜಿಲ್ಲಾಡಳಿತ ಚಲೋ ನಡೆಸಿ, ರೈತರು ನೂರಾರು ಟ್ರ‍್ಯಾಕ್ಟರ್‌ಗಳೊಂದಿಗೆ ಜಿಲ್ಲಾಡಳಿತ ಕಚೇರಿಗೆ ಮುತ್ತಿಗೆ ಹಾಕುವುದು ನಮ್ಮ ಯೋಜನೆಯಾಗಿದೆ ಎಂದರು.

ಶಿವು ಗುಂಡಿ, ರಾಘವೆಂದ್ರ ಜಿಡ್ಡಿಮನಿ ಮಾತನಾಡಿ, ಪ್ರಜಾಸೌಧಕ್ಕಾಗಿ ನಡೆಯುತ್ತಿರುವುದು ಯಾವುದೇ ವೈಯಕ್ತಿಕ ಹೋರಾಟವಲ್ಲ. ಇದು ಬನಹಟ್ಟಿ ನಗರದ ಜನತೆಯ ಹಕ್ಕಿನ ಹೋರಾಟವಾಗಿದೆ. ಈ ನ್ಯಾಯಯುತ ಹೋರಾಟಕ್ಕೆ ನ್ಯಾಯವಾದಿಗಳ ಸಂಘ ಸೇರಿದಂತೆ ನೂರಾರು ಸಮಾಜಗಳು, ಸಂಘ-ಸಂಸ್ಥೆಗಳು ಮತ್ತು ವಿವಿಧ ಸಮುದಾಯಗಳ ಅಪಾರ ಬೆಂಬಲ ದೊರೆಯುತ್ತಿರುವುದು ಹೋರಾಟದ ಬಲವನ್ನು ಮತ್ತಷ್ಟು ಹೆಚ್ಚಿಸಿದೆಯೆಂದು ಹೇಳಿದರು.

ನಾಮದೇವ ಶಿಂಪಿ ಸಮಾಜದ ಭಾರಿ ಬೆಂಬಲ: 20ನೇ ದಿನದ ಸರದಿ ಸತ್ಯಾಗ್ರಹಕ್ಕೆ ನಾಮದೇವ ಶಿಂಪಿ ಸಮಾಜದಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಸಮಾಜದ ವಿಠ್ಠಲ ಮಂದಿರ ಹಾಗೂ ಹರಿ ಮಂದಿರದ ಅಧ್ಯಕ್ಷ ಕುಮಾರ ಬಕರೆ ಮತ್ತು ಸತ್ಯವಾನ ಬಕರೆ ಅವರ ನೇತೃತ್ವದಲ್ಲಿ ಮಹಿಳೆಯರು ಸೇರಿದಂತೆ 300ಕ್ಕೂ ಅಧಿಕ ಜನರು ಸತ್ಯಾಗ್ರಹದಲ್ಲಿ ಪಾಲ್ಗೊಂಡು ಹೋರಾಟಕ್ಕೆ ತಮ್ಮ ಬೆಂಬಲ ಘೋಷಿಸಿದರು.

ರೈತ ಮುಖಂಡರಾದ ಜಯವಂತ ಮಿಳ್ಳಿ, ಸಿದ್ಧನಗೌಡ ಪಾಟೀಲ, ರಾಮಣ್ಣ ಹಂದಿಗುಂದ, ಮಲ್ಲಪ್ಪ ಗೌಡಪ್ಪನವರ, ಆರ್.ಕೆ.ಪಾಟೀಲ, ಸಿದ್ದಪ್ಪ ಕರಿಗಾರ, ಸುರೇಶ ಮಡ್ಡಿ, ಜಯವಂತ ಗುಂಡಿ, ಬಾಳಪ್ಪ ಜಿಡ್ಡಿಮನಿ, ಉಮೇಶ ಹಳ್ಳೂರ, ಬೀರಪ್ಪ ವಗ್ಗ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆ: ಐಶ್ವರ್ಯ, ಸ್ನೇಹಾ ಪ್ರಥಮ
ಕೇಸರೆಕರ ದಂಪತಿ ಹತ್ಯೆ ಪ್ರಕರಣ ಸಿಬಿಐಗೆ ಹಸ್ತಾಂತರಿಸಲು ಆಗ್ರಹ