ಕುಷ್ಟಗಿ: ರಾಜ್ಯದ ಮಠ-ಮಾನ್ಯಗಳು ಧಾರ್ಮಿಕ ಸೇವೆಯ ಜತೆಗೆ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿವೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.
ಸ್ವಾತಂತ್ರ್ಯಪೂರ್ವದಿಂದಲೂ ಮಠಗಳು ಶೈಕ್ಷಣಿಕ ಸೇವೆ ಸಲ್ಲಿಸುವ ಜತೆಗೆ ಜನರಿಗೆ ಉತ್ತಮ ಸಂಸ್ಕಾರ ನೀಡುವ ಕಾರ್ಯ ಮಾಡುತ್ತಿವೆ. ಮಠಾಧೀಶರಲ್ಲಿ ತಾಯಿಯಂತಹ ಪ್ರೀತಿ ಮತ್ತು ಕಾಳಜಿ ಇರುತ್ತದೆ. ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ ಮುನ್ನಡೆಸುವ ಶಕ್ತಿ ಮಠಗಳಿಗಿದೆ. ಮನುಷ್ಯ ಜೀವನದಲ್ಲಿ ಹಣ, ಆಸ್ತಿ ಮತ್ತು ಅಧಿಕಾರಕ್ಕಿಂತ ನೆಮ್ಮದಿ ಹಾಗೂ ತೃಪ್ತಿಗೆ ಮಹತ್ವ ನೀಡಬೇಕು. ಹಾಸಿಗೆ ಇದ್ದಷ್ಟು ಕಾಲು ಚಾಚುವ ಬುದ್ಧಿ ಬೆಳೆಸಿಕೊಳ್ಳಬೇಕು ಎಂದರು.
ಜೀವನದಲ್ಲಿ ಎದುರಾಗುವ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ, ತಾಳ್ಮೆ ಮತ್ತು ಸಹನೆಯಿಂದ ಬದುಕಬೇಕು. ಕುಟುಂಬ ಹಾಗೂ ಸಮಾಜದಲ್ಲಿ ಪರಸ್ಪರ ಹೊಂದಾಣಿಕೆ ಬಹಳ ಮುಖ್ಯ. ಹೊಂದಾಣಿಕೆ ಇದ್ದಾಗ ಮಾತ್ರ ಉತ್ತಮ ಸಂಬಂಧಗಳು ಉಳಿಯಲು ಸಾಧ್ಯ. ಅನ್ನ ನೀಡುವ ರೈತರು ಸಮಾಜದ ಬೆನ್ನೆಲುಬಾಗಿದ್ದು, ಅವರ ಶ್ರಮಕ್ಕೆ ಗೌರವ ನೀಡುವ ಮನೋಭಾವ ಪ್ರತಿಯೊಬ್ಬರಲ್ಲೂ ಇರಬೇಕು ಎಂದರು. ಇದೇ ವೇಳೆ ವಿರೂಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಪೂಜಾನಿಷ್ಠೆ ಹಾಗೂ ಧಾರ್ಮಿಕ ಸೇವೆಯನ್ನು ಸ್ಮರಿಸಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ವೀಣಾ ವಿಜಯಾನಂದ ಕಾಶಪ್ಪನವರು ಮಾತನಾಡಿ, ಮಕ್ಕಳಿಗೆ ಕೇವಲ ಅಂಕ ಗಳಿಸುವ ಶಿಕ್ಷಣ ನೀಡಿದರೆ ಸಾಲದು. ಅದರ ಜತೆಗೆ ಉತ್ತಮ ಸಂಸ್ಕಾರ, ಸನ್ನಡತೆ, ಹಿರಿಯರನ್ನು ಗೌರವಿಸುವ ಗುಣ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಬಾಲ್ಯದಲ್ಲಿಯೇ ಕಲಿಸುವ ಸಂಸ್ಕಾರ ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಉತ್ತಮ ಸಂಸ್ಕಾರದಿಂದ ಮಾತ್ರ ಮನುಷ್ಯನ ಸಮಗ್ರ ಬೆಳವಣಿಗೆ ಸಾಧ್ಯ. ಆದ್ದರಿಂದ ಪಾಲಕರು ಮಕ್ಕಳಿಗೆ ಉತ್ತಮ ನಡವಳಿಕೆ ಕಲಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಚಳಗೇರಿ ಶ್ರೀಮಠದ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಕುದರಿಮೋತಿಯ ವಿಜಯ ಮಹಾಂತ ಸ್ವಾಮಿಗಳು, ಕೇಸೂರಿನ ಚಂದ್ರಶೇಖರ ದೇವರು, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ, ಬಳ್ಳಾರಿ ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ, ದೇವೇಂದ್ರಪ್ಪ ಬಳೂಟಗಿ, ಕಲ್ಲೇಶ ತಾಳದ್, ವಿಶ್ವನಾಥ ಕನ್ನೂರು, ಬಸವರಾಜ ಹಳ್ಳೂರು ಉಪಸ್ಥಿತರಿದ್ದರು.