ಗದಗ: ನಗರದ ಹೊಸಬಸ್ ನಿಲ್ದಾಣದಲ್ಲಿ ಸೋಮವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಏರ್ಪಡಿಸಿದ ಗ್ಯಾರಂಟಿ ಯೋಜನೆಗಳ ವಸ್ತು ಪ್ರದರ್ಶನವು ಸಾರ್ವಜನಿಕರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಅಧ್ಯಕ್ಷ ರಾಜು ಹೆಬ್ಬಳ್ಳಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಮೀನಾಕ್ಷಿ, ಗಣ್ಯರಾದ ಅಶೋಕ ಮಂದಾಲಿ, ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕ ವಿ.ಎಫ್.ಜಾಧವ ಇದ್ದರು. ವಿವಿಧ ಯೋಜನೆಗಳ ಮಾಹಿತಿ: ಹಸಿವು ಮುಕ್ತ ಕರ್ನಾಟಕವನ್ನಾಗಿಸುವ ರಾಜ್ಯ ಸರ್ಕಾರದ ಮಹತ್ತರ ಯೋಜನೆಯಾದ ಅನ್ನಭಾಗ್ಯ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಉಚಿತ ೧೦ ಕೆ.ಜಿ ಆಹಾರ ಧಾನ್ಯ ಸೇರಿದಂತೆ ಡಿಬಿಟಿ ಮೂಲಕ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ೫ ಕೆ.ಜಿ ಅಕ್ಕಿ ಬದಲಿಗೆ ರು ೧೭೦ರಂತೆ ೪.೦೨ ಕೋಟಿ ಫಲಾನುಭವಿಗಳಿಗೆ ರು ೪೫೯೫ ಕೋಟಿ ವರ್ಗಾಯಿಸುವುದರ ಮೂಲಕ ಬಡವರ ಕುಟುಂಬದ ಆರ್ಥಿಕ ಹೊಯನ್ನು ಕಡಿಮೆಗೊಳಿಸಿ ಬಲವರ್ಧನೆಗೆ ಸಹಾಯಕವಾಗಿದೆ.
ಮಹಿಳೆಯರ ಸ್ವಾವಲಂಬನೆ ಬದುಕು ನಿರ್ಮಿಸಲು ಶಕ್ತಿ ಯೋಜನೆಯಡಿ ೧೩೬ ಕೋಟಿ ಮಹಿಳೆಯರು, ಯುವತಿಯರು ಹಾಗೂ ವಿದ್ಯಾರ್ಥಿನಿಯರು ಉಚಿತ ಪ್ರಯಾಣ ಮಾಡುವುದರ ಮೂಲಕ ಶಕ್ತಿ ಯೋಜನೆ ಮಹಿಳೆಯರ ಸಬಲೀಕರಣಕ್ಕೆ ಮಾದರಿಯಾಗಿದೆ.ಪ್ರತಿ ಮನೆಯಲ್ಲಿಯೂ ಭಾಗ್ಯದ ಬೆಳಕು ಬೆಳಗಬೇಕು ಎನ್ನುವ ಆಶಯದಂತೆ ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ೨೦೦ ಯೂನಿಟ್ ವರೆಗೆ ವಿದ್ಯುತ್ ಉಚಿತ ನೀಡುವುದರ ಮೂಲಕ ೫ ಕೋಟಿ ಜನರಿಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ.
ಯುವಕರ ಶ್ರೇಯೋಭಿವೃದ್ಧಿಗಾಗಿ ಯುವನಿಧಿ ಯೋಜನೆಯಡಿ ೨೦೨೩ ರಲ್ಲಿ ಉತ್ತೀರ್ಣರಾದ ಪದವೀಧರರು ಹಾಗೂ ಡಿಪ್ಲೋಮಾ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ.
ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದ ೧೫೦೬೮ ಕುಂದು ಕೊರತೆಗಳಲ್ಲಿ ೯೭೮೦ ಕುಂದು ಕೊರತೆಗಳನ್ನು ವಿಲೇ ಮಾಡಲಾಗಿದೆ.ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಾಡುವುದರ ಮೂಲಕ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾದ ಜಮೀನುಗಳಿಗೆ ಅನಧಿಕೃತ ಪರಭಾರೆಯಿಂದ ರಕ್ಷಣೆ ಸೇರಿದಂತೆ ಸಕ್ಷಮ ಪ್ರಾಧಿಕಾರದ ಯಾವುದೇ ಕಾಲಮಿತಿ ಇಲ್ಲದೆ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸಾಮಾಜಿಕ ನ್ಯಾಯದ ಮೂಲ ಹರಿಕಾರನಿಗೆ ಕರ್ನಾಟಕ ಸರ್ಕಾರದ ಗೌರವ ವಿಶ್ವಗುರು ಶ್ರೀ ಜಗಜ್ಯೋತಿ ಬಸವೇಶ್ವರರು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಣೆ ಮಾಡುವುದರ ಮೂಲಕ ಮಹತ್ತರ ನಿಲುವನ್ನು ತೆಗೆದುಕೊಂಡಿದೆ.