ಕನ್ನಡಪ್ರಭ ವಾರ್ತೆ ನಾಪೋಕ್ಲು
ರಸ್ತೆಗಳ ದುರವಸ್ಥೆ ಖಂಡಿಸಿ ನಾಪೋಕ್ಲು ಮತ್ತು ಬಲ್ಲಮಾವಟಿ ಬಿಜೆಪಿ ಶಕ್ತಿ ಕೇಂದ್ರಗಳ ವತಿಯಿಂದ ನಾಪೋಕ್ಲು ಜಿಎಂಪಿ ಶಾಲಾ ಸಮೀಪದಲ್ಲಿ ತೀವ್ರ ಹದಗೆಟ್ಟ ರಸ್ತೆಯಲ್ಲಿ ಬುಧವಾರ ಬೃಹತ್ ರಸ್ತೆ ತಡೆ ಪ್ರತಿಭಟನೆಯನ್ನು ನಡೆಸಲಾಯಿತು.ರಸ್ತೆ ಗುಂಡಿಗಳಲ್ಲಿ ಗಿಡಗಳನ್ನು ನೆಟ್ಟು ಬಿಜೆಪಿ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ರಸ್ತೆ ದುರವಸ್ಥೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಪ್ರಜೆಗಳ ತೆರಿಗೆ ಹಣ ಸರಿಯಾಗಿ ವಿನಿಯೋಗವಾಗುತ್ತಿಲ್ಲ. ಭ್ರಷ್ಟಾಚಾರ, ಹಗರಣಗಳಲ್ಲಿ ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ ಎಂದರು. ಕೊಡಗಿನ ರಸ್ತೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಕಳೆದ ಒಂದು ಒಂದೂವರೆ ವರ್ಷಗಳಿಂದ1500 ಕೋಟಿ ಹಣವನ್ನು ಜಿಲ್ಲೆಗೆ ವಿನಿಯೋಗ ಮಾಡಲಾಗಿದೆ ಎಂದು ಶಾಸಕರು ಹೇಳುತ್ತಿದ್ದಾರೆ. ಈ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು. ವೈಯುಕ್ತಿಕ ಮನೆಗಳಿಗೆ ರಸ್ತೆಯಾಗಿದೆ. ಸಾರ್ವಜನಿಕ ಕೆಲಸ ಆಗುತ್ತಿಲ್ಲ. ರಸ್ತೆಗಳಿಗೆ ಚರಂಡಿ ನಿರ್ಮಾಣ ಇಲ್ಲ. ಲೋಕೋಪಯೋಗಿ ಇಲಾಖೆ ನಿದ್ರಿಸುತ್ತಿದೆ ಎಂದು ದೂರಿದರು.ಬಿಜೆಪಿ ಮಡಿಕೇರಿ ಗ್ರಾಮಾಂತರ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಕರ್ನಾಟಕ ರಾಜ್ಯದಾದ್ಯಂತ ರಸ್ತೆ ದುಸ್ಥಿತಿಯನ್ನು ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಎನ್‌ಟಿಆರ್‌ಎಫ್ ನಿಂದ ಬಂದ ಹಣದಿಂದ ಮಾತ್ರ ಕೆಲಸ ಮಾಡಲಾಗುತ್ತಿದೆ. ಕೊಡಗಿನ ಐದು ತಾಲೂಕುಗಳಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿ ಸಾರ್ವಜನಿಕರ ತೆರಿಗೆ ಹಣ ಸಂಪೂರ್ಣ ಪೋಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ತೀವ್ರವಾಗಿ ಖಂಡಿಸಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಬಲ್ಲಮಾವಟಿ ಶಕ್ತಿ ಕೇಂದ್ರದ ಅಧ್ಯಕ್ಷ ಕರವಂಡ ಲವ ನಾಣಯ್ಯ ಮಾತನಾಡಿ ತೆರಿಗೆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸದೆ, ಅಧಿಕಾರಿಗಳು ಕಾಂಗ್ರೆಸ್ಸಿನಕೈಗೊಂಬೆಯಾಗಿದ್ದಾರೆ ಎಂದು ಕಿಡಿ ಕಾರಿದ ಅವರು ಇದರಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ಇಂದು ಸಾಂಕೇತಿಕವಾಗಿ ಈ ಪ್ರತಿಭಟನೆ ಮಾಡಲಾಗಿದೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಕೊಡಗು ಬಂದ್ ಮಾಡಿ ತೀವ್ರತರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಲೋಕೋಪಯೋಗಿ ಇಲಾಖೆಯ ಅಭಿಯಂತರ (ಎಡಬ್ಲ್ಯೂಇ ) ಗಿರೀಶ್ ಅವರನ್ನು ತರಾಟೆಗೆ ತೆಗೆದುಕೊಂಡು ಪ್ರತಿಭಟನೆಗಾರರು ಕೂಡಲೇ ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಲಾಯಿತು. ಇದಕ್ಕೆ ಉತ್ತರಿಸಿದ ಅಭಿಯಂತರ ಗಿರೀಶ್ ರಸ್ತೆ ಅಭಿವೃದ್ಧಿಗೆಬಿಡುಗಡೆಯಾದ ವಿವರವನ್ನು ನೀಡಿ ಮಳೆ ಕಡಿಮೆ ಯಾದ ಕೂಡಲೆ ಸರ್ವೇ ಮಾಡಿ ಕೆಲಸ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ನಾಪೋಕ್ಲು ಶಕ್ತಿ ಕೇಂದ್ರದ ಪ್ರಮುಖರಾದ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಮನವಿ ಪತ್ರವನ್ನು ಓದಿ ಬಳಿಕ ಕಂದಾಯ ಪರಿವೀಕ್ಷಕ ರವಿಕುಮಾರ್ ಮುಖಾಂತರ ಬಿಜೆಪಿ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಕಾಂಗಿರ ಸತೀಶ್, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಗ್ರಾಮಾಂತರ ಅಧ್ಯಕ್ಷರಾದ ಚೇತನ್, ತಾಲೂಕುಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪೊಕ್ಕುಳಂಡ್ರ ದನೊಜ್ , ರೈತ ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ಶಿವಚಾಳಿಯಂಡ ಜಗದೀಶ, ಉಪಾಧ್ಯಕ್ಷರಾದ ಪಾಡಿಯಮ್ಮಂಡ ಮನು ಮಹೇಶ್, ಒಬಿಸಿ ಮೋರ್ಚಾದ ತಾಲೂಕು ಮಂಡಲದ ಅಧ್ಯಕ್ಷರಾದ ಬಿ ಎಂ ಪ್ರತೀಪ, ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಸದಸ್ಯರಾದ ಕರವಂಡ ಅಪ್ಪಣ್ಣ,
ಸಹ ಪ್ರಮುಖರಾದ ಮಣವಟ್ಟಿರ ದೀಪಕ್ ಪೊನ್ನಪ್ಪ, ಕೆಟೋಳಿರ ಹರೀಶ್ ಪೂವಯ್ಯ, ಚೋಕಿರ ಬಾಬಿ ಭೀಮಯ್ಯ , ಮಣವಟ್ಟಿರ ಹರೀಶ್, ಕೊಂಬಂಡ ಸಂಜು, ಕಾಂಡಂಡ ಆಶೋಕ್, ಅರೆಯಡ ರತ್ನ ಪೆಮ್ಮಯ್ಯ, ಬದ್ದಂಜೆಟ್ಟಿರ ದೇವಿ ದೇವಯ್ಯ, ಕುಂಡ್ಯೋಳಂಡ ಬೋಪಣ್ಣ, ಮಣವಟ್ಟಿರ ದೀಪಕ್ , ಬಿದ್ದಾಟಂಡ ಸಂಪತ್, ಚೀಯಂಡಿ ದಿನೇಶ್, ಶಿವಚಾಳಿಯಂಡ ನಿತ್ಯಾ, ಚೀಯಕಪೂವಂಡ ಚಾಂದಿನಿ, ಗೋಪಾಲ ಕಕ್ಕುಂದ ಕಾಡು, ಬೂತ್ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಬಿಜೆಪಿ ಮುಖಂಡರು ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು, ವಾಹನ ಚಾಲಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.