ಹಾವೇರಿ: ಗಣಿತವು ಎಲ್ಲ ವಿಜ್ಞಾನಗಳ ತಾಯಿ. ಅದು ಎಂದೂ ಸುಳ್ಳು ಹೇಳುವುದಿಲ್ಲ, ಸತ್ಯವನ್ನೇ ಪ್ರತಿಪಾದಿಸುತ್ತದೆ. ನಾನು ಗಣಿತ ಮಾಸ್ತರ, ನನ್ನ ಹೆಂಡತಿಯ ಹೆಸರು ರುದ್ರಮ್ಮ. ಅದರೆ ಗಣಿತ ಪ್ರೀತಿಯಿಂದ ಜಗತ್ತಿನ ಮೊದಲ ಗಣಿತಜ್ಞೆ ಲೀಲಾವತಿಯ ಹೆಸರನ್ನು ಲಗ್ನ ಪತ್ರದಲ್ಲಿ ಹಾಕಿಸಿ ಮದುವೆಯಾದೆ. ವಿಜ್ಞಾನ ತರಗತಿಯಿಂದ ನನಗೆ ಇಂಗ್ಲಿಷ್ ಬರೊಲ್ಲ ಎಂದು ಹೊರಗೆ ಹಾಕಿದಾಗ ಕನ್ನಡ ಕಲಿಯಲಾರಂಭಿಸಿ ಸಾಹಿತಿಯಾದೆ ಎಂದು ನಿವೃತ್ತ ಗಣಿತ ಪ್ರೊ.ಕೋರಗಲ್ ವಿರೂಪಾಕ್ಷಪ್ಪ ಹೇಳಿದರು.ನಗರದ ಜಿ.ಎಚ್.ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ವಿಭಾಗದಿಂದ ‘ಸಾಧಕರೊಂದಿಗೆ ಸಂವಾದ’ ದಲ್ಲಿ ಭಾಗವಹಿಸಿ ಕೇಳುಗರ ಪ್ರಶ್ನೆಗಳಿಗೆ ಮೇಲಿನಂತೆ ಉತ್ತರಿಸಿದರು. ಸುಮಾರು ಎರಡು ಗಂಟೆಗಳ ಕಾಲ ನೆನಪಿನ ಬುತ್ತಿ ಬಿಚ್ಚಿಟ್ಟರು. ನಂತರ ನಡೆದ ಸಂವಾದರೋಚಕ, ಹಾಸ್ಯ, ಗಂಭೀರ ಹಲವು ವಲಯಗಳಲ್ಲಿ ತುಂಬಿದ ಸಭೆಯನ್ನು ಮಂತ್ರ ಮುಗ್ಧರನ್ನಾಗಿಸಿದರು.ಹದಿನೈದು ವರ್ಷದವನಿದ್ದಾಗ ಕನ್ನಡ ಶಾಲೆಗೆ ಹೊರಟೆ. ಅಲ್ಲಿಯ ತನಕ ದನಕಾಯುವುದೇ ನನ್ನ ಕಾಯಕವಾಗಿತ್ತು. ಉಕ್ಕಿನ ಮನುಷ್ಯನೆಂದೇ ಪ್ರಸಿದ್ಧರಾದ ಕೆ.ಎಚ್. ಪಾಟೀಲರು ನನಗೆ ಬದುಕನ್ನು ಕೊಟ್ಟರು. ಅವರೇ ಸಂದರ್ಶನ ನಡೆಸಿ ಗಣಿತ ಪ್ರಾಧ್ಯಾಪಕನ್ನನ್ನಾಗಿಸಿದರು. ಅರವತ್ತು ವರ್ಷಗಳ ಹಿಂದೆ ಇದೇ ದಿನ (ಆ. ೧) ನಾನು ಜಿ.ಎಚ್.ಕಾಲೇಜಿಗೆ ಹಾಜರ್ ಆಗಿದ್ದೆ. ಅಂತಹ ಇನ್ನೊಂದು ಸುದಿನ ಸಂವಾದ ನಡೆಯುತ್ತಿರುವುದು ಆತ್ಮತೃಪ್ತಿ ತಂದಿದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರಾದ ಕೆ.ಎಚ್. ಚನ್ನೂರ ಪ್ರಾಸ್ತಾವಿಕ ಮಾತನಾಡಿ, ವಿಭಾಗ ಮಟ್ಟದಲ್ಲಿ ಬೇರೆ ಬೇರೆ ಕ್ಷೇತ್ರ ಸಾಧಕರನ್ನು ಗುರುತಿಸಿ ಅವರೊಂದಿಗೆ ಸಂವಾದ ನಡೆಸುವುದು, ಅವರ ಅನುಭವಗಳ ಮೂಲಕ ಹೊಸ ಪೀಳಿಗೆಗೆ ಪ್ರೋತ್ಸಾಹದ ದಾರಿತೋರಿಸುವುದೇ ಸಂವಾದದ ಉದ್ದೇಶ ಎಂದರು.ಸಂವಾದದಲ್ಲಿ ಬಸವ ಬಳಗದ ಅಧ್ಯಕ್ಷ ವಿರೂಪಾಕ್ಷಪ್ಪ ಯಳಗೇರಿ, ಶಂಭನಗೌಡ ನೀರಲಗಿ, ಶ್ರೀದೇವಿ ದೊಡ್ಡಮನಿ, ಸಿದ್ದೇಶ್ವರ ಹುಣಸಿಕ್ಕಟ್ಟೀಮಠ, ಡಾ.ಆತ್ಮಾನಂದ ಹೊಳೆಯಣ್ಣವರ, ಸ್ನೇಹಾ ಹಿರೇಮಠ, ಎಸ್.ಸಿ. ಹೊಸಮನಿ, ಸೌಮ್ಯಾ ಶಿಶುನಾಳ, ರಾಜೇಂದ್ರ ರಿತ್ತಿ, ರವೀಂದ್ರ ಶೆಟ್ಟರ, ಭೀಮ ಹೊಳೆಪ್ಪನವರ, ಮಂಜುನಾಥ ಸಣ್ಣಿಂಗಮ್ಮನವರ, ಚಂದ್ರಶೇಖರ ಮಾಳಗಿ, ಜುಬೇದಾ ನಾಯಕ್, ಶಶಿಕಲಾ ಅಕ್ಕಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಪ್ರೊ.ಕೋರಗಲ್ ವಿರುಪಾಕ್ಷಪ್ಪ ಅವರನ್ನು ಇಲಾಖೆ ಪರವಾಗಿ ಸನ್ಮಾನಿಸಲಾಯಿತು. ಪ್ರಾ.ಎಂ.ಎಂ. ಹೊಳ್ಳಿಯವರ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸಂಜೀವನಾಯಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೀರಯ್ಯಸ್ವಾಮಿ ಹಿರೇಮಠ, ಸಾಹಿತಿ ಡಾ.ಸತೀಶ ಕುಲಕರ್ಣಿ, ಕೋರಗಲ್‌ರ ಪುತ್ರ ರವಿಶಂಕರ್ ಕೋರಗಲ್, ಪುಷ್ಪಾ ಕೋರಗಲ್ ಹಾಗೂ ಪುತ್ರಿ ನಂದಿನಿ ವಿ.ಕೆ. ವೇದಿಕೆಯಲ್ಲಿದ್ದರು. ಕಾರ್ಯಕ್ರಮವನ್ನು ಅನಿತ ಹರನಗಿರಿ ನಡೆಸಿಕೊಟ್ಟರು.