ಲಕ್ಷ್ಮೇಶ್ವರ: ಮಕ್ಕಳಲ್ಲಿ ಗಣಿತ ಕಲಿಕೆ ದೃಢಗೊಂಡರೆ ಅದರ ಧನಾತ್ಮಕ ಪರಿಣಾಮ ವ್ಯಕ್ತಿತ್ವದ ಮೇಲೆ ಉಂಟಾಗುತ್ತದೆ. ಗಣಿತದ ಮೂಲಕ ನಾವು ನಮ್ಮ ವ್ಯಕ್ತಿತ್ವ ವಿಕಸಿಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ನಾಯ್ಕ ಹೇಳಿದರು.
ಗಣಿತ ವಿಷಯದಲ್ಲಿ ಮಕ್ಕಳಲ್ಲಿರುವ ಭಯ ದೂರ ಮಾಡಿ ಅವರಲ್ಲಿ ಗಣಿತ ಬಗ್ಗೆ ಆಶಕ್ತಿ ಹುಟ್ಟುವಂತೆ ಬೋಧಿಸುವ ಕಾರ್ಯ ಮಾಡುವುದು ಅಗತ್ಯವಾಗಿದೆ. ಮಕ್ಕಳಿಗೆ ಗಣಿತದ ಸೂತ್ರಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸಿ ಅವರಲ್ಲಿ ಗಣಿತವೆಂದರೆ ಕಬ್ಬಿಣದ ಕಡಲೆಯಲ್ಲಿ ಅದು ಸಿಹಿ ಹೋಳಿಗೆಯಂತಾಗಬೇಕು. ಗಣಿತ ವಿಷಯದಲ್ಲಿ ಈಗ ಸಾಕಷ್ಟು ಬದಲಾವಣೆಗಳು ಆಗಿದ್ದು ವಿದ್ಯಾರ್ಥಿ ಸ್ನೇಹಿ ಪಠ್ಯದಲ್ಲಿ ಗಣಿತ ವಿಷಯವನ್ನು ಸುಲಭವಾಗಿ ಅರ್ಥ ಮಾಡಿಸುವ ಕಾರ್ಯ ಶಿಕ್ಷಕರು ಮಾಡಬೇಕು ಎಂದು ಹೇಳಿದರು.
ಈ ವೇಳೆ ಬಿಆರ್‌ಪಿ ಈಶ್ವರ ಮೆಡ್ಲೇರಿ ಮಾತನಾಡಿ, ಗಣಿತ ಕಲಿಕಾ ಆಂದೋಲನದ ಗಣಿತ ಸ್ಪರ್ಧೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಇದ್ದು, ಇದು ಅವರಲ್ಲಿ ಗಣಿತದ ಕಲಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶ ಹೊಂದಿದೆ.ಈ ಪರೀಕ್ಷೆಗಳ ಫಲಿತಾಂಶ ವಿಶ್ಲೇಷಿಸಿ ಗಣಿತದ ಕಲಿಕೆಗೆ ಮತ್ತಷ್ಟು ಪೂರಕ ಯೋಜನೆ ರೂಪಿಸಲಾಗುತ್ತದೆ ಎಂದರು.ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಬರಮಪ್ಪ ಹಳ್ಳಿಗೊರವರ ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಪ್ರೌಢಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಸುರೇಶ ಸಾಸಲವಾಡ ಅತಿಥಿಪರ ಮಾತುಗಳನ್ನಾಡಿದರು.
ಮುಖ್ಯೋಪಾಧ್ಯಾಯ ಎಸ್.ಎಂ. ಲಮಾಣಿ ವಂದಿಸಿದರು. ದೈಹಿಕ ಶಿಕ್ಷಕ ಎ.ಎಂ.ಗುತ್ತಲ ನಿರೂಪಿಸಿದರು. ಸಿಆರ್ ಪಿ ಗಿರೀಶ ನೇಕಾರ ಸ್ವಾಗತಿಸಿದರು.ಲಾವಣ್ಯ ಮಾಗಡಿ ಪ್ರಾರ್ಥಿಸಿದಳು.