ಗ್ರಾಮೀಣ ಪ್ರದೇಶ ಜನತೆಯನ್ನು ಸಾಕ್ಷರರಾಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಆಂದೋಲನ ನಡೆಸುತ್ತಿವೆ. ಆದರೆ ಅನಕ್ಷರತೆ ಹೋಗಲಾಡಿಸಲು ಮಠಮಾನ್ಯಗಳ ಪಾತ್ರ ಅಪಾರ. ಜ್ಞಾನ ಸಂಪಾದನೆ ಸೇವೆಯಲ್ಲೂ ಮುಂದು ಎಂದು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ರಾಜ್ಯದ ಮಠಮಾನ್ಯಗಳು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸೇವೆಯಲ್ಲಿ ಸದಾ ಮುಂದು ಎಂದು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಹೇಳಿದರು.
ತಾಲೂಕಿನ ಮೂಡುಗೂರು ಉದ್ಧಾನೇಶ್ವರ ವಿರಕ್ತ ಮಠದಲ್ಲಿ ನಿರ್ಮಾಣಗೊಂಡ ಚಿನ್ಮಯ ಜ್ಞಾನಿ ಚನ್ನ ಬಸವಣ್ಣ ದಾಸೋಹ ಭವನ ಲೋಕಾರ್ಪಣೆ ಹಾಗೂ ಶಿವಾನುಭವ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶ ಜನತೆಯನ್ನು ಸಾಕ್ಷರರಾಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಆಂದೋಲನ ನಡೆಸುತ್ತಿವೆ. ಆದರೆ ಅನಕ್ಷರತೆ ಹೋಗಲಾಡಿಸಲು ಮಠಮಾನ್ಯಗಳ ಪಾತ್ರ ಅಪಾರ. ಜ್ಞಾನ ಸಂಪಾದನೆ ಸೇವೆಯಲ್ಲೂ ಮುಂದು ಎಂದು ಅಭಿಪ್ರಾಯಪಟ್ಟರು.
ಸಿದ್ಧಗಂಗಾ ಮಠ, ಚಿತ್ರದುರ್ಗ, ಬಾಲ್ಕಿ, ಆದಿ ಚುಂಚನಗಿರಿ ಹಾಗೂ ಸುತ್ತೂರು ಮಠಗಳು ಜ್ಞಾನ ದಾಸೋಹದ ಜೊತೆಗೆ ಶಿಸ್ತು, ಸಂಸ್ಕಾರ, ನೈತಿಕತೆ ಹೇಳುವ ನಿರಂತರ ತಾಣವಾಗಿವೆ. ಜ್ಞಾನ ಸಂಪಾದನೆಯೇ ಮುಖ್ಯ. ಜ್ಞಾನಕ್ಕೆ ಮಿಗಿಲಾದ ವಸ್ತು ಯಾವುದೂ ಇಲ್ಲ ಎಂದರು.
ಭಾರತದಲ್ಲಿರುವ ಆಧ್ಯಾತ್ಮಿಕ, ಸಾಂಸ್ಕೃತಿಕ ಮಹತ್ವ ಇತರೆ ಇಲ್ಲೂ ಸಿಗಲ್ಲ. ಭಾರತದಲ್ಲಿ ಪ್ರಾಚೀನ ಗ್ರಂಥಗಳಿವೆ. ದೇಶದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆ ವಿದೇಶಗಳಲ್ಲಿ ಪ್ರಚುರವಾಗುತ್ತಿದೆ ಎಂದು ಪ್ರತಿಪಾದಿಸಿದರು.
೧೨ನೇ ಶತಮಾನದಲ್ಲಿ ಬಸವಾದಿ ಶರಣರು ನಾಡಿಗೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಶರಣರ ಕೊಡುಗೆ ಮರೆಯಲು ಎಂದೂ ಸಾಧ್ಯವಿಲ್ಲ. ಅಂದೇ ಬಸವಣ್ಣನವರು ಸಾಮಾಜಿಕ ಸುಧಾರಣೆಗೆ ಬೇಕಾದ ಬುನಾದಿ ಹಾಕಿದ್ದ ಮಹಾನ್ ದಾರ್ಶನಿಕರಾಗಿದ್ದರು ಎಂದರು.
ಸಾಧಕನಿಗೆ ಅನೇಕ ಎಡರು- ತೊಡರು ಬರುತ್ತವೆ, ಹೋಗುತ್ತವೆ. ಹಾಗೇಯೇ ಮೂಡುಗೂರು ಶ್ರೀಗಳು ಕಿರಿಯ ವಯಸ್ಸಿನಲ್ಲೇ ಮಠದ ಅಭಿವೃದ್ಧಿ ಜೊತೆಗೆ ಸಾಮಾಜಿಕ ಸೇವೆ ಮೂಲಕ ಗಮನ ಸೆಳೆದಿದ್ದಾರೆ. ಮೂಡುಗೂರು ಮಠವನ್ನು ಬೆಳೆಸಲಿ ಎಂದು ಆಶಿಸಿದರು.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ನೂತನ ಚಿನ್ಮಯ ಜ್ಞಾನಿ ಚನ್ನ ಬಸವಣ್ಣ ದಾಸೋಹ ಭವನ ಲೋಕಾರ್ಪಣೆ ಬಳಿಕ ಮಾತನಾಡಿ, ಮೂಡುಗೂರು ಶ್ರೀ ಕಿರಿಯ ವಯಸ್ಸಿನಲ್ಲಿಯೇ ಮಠದ ಜವಾಬ್ದಾರಿ ಹೊತ್ತು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ಎಂದರು.
ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಮೂಡುಗೂರು ಶ್ರೀ ಎಲ್ಲರೊಂದಿಗೆ ಬೆರೆಯುತ್ತಿದ್ದಾರೆ. ಅಲ್ಲದೆ ರೈತಪರ, ಜನರ ಹೋರಾಟಕ್ಕೆ ಕೈ ಜೋಡಿಸುತ್ತಿದ್ದಾರೆ. ಇಂಥ ಸಮಾಜ ಮುಖಿ ಶ್ರೀಗಳು ಸಿಕ್ಕಿರುವುದು ಸಂತಸ ತಂದಿದೆ ಎಂದರು.
ಬಸವೇಶ್ವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದ ಚಾಮುಲ್ ನಿರ್ದೇಶಕ ಎಂ.ಪಿ.ಸುನೀಲ್ ಮಾತನಾಡಿ, ಮೂಡುಗೂರು ಮಠದ ಬೆಳವಣಿಗೆಗೆ ಗ್ರಾಮಸ್ಥರು ಹಾಗೂ ತಾಲೂಕಿನ ಭಕ್ತರ ಸಹಕಾರ, ಬೆಂಬಲ ಇರುವುದೇ ಚಿಕ್ಕ ಗ್ರಾಮದಲ್ಲಿ ದೊಡ್ಡ ಸಭೆ ಮಾಡಲು ಸಾಧ್ಯವಾಯಿತು ಎಂದರು.
ಇಮ್ಮಡಿ ಉದ್ಧಾನ ಸ್ವಾಮೀಜಿ ಮಾತನಾಡಿ, ಶ್ರೀ ಮಠದ ಮಹದೇವ ಸ್ವಾಮೀಜಿ ಅವರು ದಾಸೋಹ ಭವನದ ಕನಸು ಹೊತ್ತಿದ್ದರು. ಇಂದು ಭಕ್ತರು ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ನನಸಾಯಿತು ಎಂದರು.
ಕನಕಪುರ ದೇಗುಲ ಮಠಾಧೀಶ ಚನ್ನಬಸವ ಸ್ವಾಮೀಜಿ ಸಮಾರಂಭ ಉದ್ಘಾಟಿಸಿದರು. ದೇವನೂರು ಮಠಾಧೀಶ ಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ನೇತೃತ್ವದ ವಹಿಸಿದ್ದ ಪಡಗೂರು ಮಠಾಧೀಶ ಶಿವಲಿಂಗೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಹೂರದಹಳ್ಳಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಡಾ.ಶಶಿಕಲಾ ಸ್ವಾಗತಿಸಿದರು.
ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ಎಸ್.ನಂಜುಂಡ ಪ್ರಸಾದ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಮಂಡಲ ಅಧ್ಯಕ್ಷ ಮಹದೇವಪ್ರಸಾದ್, ರಾಜ್ಯ ಸಂಯೋಜಕ ಪ್ರಣಯ್, ಪಿಎಲ್ ಡಿಬಿ ಅಧ್ಯಕ್ಷ ಮಾಡ್ರಹಳ್ಳಿ ನಾಗೇಂದ್ರ, ಎಪಿಎಂಸಿ ಅಧ್ಯಕ್ಷ ವಿರೂಪಾಕ್ಷ, ಮಾಜಿ ಅಧ್ಯಕ್ಷರಾದ ಎಸ್.ಶಿವನಾಗಪ್ಪ, ಆರ್.ಎಸ್.ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಬಿ.ರಾಜಶೇಖರ್, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಹಂಗಳ ಮಹದೇವಪ್ಪ, ಮಂಡಲ ಬಿಜೆಪಿ ಉಪಾಧ್ಯಕ್ಷೆ ಶಿವಪುರ ಗೀತಾ, ಫ್ಯಾಕ್ಸ್ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ, ಮಾಜಿ ಅಧ್ಯಕ್ಷ ಬಿ.ಸಿ.ಮಹದೇವಸ್ವಾಮಿ ಹಾಗೂ ಡಾ.ಮಲ್ಲು ಸೇರಿದಂತೆ ಸಾವಿರಾರು ಮಂದಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.