ಕೋಟೆ ಕೆರೆ ಒತ್ತುವರಿ ತೆರವು ವಿಳಂಬ: ಕಟಾರಿಯಾ ಗರಂ

KannadaprabhaNewsNetwork | Published : Sep 14, 2024 1:49 AM

ಸಾರಾಂಶ

ಚಿಕ್ಕಮಗಳೂರು, ನಗರದ ಕೋಟೆ ಕೆರೆ ಒತ್ತುವರಿ ತೆರವುಗೊಳಿಸುವಂತೆ ಹಿಂದಿನ ಸಭೆಯಲ್ಲಿ ಸೂಚನೆ ನೀಡಿದ್ದರೂ ಕೂಡ ಈ ಕೆಲಸ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್‌ ಕಟಾರಿಯಾ ಗುಡುಗಿದರು.

ತೆರವು ಮಾಡದಂತೆ ಯಾವುದೇ ಪೋನ್‌ ಬಂದರೆ ಸ್ಪಂದಿಸಬೇಡಿ । ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್‌ ವಾರ್ನಿಂಗ್‌

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರದ ಕೋಟೆ ಕೆರೆ ಒತ್ತುವರಿ ತೆರವುಗೊಳಿಸುವಂತೆ ಹಿಂದಿನ ಸಭೆಯಲ್ಲಿ ಸೂಚನೆ ನೀಡಿದ್ದರೂ ಕೂಡ ಈ ಕೆಲಸ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್‌ ಕಟಾರಿಯಾ ಗುಡುಗಿದರು.

ಜಿಲ್ಲಾ ಪಂಚಾಯ್ತಿಯಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಸಮಗ್ರ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋಟೆ ಕೆರೆ ಒತ್ತುವರಿ ತೆರವು ಆಗದೆ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಕಳೆದ ಎರಡು ಸಭೆಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದೆ, ಕೆರೆ ಒತ್ತುವರಿಯಾಗಿರುವುದು ಗಮನಕ್ಕೆ ಬಂದಿತು. ಕೂಡಲೇ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಬೇಕೆಂದು ಸೂಚನೆ ನೀಡಿದ್ದೆ ಆದರೆ, ಆ ಕೆಲಸ ಇನ್ನೂ ಆಗಿಲ್ಲ. ಸಭೆಗಳು ನಡೆಸುವುದು ಪ್ರಗತಿ ಬಗ್ಗೆ ಪರಿಶೀಲನೆ ನಡೆಸಲು ಇಲ್ಲಿಗೆ ಬಂದು ಗಂಟೆಗಟ್ಟಲೆ ಕುಳಿತು ಮಾತನಾಡಿ, ಕಾಫಿ ಟೀ ಕುಡಿದು ಹೋದ್ರೆ ಜನ ನಮ್ಮ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ ಅಲ್ವಾ, ಈ ರೀತಿಯ ಉದಾಸೀನತೆ ಸಹಿಸಿಕೊಳ್ಳಲಾಗದು ಎಂದು ಹೇಳಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಭೂ ಮಾಪನ ಇಲಾಖೆ ಅಧಿಕಾರಿಗಳು ಉತ್ತರ ನೀಡಿ, ಮಳೆ ಬಂದು ಕೆರೆಯ ಸುತ್ತಲೂ ಕೆಸರು ಇದ್ದರಿಂದ ಸರ್ವೆ ಮಾಡಲು ಆಗಲಿಲ್ಲ ಎಂದು ಹೇಳಿದರು. ಇಂತಹ ಪ್ರದೇಶಗಳಲ್ಲಿ ಸರ್ವೆ ಮಾಡಲು ದ್ರೋಣ್‌ ಬಳಸುತ್ತಾರೆ. ಇಲ್ಲೂ ಕೂಡ ದ್ರೋಣ್‌ ಬಳಸಿ ಸರ್ವೆ ಮಾಡಿ ಒತ್ತುವರಿ ಖುಲ್ಲಾ ಮಾಡಿಸಬಹುದಾಗಿತ್ತು. ಆದರೆ, ಮಾಡಿಲ್ಲ. ಇದೇ ರೀತಿಯಲ್ಲಿ ಉದಾಸೀನತೆ ಪದೇ ಪದೇ ಮುಂದುವರೆಯಬಾರದು, ಕೂಡಲೇ ಒತ್ತುವರಿ ಖುಲ್ಲಾಗೊಳಿಸಿ ಆ ಜಾಗವನ್ನು ಇಲಾಖೆಯ ಸ್ವಾಧೀನಕ್ಕೆ ಪಡೆಯಬೇಕು ಎಂದು ಸೂಚನೆ ನೀಡಿದರು.

ಕೆರೆಗಳ ಒತ್ತುವರಿ ತೆರವುಗೊಳಿಸಿ ಆ ಪ್ರದೇಶವನ್ನು ನಮ್ಮ ಸ್ವಾಧೀನಕ್ಕೆ ಪಡೆದುಕೊಂಡರೆ ಸಾಲದು, ಆ ಭಾಗದಲ್ಲಿ ಟ್ರಂಚ್‌ ಹೊಡೆಯಬೇಕು. ಒತ್ತುವರಿ ಪ್ರದೇಶದಲ್ಲಿ ಸಂಬಂಧಪಟ್ಟ ವ್ಯಕ್ತಿಯ ಯಾವುದೇ ಮರಗಳು ಅಥವಾ ಇನ್ನಾವುದೇ ಸಂಪನ್ಮೂಲ ಇದ್ದರೆ ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸಬೇಕು ಎಂದು ಹೇಳಿದರು.

ತರೀಕೆರೆ ಏಸಿಗೆ ಸೂಚನೆ

ಕೆರೆಗಳ ಒತ್ತುವರಿ ತೆರವುಗೊಳಿಸುವಲ್ಲಿ ತರೀಕೆರೆ ತಾಲೂಕಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ, ಇಲ್ಲಿ ಒಟ್ಟು 224 ಕೆರೆ ಗಳಿದ್ದು, ಈ ಪೈಕಿ 106 ಕೆರೆಗಳು ಒತ್ತುವರಿಯಾಗಿವೆ. ಇವುಗಳಲ್ಲಿ ಈವರೆಗೆ 5 ಕೆರೆಗಳನ್ನು ಮಾತ್ರ ತೆರವುಗೊಳಿ ಸಲಾಗಿದೆ.

ಸಭೆಯಲ್ಲಿ ಕೆರೆಗಳ ಒತ್ತುವರಿ ತೆರವು ವಿಷಯ ಚರ್ಚೆಯಾಗುವ ಸಂದರ್ಭದಲ್ಲಿ ರಾಜೇಂದರ್‌ ಕುಮಾರ್ ಕಟಾರಿಯಾ ಅವರು ತರೀಕೆರೆ ಉಪ ವಿಭಾಗಾಧಿಕಾರಿ ಡಾ. ಕಾಂತರಾಜ್‌ ಅವರನ್ನು ಉದ್ದೇಶಿಸಿ, ಈ ವಿಷಯದಲ್ಲಿ ಯಾರೇ ಕಾಲ್‌ ಮಾಡಿದರೂ ಸ್ಪಂದಿಸಬೇಡಿ, ನಿಮ್ಮ ಕೆಲಸವನ್ನು ಮುಂದುವರೆಸಿ, ಇಲ್ಲಿ ನಮ್ಮ ವೈಯಕ್ತಿಕ ಹಿತಾಸಕ್ತಿ ಯಾವುದೇ ಇಲ್ಲ. ಕೆರೆಗಳಲ್ಲಿ ನೀರು ಸಂಗ್ರಹ ಆಗಬೇಕು. ಇದರಿಂದ ರೈತಾಪಿ ವರ್ಗಕ್ಕೆ ಹಾಗೂ ಜಾನುವಾರುಗಳಿಗೆ ಅನುಕೂಲವಾಗಬೇಕು. ಬರೀ ಇಷ್ಟೆ ಅಲ್ಲ, ಇದರಿಂದಾಗಿ ನೀರಿನ ಅಂತರ್ಜಲ ಮಟ್ಟವೂ ಸಹ ವೃದ್ಧಿಯಾಗಲಿದೆ ಎಂದು ಹೇಳಿದರು.

ಕೊಟ್ಟ ಹಣ ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು. ನಿಗದಿತ ಸಮಯದಲ್ಲಿ ಆಗಬೇಕು ಎಂದು ಸೂಚಿಸಿದ ಅವರು, ಸಭೆಯಲ್ಲಿ ಚರ್ಚಿಸಿದ ವಿಷಯದ ಅನುಪಾಲನಾ ವರದಿಯನ್ನು ತಮಗೆ ತಲುಪಿಸುವ ಕೆಲಸ ಅಧಿಕಾರಿಗಳಿಂದ ಆಗಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಸ್‌. ಕೀರ್ತನಾ ಹಾಗೂ ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಉಪಸ್ಥಿತರಿದ್ದರು. 13 ಕೆಸಿಕೆಎಂ 1

ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್‌ ಕಟಾರಿಯಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲೆಯ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಡಿಸಿ ಮೀನಾ ನಾಗರಾಜ್‌, ಜಿಪಂ ಸಿಇಓ ಎಚ್‌.ಎಸ್‌. ಕೀರ್ತನಾ ಇದ್ದರು.

Share this article