ಹಲವು ದಶಕಗಳಿಂದ ಉಳುಮೆ ಮಾಡುತ್ತಿರುವ ದಲಿತರಿಗೆ ತೊಂದರೆ ನೀಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವರ್ತನೆ ಖಂಡನೀಯ, 70 ರ ದಶಕದಲ್ಲಿ ಮಂಜೂರಾಗಿರುವ ಕಂದಾಯ ಭೂಮಿ ವಶಪಡಿಸಿಕೊಳ್ಳಲು ಇಲಾಖೆ ಮುಂದಾಗಿದ್ದು, ರೈತರಿಗೆ ಕಿರುಕುಳ ನೀಡುತ್ತಿದೆ
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ತಾಲೂಕಿನ ಸಿಂಗಾಟ ಕದರೆನಹಳ್ಳಿ ಗ್ರಾಮದ ಸರ್ವೆ ನಂಬರ್ 65 ರಲ್ಲಿ ಸುಮಾರು 1970 ರಿಂದ 75 ಕಾಲಘಟ್ಟದಲ್ಲಿ ತಮ್ಮ ಸ್ವಾಧೀನಾನುಭವದ ಆದಾರದ ಮೇಲೆ ಕಂದಾಯ ಇಲಾಖೆಯು ಕೊಟ್ಟ ದಾಖಲೆಗಳ ಮೂಲಕ ತಮ್ಮ ಜಮೀನನ್ನು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಹಳ್ಳಿಯ ಜನರ ಮೇಲೆ ಏಕಾಏಕಿ ಉಳುಮೆ ಮಾಡುವುದನ್ನು ನಿಲ್ಲಿಸಿ ಜಿಲ್ಲಾ ವಲಯ ಅರಣ್ಯಾಧಿಕಾರಿಗಳು ಮತ್ತು ತಹಸೀಲ್ದಾರ್ ದಲಿತರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಹಾಗೂ ರೈತರು ಸೋಮವಾರ ಸಿಂಗಾಟ ಕದರೆನಹಳ್ಳಿಯಿಂದ ನಗರ ಹೊರವಲಯದ ಡಿಸಿಎಫ್ಓ ಕಚೇರಿವರೆಗೆ ಬೃಹತ್ ಜಾಥಾ ನಡೆಸಿ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಧರಣಿ ಪ್ರತಿಭಟನೆ ನಡೆಸಿದರು.
ಈ ವೇಳೆ ದಸಂಸ ಮುಖಂಡ ಕೆ.ಸಿ. ರಾಜಕಾಂತ್ ಮಾತನಾಡಿ, ಹಲವು ದಶಕಗಳಿಂದ ಉಳುಮೆ ಮಾಡುತ್ತಿರುವ ದಲಿತರಿಗೆ ತೊಂದರೆ ನೀಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವರ್ತನೆ ಖಂಡನೀಯ, 70 ರ ದಶಕದಲ್ಲಿ ಮಂಜೂರಾಗಿರುವ ಕಂದಾಯ ಭೂಮಿ ವಶಪಡಿಸಿಕೊಳ್ಳಲು ಇಲಾಖೆ ಮುಂದಾಗಿದ್ದು, ರೈತರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.
ದಲಿತ ಮುಖಂಡ ಬಿ.ವಿ. ವೆಂಕಟರಮಣ ಮಾತನಾಡಿ, ಬಡ ದಲಿತರಿಗೆ ಸರ್ಕಾರ ಅಧಿಕೃತವಾಗಿ ನೀಡಿರುವ ಅಲ್ಪ ಸ್ವಲ್ಪ ಭೂಮಿಯನ್ನು ಕಸಿಯುವ ಯತ್ನ ಮಾಡುವ ಅರಣ್ಯ ಅಧಿಕಾರಿಗಳು ಇಶಾ ಸಂಸ್ಥೆಗೆ ಸಾವಿರ ಎಕರೆ ನೀಡಲಾಗಿದೆ. ಇದರಲ್ಲಿಯೂ ಅರಣ್ಯ ಭೂಮಿ ಒತ್ತುವರಿಯಾಗಿದೆ. ಇದನ್ನು ತೆರವುಗೊಳಿಸುವ ತಾಕತ್ತಿಲ್ಲವೇ ಎಂದು ಪ್ರಶ್ನಿಸಿ. ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಇಶಾ ಸಂಸ್ಥೆಗೆ ಸರ್ಕಾರವೇ ಒಂದು ಸಾವಿರ ಎಕರೆ ಭೂಮಿ ಮಂಜೂರು ಮಾಡಿದ್ದು, ಇದರಲ್ಲಿ ಅರಣ್ಯ ಇಲಾಖೆಗೆ ಸೇರಿದ ಭೂಮಿಯೂ ಇದೆ. ಮೊದಲು ಅದನ್ನು ತೆರುವುಗೊಳಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಸಿಎಫ್ಓ ಗಿರೀಶ್ ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಫಾರೆಸ್ಟ್ ಸೆಟಲ್ಮೆಂಟ್ ಆಫೀಸರ್ ಮೂಲಕ ಈ ಕೇಸು ನಮೂದಾಗಿದ್ದು, ಈ ಪ್ರಕರಣ ತನಿಖಾ ಹಂತದಲ್ಲಿದ್ದು ಈ ಜಮೀನಿನ ಬಗ್ಗೆ ನಿರ್ಧಾರ ಕೈಗೊಳ್ಳುವ ವ್ಯಾಪ್ತಿ ನನ್ನದಲ್ಲ ಎಂದು ತಿಳಿಸಿದರು.
ಡಿಸಿಎಫ್ಓ ಕಚೇರಿ ಬಳಿ ಪ್ರತಿಭಟನೆಗೆ ಸೂಕ್ತ ಸ್ಥಳವನ್ನು ನಿಗದಿಪಡಿಸಿ, ಪ್ರತಿಭಟನಾಕಾರರ ಕುಳಿತುಕೊಳ್ಳಲು ಏರ್ಪಾಟು ಮಾಡಿಕೊಂಡಿದ್ದ ಪೆಂಡಾಲನ್ನು ಯಾರಿಗೂ ತಿಳಿಸದೆ ಅರಣ್ಯ ಅಧಿಕಾರಿಗಳು ಕಚೇರಿ ಕಾಂಪೌಂಡ್ ನಿಂದ ಜೆಸಿಬಿ ಮೂಲಕ ಎಸೆದಿರುವುದು ಪ್ರತಿಭಟನಾಕಾರರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಈ ಮೂಲಕ ದಲಿತರ ಪ್ರತಿಭಟನೆ ದಮನ ಮಾಡಲು ಅಧಿಕಾರಿಗಳು ಅಸ್ಪೃಶ್ಯತೆ ಮೆರೆಯುತ್ತಿದ್ದಾರೆ ಎಂಬ ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ಕಾಯ್ದೆ ಅಡಿ ಡಿಎಫ್ ರವರ ಮೇಲೆ ಕೇಸು ನಮೂದಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದ ವಿಚಾರ ತಿಳಿದ ಕೂಡಲೇ ಎಸ್ಪಿ ಕುಶಲ್ ಚೌಕ್ಸೆ ಸೇರಿ ಇತರೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ರೈತರ ಸಮಸ್ಯೆಗೆ ನಾಳೆ ಡಿ ಎಫ್ ಒ ಕಚೇರಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ ಪರಿಹರಿಸುತ್ತಾರೆ ಎಂಬ ಭರವಸೆ ನೀಡಿದ ಬಳಿಕ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಿದರು.
ದಸಂಸ ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ, ತಾಲೂಕು ಸಂಚಾಲಕ ಎನ್ಪ ರಮೇಶ್, ಜೀವಿಕಾ ನಾರಾಯಣಸ್ವಾಮಿ, ವೆಂಕಟರಮಣ, ವೆಂಕಟನಾರಾಯಣ, ಚಿನ್ನಪ್ಪ, ಕರಗಪ್ಪ, ರಾಮಕೃಷ್ಣ, ಸಿಂಗಾಟಿ ಕದಿರೇನಹಳ್ಳಿಯ ನೊಂದ ರೈತ ಕುಟುಂಭಗಳ ಸದಸ್ಯರು ಇದ್ದರು.
ಸಿಕೆಬಿ-5 ನಗರ ಹೊರವಲಯದ ಡಿಸಿಎಫ್ಓ ಕಚೇರಿ ಮುಂದೆ ದಲಿತರ ಭೂಮಿಯನ್ನು ಡೀಮ್ಡ್ ಫಾರೆಸ್ಟ್ ಸೇರಿಸಿದ ಅಧಿಕಾರಿಗಳ ವಿರುದ್ಧ ಡಿಎಸ್ಎಸ್ ಬೃಹತ್ ಪ್ರತಿಭಟನೆ ನಡೆಸಿತು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.