ಸ್ವಾಮೀಜಿ ತಮ್ಮ ಪೂರ್ವಾಶ್ರಮ ತೊರೆದು ಸನ್ಯಾಸತ್ವ ಸ್ವೀಕರಿಸಿ ತಮ್ಮ ಆತ್ಮಜ್ಞಾನದ ಮೂಲಕ ಸಮಾಜ ಮುನ್ನಡೆಸುವ ಕಾರ್ಯ ಮಾಡಿದಾಗ ಮಾತ್ರ ಸನ್ಯಾಸತ್ವದ ಸಾತ್ವಿಕತೆಗೆ ಮೆರಗು ಬರಲು ಸಾಧ್ಯ.
ನವಲಗುಂದ:
ಅಧ್ಯಾತ್ಮದಲ್ಲಿ ಗುರು ಕಾರುಣ್ಯದಿಂದ ಬೆಳಗುವ ಶಿಷ್ಯ ಪರಂಪರೆಯಿಂದಲೇ ಧರ್ಮ ರಕ್ಷಣೆಗೆ ದಾರಿದೀಪವಾಗಿದೆ. ಶಿಷ್ಯ ಪರಂಪರೆಯಿಂದ ಸ್ಥಾಪಿತವಾದ ಮಠಗಳು ಸಮಾಜದಲ್ಲಿನ ಅಂಕು-ಡೊಂಕು ತಿದ್ದುವ ಮೂಲಕ ಭಕ್ತ ವೃಂದವನ್ನು ಜಾಗೃತಗೊಳಿಸುವ ಕಾರ್ಯ ಮಾಡುತ್ತಿವೆ ಎಂದು ಶಿರಹಟ್ಟಿ ಭಾವೈಕ್ಯ ಸಂಸ್ಥಾನ ಮಠದ ಫಕೀರ ಸಿದ್ಧರಾಮ ಶ್ರೀ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿರುವ ಹಿರೇಮಠದ ಗುರುಪಟ್ಟಾಧಿಕಾರ ಮಹೋತ್ಸವದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸ್ವಾಮೀಜಿ ತಮ್ಮ ಪೂರ್ವಾಶ್ರಮ ತೊರೆದು ಸನ್ಯಾಸತ್ವ ಸ್ವೀಕರಿಸಿ ತಮ್ಮ ಆತ್ಮಜ್ಞಾನದ ಮೂಲಕ ಸಮಾಜ ಮುನ್ನಡೆಸುವ ಕಾರ್ಯ ಮಾಡಿದಾಗ ಮಾತ್ರ ಸನ್ಯಾಸತ್ವದ ಸಾತ್ವಿಕತೆಗೆ ಮೆರಗು ಬರಲು ಸಾಧ್ಯ. ಈ ನಿಟ್ಟಿನಲ್ಲಿ ಪಂಚ ಪೀಠಾಧಿಕಾರಿಗಳ ಸಮ್ಮುಖದಲ್ಲಿ ನೂತನವಾಗಿ ಪೀಠಾರೋಹಣ ಮಾಡಿದ ಇಮ್ಮಡಿ ಸಿದ್ದೇಶ್ವರ ಶಿವಾಚಾರ್ಯರು ಭಕ್ತಿ ಮಾರ್ಗದೊಂದಿಗೆ ಸಮಾಜದಲ್ಲಿ ಧರ್ಮ ಬೋಧನೆ ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.
ಪಟ್ಟಾಧಿಕಾರ ಮಹೋತ್ಸವ ಸ್ವಾಗತಿ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಮುಂಬರುವ ದಿನಗಳಲ್ಲಿ ನೂತನ ಶ್ರೀಗಳ ನೇತೃತ್ವದಲ್ಲಿ ಹಿರೇಮಠವು ಹೆಚ್ಚಿನ ಪ್ರಮಾಣದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರವಾಗಲಿ ಎಂದರು.
ಪಂಚಗ್ರಹ ಹಿರೇಮಠದ ಹಿರಿಯ ಸ್ವಾಮೀಜಿ ಸಿದ್ದೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಹಿರೇಮಠದ ನೂತನ ಪೀಠಾಧಿಕಾರಿ ಇಮ್ಮಡಿ ಸಿದ್ದೇಶ್ವರ ಶಿವಾಚಾರ್ಯರು, ನರಗುಂದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಮಾಜಿ ಸಚಿವ ಕೆ.ಎನ್. ಗಡ್ಡಿ, ಬಿ.ಬಿ. ಗಂಗಾಧಮಠ, ಅಂದಾನಯ್ಯ ಹಿರೇಮಠದ, ಗಣ್ಯರಾದ ಅಣ್ಣಪ್ಪ ಬಾಗಿ, ವಿ.ಟಿ. ಕರಿಸಕ್ರಣ್ಣವರ(ಭೋವಿ), ಸಿದ್ದಲಿಂಗಯ್ಯ ಹಿರೇಮಠ, ಪಾಂಡಪ್ಪ ಕೋನರಡ್ಡಿ, ವೀರೇಶ ಕೂಗು, ಬಿ.ಸಿ. ಪೂಜಾರ, ಗಂಗಪ್ಪ ಹಳ್ಳದ, ಯಲ್ಲಪ್ಪ ಭೋವಿ, ಅಪ್ಪಣ್ಣ ಹಳ್ಳದ ಮತ್ತಿತರರಿದ್ದರು.
ನಂತರ ಹನಮಂತ ಲಮಾಣಿ ತಂಡದವರಿಂದ ಜಾನಪದ ಸಂಗೀತ ಕಾರ್ಯಕ್ರಮ ಜರುಗಿತು. ಎ.ಬಿ. ಕೊಪ್ಪದ ನಿರೂಪಿಸಿದರು. ಆರ್.ಎಸ್. ನೇಗಲಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.