ಕೊಪ್ಪಳ: ನಗರದ ಅಶೋಕ ವೃತ್ತದಲ್ಲಿ ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳು, ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಸುತ್ತಲಿನ ಶಾಲೆಗಳ ವಿಲೀನದೊಂದಿಗೆ ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರ್ಕಾರದ ನಡೆ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಎಐಡಿಎಸ್ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಿಂಧೂ ಕೌದಿ ಮಾತನಾಡಿ, ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆ ಮುಚ್ಚಲು ಸಿದ್ಧತೆ ನಡೆಸಿರುವುದರ ಹಿಂದೆ ಉಚಿತ ಮತ್ತು ಸಾರ್ವತಿಕ ಶಿಕ್ಷಣದ ನಮ್ಮ ನವೋದಯ ಚಿಂತಕರು ಕ್ರಾಂತಿಕಾರಿಗಳು ಕಷ್ಟಪಟ್ಟು ಗಳಿಸಿದ ವ್ಯವಸ್ಥೆ ನಾಶಪಡಿಸುವ ಒಂದು ಪ್ರಯತ್ನ ಅಡಗಿದೆ ಎಂದರು.
ಕೆಪಿಎಸ್ ಶಾಲೆ ತೆರೆಯುವಲ್ಲಿ ನಮಗೆ ಸಮಸ್ಯೆ ಇಲ್ಲ. ಆದರೆ ಕೇವಲ ಗ್ರಾಪಂ ಮಟ್ಟದಲ್ಲಿ ತೆರೆಯುವ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಅತ್ಯಂತ ಅಪಾಯಕಾರಿಯಾಗಿದೆ. ಕರ್ನಾಟಕದಲ್ಲಿ 40,000 ಶಾಲೆಗಳು ಮುಚ್ಚಿಹೋಗುವ ಅಪಾಯಕ್ಕೆ ತುತ್ತಾಗುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ ಮಾತನಾಡಿ, ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಹೊರಟಿರುವ ಪಟ್ಟಿಯಲ್ಲಿ ಕೊಪ್ಪಳದ 663 ಶಾಲೆಗಳಿವೆ. ಇದರಲ್ಲಿ ಬಹುಪಾಲು ಹಳ್ಳಿ ಮಟ್ಟದ ಶಾಲೆಗಳಿದ್ದು, ಸರ್ಕಾರ ಕಾರ್ಪೊರೇಟ್ ಶಕ್ತಿ ಕಾಪಾಡಲು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿವೆ ಎಂದು ಕಿಡಿಕಾರಿದರು.
ಸರ್ಕಾರಿ ಶಾಲೆಗಳನ್ನು ರಕ್ಷಿಸಲು ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು ಮತ್ತು ಶಿಕ್ಷಕರು ಒಂದಾಗಬೇಕೆಂದು ಕರೆ ನೀಡಿದರು.ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳಾದ ಶಿಲ್ಪಾ, ಸಂಜನಾ, ನೇತ್ರಾ, ಪೂಜಾ, ವಿಜಯ ಲಕ್ಷ್ಮಿ, ರಾಜ ಸಾಬ್, ಮಂಗಳೇಶ್ ಸೇರಿದಂತೆ ಇತರೆ ಸಾರ್ವಜನಿಕರಿದ್ದರು.