ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಪೈಪೋಟಿ, 22 ಆಕಾಂಕ್ಷಿಗಳಿಂದ ಅರ್ಜಿ

KannadaprabhaNewsNetwork |  
Published : Aug 03, 2026, 02:00 AM IST
ಕಾಂಗ್ರೆಸ್‌ ಚಿಹ್ನೆ | Kannada Prabha

ಸಾರಾಂಶ

ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಹುದ್ದೆಯ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಇದರಿಂದ ಕಾಂಗ್ರೆಸ್ ಮುಖಂಡರ ನಡುವೆ ಭಾರೀ ಪೈಪೋಟಿ ಶುರುವಾಗಿದೆ.

ನಾರಾಯಣ ಹೆಗಡೆಕನ್ನಡಪ್ರಭ ವಾರ್ತೆ ಹಾವೇರಿಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಹುದ್ದೆಯ ಮೇಲೆ ಹಲವರು ಕಣ್ಣಿಟ್ಟಿದ್ದಾರೆ. ಇದರಿಂದ ಕಾಂಗ್ರೆಸ್ ಮುಖಂಡರ ನಡುವೆ ಭಾರೀ ಪೈಪೋಟಿ ಶುರುವಾಗಿದೆ.

ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 22 ಮಂದಿ ಮುಖಂಡರು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದು, ಪಕ್ಷದೊಳಗೆ ತೀವ್ರ ರಾಜಕೀಯ ಚಟುವಟಿಕೆಗಳು ಆರಂಭವಾಗಿವೆ.

ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಎಐಸಿಸಿ ದೇಶಾದ್ಯಂತ ''''ಸಂಘಟನ ಸೃಜನ ಅಭಿಯಾನ'''' ನಡೆಸುತ್ತಿದೆ. ಇದರ ಭಾಗವಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯನ್ನು ಈ ಬಾರಿ ಹೆಚ್ಚು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಹಿಂದೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಸ್ಥಳೀಯ ಶಾಸಕರ ಅಭಿಪ್ರಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದರೆ, ಈ ಬಾರಿ ಬ್ಲಾಕ್ ಮಟ್ಟದಿಂದಲೇ ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ವಿಧಾನ ಅನುಸರಿಸಲಾಗಿದೆ.ಈ ಹಿನ್ನೆಲೆಯಲ್ಲಿ ಎಐಸಿಸಿ ನೇಮಿಸಿರುವ ವೀಕ್ಷಕರು ಹಾವೇರಿ ಜಿಲ್ಲೆಯ ಎಲ್ಲ ಆರು ವಿಧಾನಸಭಾ ಕ್ಷೇತ್ರಗಳ 12 ಬ್ಲಾಕ್‌ಗಳಿಗೆ ಭೇಟಿ ನೀಡಿ ಕಾರ್ಯಕರ್ತರು, ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಇದೇ ವೇಳೆ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸಹ ಸ್ವೀಕರಿಸಿದ್ದಾರೆ.ಪ್ರಮುಖ ಆಕಾಂಕ್ಷಿಗಳ ಪಟ್ಟಿ:ಎಐಸಿಸಿ ಹಾವೇರಿ ಜಿಲ್ಲಾ ಉಸ್ತುವಾರಿಯಾಗಿ ಆಂಧ್ರಪ್ರದೇಶದ ಮಾಜಿ ಶಾಸಕ ಶೇಖ್ ಮಸ್ತಾನ್ ವಲಿ ಅವರನ್ನು ನೇಮಿಸಿದೆ. ಅವರ ನೇತೃತ್ವದಲ್ಲಿ ನಡೆದ ಸಭೆಗಳ ವೇಳೆ ಒಟ್ಟು 22 ಮಂದಿ ಅಧ್ಯಕ್ಷ ಸ್ಥಾನಕ್ಕೆ ಆಸಕ್ತಿ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ.ಹಾಲಿ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಶ್ರೀಧರ ದೊಡ್ಮನಿ, ಟಾಕನಗೌಡ ಪಾಟೀಲ, ಬಸವರಾಜ ಹೆಡಿಗ್ಗೊಂಡ, ಗೀತಾ ಪೂಜಾರ ಪುಟ್ಟಪ್ಪ ಮರಿಯಮ್ಮನವರ, ಶೇರೂಖಾನ ಕಾಬೂಲಿ, ಎಸ್.ಎಫ್. ಮಡಕಟ್ಟಿ ಹಾಗೂ ಪ್ರೇಮಾ ಪಾಟೀಲ ಸೇರಿದಂತೆ ಹಲವು ಪ್ರಮುಖ ಮುಖಂಡರು ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯಲ್ಲಿದ್ದಾರೆ.ಎಐಸಿಸಿ ವೀಕ್ಷಕರು ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದಾರೆ. ಜಿಲ್ಲೆಯಲ್ಲಿ ಬ್ಲಾಕ್ ಮಟ್ಟದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಪರಿಶೀಲಿಸುವುದರ ಜೊತೆಗೆ, ಸಂಬಂಧಿತ ಕ್ಷೇತ್ರಗಳ ಶಾಸಕರ ಅಭಿಪ್ರಾಯವನ್ನೂ ಪಡೆಯಲಿದ್ದಾರೆ. ಬಳಿಕ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಅಂತಿಮ ಹೆಸರುಗಳನ್ನು ಹೈಕಮಾಂಡ್‌ಗೆ ಕಳುಹಿಸಲಿದ್ದಾರೆ. ಅಂತಿಮವಾಗಿ ಎಐಸಿಸಿಯೇ ಜಿಲ್ಲಾಧ್ಯಕ್ಷರ ಹೆಸರನ್ನು ಘೋಷಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ನೀರಲಗಿಗೆ ಮತ್ತೊಂದು ಅವಧಿ ಸಿಗುತ್ತಾ?: ಕಳೆದ 2 ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಸಂಜೀವಕುಮಾರ ನೀರಲಗಿ, ಪಕ್ಷ ಸಂಘಟನೆಯಲ್ಲಿ ಸಕ್ರಿಯ ಪಾತ್ರ ವಹಿಸಿರುವುದಾಗಿ ಪಕ್ಷದ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಜಿಲ್ಲೆಯ ಬಹುತೇಕ ಕಾಂಗ್ರೆಸ್ ಶಾಸಕರ ಬೆಂಬಲವೂ ಅವರಿಗೆ ಇದೆ ಎನ್ನಲಾಗುತ್ತಿದೆ. ವಿಶೇಷವಾಗಿ ಶಿಗ್ಗಾಂವಿ ಉಪಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಅವರು ಸಂಘಟನಾತ್ಮಕವಾಗಿ ಶ್ರಮಿಸಿದ್ದಾರೆ. ಅವರ ಅಧ್ಯಕ್ಷೀಯ ಅವಧಿಯೂ ಇನ್ನೂ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಅವರು ಅರ್ಜಿ ಸಲ್ಲಿಸಿದ್ದು, ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಸಂಜೀವಕುಮಾರ ನೀರಲಗಿ ಅವರನ್ನು ಮುಂದುವರಿಸುವುದಿಲ್ಲ ಎಂದು ವರಿಷ್ಠರು ನಿರ್ಧರಿಸಿದರೆ ತಮ್ಮನ್ನು ಪರಿಗಣಿಸುವಂತೆ ಕೊಟ್ರೇಶಪ್ಪ ಬಸೇಗಣ್ಣಿ ಬೇಡಿಕೆ ಇಟ್ಡಿದ್ದಾರೆ. ಎಸ್ಸಿ, ಎಸ್ಟಿಗಳಿಗೆ ಅವಕಾಶ ನೀಡುವಂತೆ ಬಸವರಾಜ್ ಹೆಡಿಗ್ಗೊಂಡ ಮನವಿ ಮಾಡಿದ್ದಾರೆ. ಇದರಿಂದ ಯಾರಿಗೆ ಪಕ್ಷ ಸಂಘಟನೆ ಜವಾಬ್ದಾರಿ ಸಿಗಲಿದೆ ಎಂಬುದು ಕೈ ಕಾರ್ಯಕರ್ತರ ಕುತೂಹಲಕ್ಕೆ ಕಾರಣವಾಗಿದೆ. "ಈ ಬಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯನ್ನು ಹೈಕಮಾಂಡ್ ನೇರವಾಗಿ ಅಂತಿಮಗೊಳಿಸಲಿದೆ. ಈಗಾಗಲೇ ಎಐಸಿಸಿ ವೀಕ್ಷಕರು ಜಿಲ್ಲೆಯ ಎಲ್ಲ ಬ್ಲಾಕ್‌ಗಳಿಗೆ ಭೇಟಿ ನೀಡಿ ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆ ವರದಿಯನ್ನು ಎಐಸಿಸಿಗೆ ಸಲ್ಲಿಸಿದ ಬಳಿಕ ಅಂತಿಮ ನಿರ್ಧಾರ ಪ್ರಕಟವಾಗಲಿದೆ ಎಂದು ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವ ಹಕ್ಕುಗಳಿಂದ ಯಾರೂ ವಂಚಿತರಾಗದಿರಲಿ
ಭಾರತದ ಐತಿಹಾಸಿಕ ಪರಂಪರೆ ವಿಶ್ವಕ್ಕೆ ಶ್ರೇಷ್ಠ