ಜೀವನದ ಸಮಸ್ಯೆಗಳಿಗೆ ಗಣಿತವೇ ಪರಿಹಾರ

KannadaprabhaNewsNetwork |  
Published : Jan 04, 2025, 12:33 AM IST
(3ಎನ್.ಆರ್.ಡಿ3 ಶಾಲಾ ಗಣಿತ ಮಾದರಿ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಜಿ.ಟಿ.ಗುಡಿಸಾಗರ ಮಾತನಾಡುತ್ತಿದ್ದಾರೆ.)  | Kannada Prabha

ಸಾರಾಂಶ

ಗಣಿತಕ್ಕೆ ಭಾರತೀಯರ ಕೊಡುಗೆ ಅಪಾರ. ಅದರಲ್ಲೂ ಶ್ರೀನಿವಾಸ್ ರಾಮಾನುಜಂ ವಿಶ್ವದಲ್ಲಿಯೇ ಶ್ರೇಷ್ಠ ಗಣಿತಶಾಸ್ತ್ರಜ್ಞರಾಗಿ ಜನಪ್ರಿಯರಾದರು

ನರಗುಂದ: ಜೀವನದಲ್ಲಿ ತಾರ್ಕಿಕ ಮನೋಭಾವ, ಆಲೋಚನಾ ಶಕ್ತಿ, ಬುದ್ಧಿ ಶಕ್ತಿಯ ಬೆಳವಣಿಗೆಗೆ ನಿರಂತರ ಗಣಿತ ಕಲಿಕೆಯಿಂದ ಮಾತ್ರ ಸಾಧ್ಯ. ಅದರಂತೆ ಜೀವನದ ಸಾಮಾನ್ಯ ಸಮಸ್ಯೆಗಳ ಪರಿಹಾರಕ್ಕೆ ಗಣಿತವೇ ಪರಿಹಾರವಾಗಿದೆ ಎಂದು ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ ಹೇಳಿದರು.

ಅವರು ಪಟ್ಟಣದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಲಯನ್ಸ್ ಶಿಕ್ಷಣ ಸಂಸ್ಥೆಯಿಂದ ನಡೆದ ತಾಲೂಕು ಮಟ್ಟದ ಅಂತರ ಶಾಲಾ ಗಣಿತ ಮಾದರಿ ವಸ್ತು ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಗಣಿತ ಕಬ್ಬಿಣದ ಕಡಲೆ ಎಂದು ಪರಿಗಣಿಸದೇ ಅದರ ಜತೆ ತಾವು ತಲ್ಲೀನರಾಗಬೇಕು. ವಿವಿಧ ಸೂತ್ರ, ತಂತ್ರಗಳೊಂದಿಗೆ ನಿರಂತರ ಲೆಕ್ಕ ಬಿಡಿಸಿದಾಗ ಸರಳವಾಗಿ ಗಣಿತ ಕಲಿಯಬಹುದು. ಗಣಿತದಲ್ಲಿ ಪಾಂಡಿತ್ಯ ಹೊಂದಿದರೆ, ಎಲ್ಲ ವಿಷಯಗಳಲ್ಲಿ ಪಾಂಡಿತ್ಯ ಹೊಂದಿದಂತೆ. ಆದ್ದರಿಂದ ಲಕ್ಷವಿಟ್ಟು ಗಣಿತ ಕಲಿತು ಎಲ್ಲ ರೀತಿಯ ಜ್ಞಾನ ಹೊಂದಬೇಕು. ಗಣಿತಕ್ಕೆ ಭಾರತೀಯರ ಕೊಡುಗೆ ಅಪಾರ. ಅದರಲ್ಲೂ ಶ್ರೀನಿವಾಸ್ ರಾಮಾನುಜಂ ವಿಶ್ವದಲ್ಲಿಯೇ ಶ್ರೇಷ್ಠ ಗಣಿತಶಾಸ್ತ್ರಜ್ಞರಾಗಿ ಜನಪ್ರಿಯರಾದರು. ಗಣಿತಕ್ಕೆ ಸಂಬಂಧಿಸಿದ ಪುಸ್ತಕ ಬರೆದರು. ಅವರ ಜೀವನ ಚರಿತ್ರೆ ಹಾಗೂ ಗಣಿತ ಸಾಧನೆ ಅರಿಯಬೇಕು. ಈ ರೀತಿಯ ಗಣಿತದ ಮಾದರಿಗಳ ವಸ್ತು ಪ್ರದರ್ಶನ ಪಟ್ಟಣದಲ್ಲಿ ಪ್ರಥಮವಾಗಿ ನಡೆಯುತ್ತಿರುವುದು ವಿಶೇಷ ಎಂದರು.

ಆಕರ್ಷಕ ಮಾದರಿ ಪ್ರದರ್ಶನ, ಗಣಿತದ ಮಾದರಿ ವಸ್ತು ಪ್ರದರ್ಶನದಲ್ಲಿ ಜ್ಞಾನ ಮುದ್ರಾ ಪಬ್ಲಿಕ್ ಶಾಲೆ, ಶಾರದಾಂಬಾ ಪ್ರೌಢ ಶಾಲೆ, ಜಗನ್ನಾಥ ಅಕ್ಷರಂ ವಿದ್ಯಾಮಂದಿರ, ಎಸ್‌.ಎಂ.ವಿ ಸಿಬಿಎಸ್‍ಇ ಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ಅಲ್ಲಮಪ್ರಭು ಪ್ರೌಢ ಶಾಲೆ, ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಘಾತಾಂಕಗಳ ನಿಯಮ, ವಾಸ್ತವ ಸಂಖ್ಯೆ, ಭಿನ್ನರಾಶಿ, ರೇಖಾ ಗಣಿತದ ನಗರ, ತ್ರಿಕೋನ ಮಿತಿಯ ತೋಟ, ಘನಾಕೃತಿಗಳ ರಚನೆ, ಪೈಥಾಗೋರಸನ ಪ್ರಮೇಯದ ಮಾದರಿ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳ 100 ವಿದ್ಯಾರ್ಥಿಗಳಿಂದ 70ಕ್ಕೂ ಹೆಚ್ಚು ಗಣಿತದ ಮಾದರಿಗಳ ವಸ್ತು ಪ್ರದರ್ಶನ ಆಕರ್ಷಕವಾಗಿ ನಡೆಯಿತು. ಪಟ್ಟಣದ ವಿವಿಧ ಶಾಲೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹದಲಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಪಿ.ಸಿ. ಕಲಹಾಳ ಮಾತನಾಡಿ, ಗಣಿತ ನಿರಂತರ ಚಟುವಟಿಕೆಗಳ ಮೂಲಕ ಸರಳವಾಗಿಸಲು ಸಾಧ್ಯ. ಅದರಷ್ಟು ಸರಳವಾದ ವಿಷಯ ಮತ್ತೊಂದಿಲ್ಲ. ಜೀವನಕ್ಕೆ ಹತ್ತಿರವಾಗಿರುವ ಗಣಿತ ಬದುಕಿನ ಸಮಸ್ಯೆ ಪರಿಹರಿಸಲು ಸಾಧ್ಯ. ಗಣಿತ ಇಲ್ಲದೇ ಉಳಿದ ವಿಷಯ ಅರಿಯಲು ಸಾಧ್ಯವಿಲ್ಲ. ಗಣಿತ ಎಲ್ಲ ವಿಷಯಗಳ ಮಹಾರಾಣಿಯಾಗಿದೆ. ನಿರಂತರ ಅಭ್ಯಾಸ ಮಾಡುವ ಮೂಲಕ ಗಣಿತವನ್ನು ಸರಳವಾಗಿಸಬಹುದು.ಎಲ್ಲದಕ್ಕೂ ಮೂಲಾಧಾರವಾಗಿರುವ ಸೊನ್ನೆ ನಮ್ಮ ದೇಶ ಕೊಡುಗೆ ನೀಡಿದ್ದು ವಿಶ್ವವೇ ಮೆಚ್ಚುವಂತದ್ದಾಗಿದೆ. ವಿದ್ಯಾರ್ಥಿಗಳು ಗಣಿತ ಕಲಿಯಲು ಆಸಕ್ತಿ ತೋರಬೇಕು.ಇದರಿಂದ ಎಲ್ಲ ವಿಷಯ ಸರಳವಾಗಿಸಲು ಸಾಧ್ಯ. ಲಯನ್ಸ್ ಶಿಕ್ಷಣ ಸಂಸ್ಥೆ ಗಣಿತದ ಮಾದರಿ ವಸ್ತು ಪ್ರದರ್ಶನ ಮಾಡಿದ್ದು ಶ್ಲಾಘನೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿರ್ದೇಶಕ ಜಿ.ಬಿ. ಕುಲಕರ್ಣಿ, ಡಾ. ಬಿ.ಎಂ. ಜಾಬಣ್ಣವರ, ಸಿ.ಎಸ್. ಸಾಲೂಟಗಿಮಠ, ವಿಜಯಕುಮಾರ ಬೇಲೇರಿ, ಎಸ್.ಎಸ್. ಪಾಟೀಲ, ರಾಘವೇಂದ್ರ ಆನೇಗುಂದಿ, ಬಿ.ಗಂಗಾಧರ, ಐ.ಎಂ. ಹುರಕಡ್ಲಿ, ಮಾರುತಿ ಭಜಂತ್ರಿ, ನಿತಿನ್ ಕೇಸರಕರ, ಮುಖ್ಯೋಪಾಧ್ಯಯ ಡಾ. ವೈ.ಪಿ.ಕಲ್ಲನಗೌಡ್ರ, ಪ್ರಾಚಾರ್ಯ ಎಸ್.ಜಿ. ಜಕ್ಕಲಿ, ಗಣಿತ ವಿಭಾಗದ ವಿಭಾ ರಾಮದುರ್ಗ, ಕಿರಣ ಪೂಜಾರ, ಪಾರ್ವತಿ ಹಿರೇಮಠ, ಅಕ್ಷತಾ ಅವಘಾನ, ಪೂಜಾ ಚವಡನ್ನವರ ಭಾಗವಹಿಸಿದ್ದರು.

ಅಕ್ಷತಾ ಅವಘಾನ ಸ್ವಾಗತಿಸಿದರು. ಪಾರ್ವತಿ ಹಿರೇಮಠ ನಿರೂಪಿಸಿದರು. ಪೂಜಾ ಚವಡನ್ನವರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು