ಮರಳು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನಾಳೆ ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ

KannadaprabhaNewsNetwork | Published : Nov 11, 2024 11:47 PM

ಸಾರಾಂಶ

ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕರ ಸಂಘ, ಸೆಂಟ್ರಿಂಗ್, ಪೇಂಟಿಂಗ್, ಎಂಜಿನಿಯರ್ಸ್‌ ಅಸೋಸಿಯೇಶನ್, ಸಿವಿಲ್ ಗುತ್ತಿಗೆದಾರರ ಸಂಘ, ಟಿಪ್ಪರ್ ಚಾಲಕರ ಸಂಘ ಹೀಗೆ ಆರು ಸಂಘಟನೆಗಳ ಕಾರ್ಮಿಕರ ಪಾಲ್ಗೊಳ್ಳಲಿದ್ದಾರೆ.

ಭಟ್ಕಳ: ತಾಲೂಕಿನಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಮರಳಿನ ಸಮಸ್ಯೆ ತಲೆದೋರಿರುವ ಹಿನ್ನೆಲೆ ಕಾರ್ಮಿಕರು ಕೆಲಸವಿಲ್ಲದೇ ತೊಂದರೆಗೆ ಸಿಲುಕಿದ್ದು, ಇದಕ್ಕೊಂದು ಶಾಶ್ವತ ಪರಿಹಾರ ದೊರಕಿಸಿಕೊಡಬೇಕೆಂದು ಆಗ್ರಹಿಸಿ ತಾಲೂಕು ಕಾರ್ಮಿಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನ. 13ರಂದು ಕಾರ್ಮಿಕರು ಬೃಹತ ಪ್ರತಿಭಟನೆ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದು ಎಂಜಿನಿಯರ್ಸ್‌ ಅಸೋಸಿಯೇಶನ್ ಅಧ್ಯಕ್ಷ ನಾಗೇಂದ್ರ ನಾಯ್ಕ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕರ ಸಂಘ, ಸೆಂಟ್ರಿಂಗ್, ಪೇಂಟಿಂಗ್, ಎಂಜಿನಿಯರ್ಸ್‌ ಅಸೋಸಿಯೇಶನ್, ಸಿವಿಲ್ ಗುತ್ತಿಗೆದಾರರ ಸಂಘ, ಟಿಪ್ಪರ್ ಚಾಲಕರ ಸಂಘ ಹೀಗೆ ಆರು ಸಂಘಟನೆಗಳ ಕಾರ್ಮಿಕರ ಪಾಲ್ಗೊಳ್ಳಲಿದ್ದಾರೆ.

ಕಳೆದ ನಾಲ್ಕೈದು ತಿಂಗಳಿನಿಂದ ಮರಳು ಸರಬರಾಜು ಆಗದೇ ಕಾರ್ಮಿಕರು ಕೆಲಸವಿಲ್ಲದೇ ಖಾಲಿ ಕುಳಿತುಕೊಳ್ಳುವಂತಾಗಿದೆ. ನಾವು ಸಚಿವರಿಗೆ, ಜಿಲ್ಲಾಡಳಿತಕ್ಕೆ ಮರಳು ಸಮಸ್ಯೆ ಬಗೆಹರಿಸಿಕೊಡಿ ಎಂದು ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದರು.

ಎಂಜಿನಿಯರ್ಸ್‌ ಅಸೋಸಿಯೇಷನ್‌ ಕಾರ್ಯದರ್ಶಿ ಸುರೇಶ ಪೂಜಾರಿ ಮಾತನಾಡಿ, ನಮ್ಮದು ನ್ಯಾಯಯುತವಾದ ಹೋರಾಟವಾಗಿದೆ. ಕಾರ್ಮಿಕರು ಕೆಲಸವಿಲ್ಲದೇ ಜೀವನ ಸಾಗಿಸುವುದೇ ಕಷ್ಟವಾಗಿದೆ. ಕುಂದಾಪುರದಿಂದಾದರೂ ಮರಳು ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.

ಸೆಂಟ್ರಿಂಗ್ ಕಾರ್ಮಿಕರ ಸಂಘದ ಅಧ್ಯಕ್ಷ ಲೋಕೇಶ ನಾಯ್ಕ, ಪೇಂಟಿಂಗ್ ಕಾರ್ಮಿಕರ ಸಂಘದ ಅಧ್ಯಕ್ಷ ರಾಮಾ ನಾಯ್ಕ, ಟಿಪ್ಪರ್ ಚಾಲಕರ ಸಂಘದ ಅಧ್ಯಕ್ಷ ಅಝೀಜ್, ಮಿಸ್ಬಾ ಉಲ್ ಹಕ್ ಮಾತನಾಡಿ, ನಮ್ಮ ಪ್ರತಿಭಟನೆಗೆ ಎಲ್ಲರ ಸಹಕಾರ ಅಗತ್ಯ. ಮರಳಿನ ಸಮಸ್ಯೆ ಸರಿಯಾದರೆ ಎಲ್ಲವೂ ಸರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಯ ಪ್ರಮುಖರು ಇದ್ದರು. ರೈತದ್ರೋಹಿಗಳು ದೇಶ ಬಿಟ್ಟು ತೊಲಗಲಿ

ಕನ್ನಡಪ್ರಭ ವಾರ್ತೆ ಕಾರವಾರರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ವಕ್ಫ್ ಮುಂದಾದಲ್ಲಿ ರೈತದ್ರೋಹಿಗಳೇ ದೇಶ ಬಿಟ್ಟು ತೊಲಗಿ ಎಂಬ ಚಳವಳಿ ಆರಂಭಿಸಬೇಕಾಗಲಿದೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಮ ಗಾಂವಕರ ಕನಕನಹಳ್ಳಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರೈತರ ಜೀವನಕ್ಕೆ ಕಂಟಕಪ್ರಾಯವಾಗಿ ವಕ್ಫ್ ಎಂಬ ಭೂತ ದೇಶಾದ್ಯಂತ ಕಾಡುತ್ತಿದೆ. ನಮ್ಮ ಜಿಲ್ಲೆಯು ಇದರಿಂದ ಹೊರತಾಗಿಲ್ಲ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ರೈತರಿಗೆ ಯಾವುದೇ ಮಾಹಿತಿ ಇಲ್ಲದೆ ಪಹಣಿ ಪತ್ರಿಕೆಯಲ್ಲಿ ರೈತರ ಹೆಸರು ಮಾಯವಾಗಿ ವಕ್ಫ್ ಹೆಸರು ಬಂದಿರುವುದು ರೈತ ಸಂಕುಲಕ್ಕೆ ಆಘಾತ ತಂದಿದೆ.ಜಿಲ್ಲೆಯ ಎಲ್ಲ ರೈತರು ತಮ್ಮ ಪಹಣಿ ಪತ್ರಿಕೆಗಳನ್ನು ಮೊಬೈಲ್ ನ ಭೂಮಿ ತಂತ್ರಾಂಶದ ಮುಖಾಂತರ ಅಥವಾ ಸಮೀಪದ ಭೂ ಮಾಹಿತಿ ಕೇಂದ್ರ ಸಂಪರ್ಕಿಸಿ, ನಿಮ್ಮ ಹೆಸರು ಇದೆಯೇ ಎಂದು ಖಾತ್ರಿ ಪಡಿಸಿಕೊಳ್ಳಿ. ಒಂದು ವೇಳೆ ನ್ಯೂನತೆ ಕಂಡುಬಂದಲ್ಲಿ ಆಯಾ ತಾಲೂಕಿನ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಗಳನ್ನು ಸಂಪರ್ಕಿಸಿ ಮಾಹಿತಿ ಒದಗಿಸಿ ಎಂದಿದ್ದಾರೆ.

Share this article