ಮಾಸ್ತಮ್ಮ, ಹುಚ್ಚಮ್ಮದೇವಿಯ ಅದ್ಧೂರಿ ಹಬ್ಬ ಆಚರಣೆ

KannadaprabhaNewsNetwork | Published : Mar 19, 2025 12:33 AM

ಸಾರಾಂಶ

ತಾಲೂಕಿನ ಹುಲ್ಲೇಗಾಲ ಗ್ರಾಮದಲ್ಲಿ ಮಾಸ್ತಮ್ಮ ಹಾಗೂ ಹುಚ್ಚಮ್ಮದೇವಿ ಹಬ್ಬವು 80 ವರ್ಷಗಳ ನಂತರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಭಕ್ತಿ ಪ್ರಧಾನವಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ಹುಲ್ಲೇಗಾಲ ಗ್ರಾಮದಲ್ಲಿ ಮಾಸ್ತಮ್ಮ ಹಾಗೂ ಹುಚ್ಚಮ್ಮದೇವಿ ಹಬ್ಬವು 80 ವರ್ಷಗಳ ನಂತರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಭಕ್ತಿ ಪ್ರಧಾನವಾಗಿ ನಡೆಯಿತು.

ಸೋಮವಾರ ಸಂಜೆ ಹೆಡಿಗೆ ಹೊತ್ತು ತಂದ ದೇವರ ಕುಲಬಾಂಧವರು ಮತ್ತು ಹುಲ್ಲೇಗಾಲ ಹಾಗೂ ಅಕ್ಕಪಕ್ಕದ ಗ್ರಾಮದವರೊಂದಿಗೆ ಹೆಬ್ಬೆಟ್ಟದಿಂದ ಬಂದ ದೇವರುಗಳು, ಪೂಜಾರಿಗಳು, ಬಸವಗಳನ್ನು ಸ್ವಾಗತಿಸಿ ಹೆಗ್ಗಡೆಗಳು, ಗುರುಗಳು, ವೀರಮಕ್ಕಳನ್ನು ತಮಟೆ ವಾದ್ಯಗಳೊಂದಿಗೆ ಹುಲ್ಲೇಗಾಲ ಹುಚ್ಚಮ್ಮನ ದೇವಸ್ಥಾನಕ್ಕೆ ಕರೆತರಲಾಯಿತು.

ರಾತ್ರಿ 10 ಗಂಟೆ ಸಮಯದಲ್ಲಿ ಏಳು ಮಡಿ ಪೂಜೆ ಪುರಸ್ಕಾರಗಳೊಂದಿಗೆ ಅರುವನಹಳ್ಳಿ ಬಸವಗಳನ್ನು ಪೂಜೆ ಮಾಡಿ ಹೂ- ಹೊಂಬಾಳೆ ಸಹಿತ ಮಾಸ್ತಮ್ಮ ಮತ್ತು ಹುಚ್ಚಮ್ಮ ಹಾಗೂ ಅರುವನಹಳ್ಳಿ ಬೀರೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ದಿವಟಿಗಳ ಸಲಾಮು ಮಾಡಿ ನಂತರ ವೀರ ಮಕ್ಕಳ ಕುಣಿತದೊಂದಿಗೆ ತಮಟೆ ವಾದ್ಯಗಳೊಂದಿಗೆ ಮಾಸ್ತಮ್ಮ ಮತ್ತು ಹುಚ್ಚಮ್ಮ ದೇವಿ ಉತ್ಸವ ನಡೆಯಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಯಿತು. ಮನೆ ಮುಂದೆ ಬಂದ ದೇವರಿಗೆ ಮಹಿಳೆಯರು ಪೂಜೆ ಸಲ್ಲಿಸಿ ಧನ್ಯತೆ ಮೆರೆದರು. ಮಂಗಳವಾರ ಬೆಳಗ್ಗೆ ಹುಚ್ಚಮ್ಮನ ಕಟ್ಟೆ ಆವರಣದಲ್ಲಿ ದೇವರುಗಳ ಮಹಾಮಜ್ಜನ ಪೂಜಾ ಕಾರ್ಯಕ್ರಮವು ಸಂಪ್ರದಾಯ, ವಿಧಿವಿಧಾನಗಳೊಂದಿಗೆ ನೆರವೇರಿದವು.

ದೇವರ ಹೂ ಹೊಂಬಾಳೆ ಸಹಿತ ಬಸವ ದೇವರಿಗೆ ದಿವಟಿಗಳ ಸಲಾಮು ಮಾಡಿ ಊರಿನ ಪ್ರಮುಖ ಬೀದಿಯಲ್ಲಿ ವೀರ ಮಕ್ಕಳ ಕುಣಿತದೊಂದಿಗೆ ತಮಟೆ ವಾದ್ಯಗಳೊಂದಿಗೆ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ದೇವರನ್ನು ಕರೆತರಲಾಯಿತು.

50ಕ್ಕೂ ಹೆಚ್ಚು ಮಂದಿಯಿಂದ ರಕ್ತದಾನ:

ಶ್ರೀ ಹುಚ್ಚಮ್ಮದೇವಿ ಭಕ್ತರು, ದುಗ್ಗನಹಳ್ಳಿ, ಬಂಡೂರು, ತಳಗವಾದಿ ಗ್ರಾಮ ಪಂಚಾಯಿತಿ, ಯುವಕ ಮಿತ್ರರು ಹಾಗೂ ಸರ್ಕಾರಿ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ಷದಾನ ಶಿಬಿರವು ಯಶಸ್ವಿಯಾಗಿ ನಡೆಯಿತು. ಹಬ್ಬಕ್ಕೆ ಬಂದ ಯುವಕ- ಯುವತಿಯರು ರಕ್ತದಾನ ಮಾಡುವುದರ ಮೂಲಕ ಮಾನವೀಯತೆಯನ್ನು ಮೆರೆದರು. ಶಿಬಿರದಲ್ಲಿ 50ಕ್ಕೂ ಹೆಚ್ಚು ಯುನಿಟ್ ರಕ್ತ ಸಂಗ್ರಹವಾಯಿತು.

3 ದಿನ ವಾಸ್ತವ್ಯ:

ಮಂಡ್ಯ, ಮದ್ದೂರು, ಮಳವಳ್ಳಿ, ಭದ್ರವತಿ, ಮೈಸೂರು, ಬೆಂಗಳುರು, ನಂಜನಗೂಡು ಸೇರಿದಂತೆ ವಿವಿಧ ಭಾಗಗಳಿಂದ 50 ಸಾವಿರಕ್ಕೂ ಹೆಚ್ಚು ಮಾಸ್ತಮ್ಮ ಹಾಗೂ ಹುಚ್ಚಮ್ಮದೇವಿ ಭಕ್ತರು ಹೆಡಿಗೆ ಹೊತ್ತು ದೇವಸ್ಥಾನಕ್ಕೆ ಆಗಮಿಸಿ ಮೂರು ದಿನ ವಾಸ್ತವ್ಯ ಹೂಡಿ ಪೂಜಾ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದರು.

ಪ್ರತಿಯೊಂದು ಗ್ರಾಮದವರು ಸಾಮೂಹಿಕವಾಗಿ ದೇವರಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು, ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಹಬ್ಬದ ವಿಶೇಷವಾಗಿ ದೇವಸ್ಥಾನ ಸೇರಿದಂತೆ ಗ್ರಾಮದ ಉದ್ದಕ್ಕೂ ವಿವಿಧ ಹೂವು ಹಾಗೂ ದೀಪಾಲಂಕಾರದ ಮೂಲಕ ಮಧುವಣಗಿತ್ತಿಯಂತೆ ಶೃಂಗರಿಸಲಾಗಿತ್ತು.

ಶುಭಕೋರುವ ಬ್ಯಾನರ್‌ಗಳು ಗ್ರಾಮದೆಲ್ಲೆಡೆ ರಾರಾಜಿಸುತ್ತಿದ್ದವು. ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮೂಲ ಸೌಲಭ್ಯವನ್ನು ಕಲ್ಪಿಸಲಾಗಿತ್ತು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಡಿವೈಎಸ್‌ಪಿ ಕೃಷ್ಣಪ್ಪ ಅವರ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ಜಾನಪದ ಕಲಾವಿದ ಭರತ್ ಶಾಸ್ತ್ರಿ ಅವರಿಂದ ನಡೆದ ಭಕ್ತಿಗೀತೆಗಳು ಗಮನ ಸೆಳೆದವು.

ಟ್ರಸ್ಟ್ ಅಧ್ಯಕ್ಷ ಡಾ.ಮಹೇಶ್‌ಕುಮಾರ್, ಗೌರವಾಧ್ಯಕ್ಷ ಚಿಕ್ಕಲಿಂಗಯ್ಯ, ಉಪಾಧ್ಯಕ್ಷ ಶೆಟ್ಟಹಳ್ಳಿ ಲಿಂಗರಾಜು, ಕಾರ್ಯದರ್ಶಿ ದೊಡ್ಡಲಿಂಗಯ್ಯ, ಮುಖಂಡರಾದ ಲಿಂಗರಾಜು, ಶಂಭು, ಶಿವಣ್ಣ, ಮಂಜುನಾಥ್, ಕಾಳೇಗೌಡ, ಕಾಳನಿಂಗಯ್ಯ ಸೇರಿದಂತೆ ಇತರರು ಇದ್ದರು.

Share this article