ಟ್ರ್ಯಾಕ್ಟರ್ ಪಲ್ಟಿ: ಒಂದೇ ಕುಟುಂಬದ 7 ಸಾವು

KannadaprabhaNewsNetwork |  
Published : May 16, 2026, 12:45 AM IST
ಟ್ರ್ಯಾಕ್ಟರ್ ಪಲ್ಟಿ | Kannada Prabha

ಸಾರಾಂಶ

ಕಂಟೈನರ್‌ ವಾಹನ ಡಿಕ್ಕಿಯಾಗಿ ಟ್ರ್ಯಾಕ್ಟರ್‌ ಪಲ್ಟಿ ಹೊಡೆದು ಹುಲಿಗೆಮ್ಮ ದೇವಿಯ ದರ್ಶನಕ್ಕೆ ತೆರಳುತ್ತಿದ್ದ 1 ವರ್ಷದ ಮಗು, 3 ಮಕ್ಕಳು ಸೇರಿ ಒಂದೇ ಕುಟುಂಬದ 7ಮಂದಿ ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ಕೊಪ್ಪಳ ಜಿಲ್ಲೆಯ ಗಡಿ ಭಾಗದ ತುಂಗಭದ್ರಾ ಅಣೆಕಟ್ಟಿ ಬಳಿ ನಡೆದಿದೆ.

ಕನ್ನಡಪ್ರಭ ವಾರ್ತೆ ಮುನಿರಾಬಾದ್(ಕೊಪ್ಪಳ)

ಕಂಟೈನರ್‌ ವಾಹನ ಡಿಕ್ಕಿಯಾಗಿ ಟ್ರ್ಯಾಕ್ಟರ್‌ ಪಲ್ಟಿ ಹೊಡೆದು ಹುಲಿಗೆಮ್ಮ ದೇವಿಯ ದರ್ಶನಕ್ಕೆ ತೆರಳುತ್ತಿದ್ದ 1 ವರ್ಷದ ಮಗು, 3 ಮಕ್ಕಳು ಸೇರಿ ಒಂದೇ ಕುಟುಂಬದ 7 ಮಂದಿ ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ಕೊಪ್ಪಳ ಜಿಲ್ಲೆಯ ಗಡಿ ಭಾಗದ ತುಂಗಭದ್ರಾ ಅಣೆಕಟ್ಟಿ ಬಳಿ ನಡೆದಿದೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮದ ಕೆಂಚಪ್ಪ(35), ಮಹಾಂತೇಶ(18), ಭರತ(1), ಸವಿತಾ(12), ಅಮರೇಶ(20) ಹಾಗೂ ಗೌರಮ್ಮ(40) ಮೃತರು.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಯಶವಂತನಗರ ಹಾಗೂ ಕೂಡ್ಲಿಗಿ ತಾಲೂಕಿನ ಮರ್ಲಾನಹಳ್ಳಿ ಗ್ರಾಮದ ಒಂದೇ ಕುಟುಂಬದ 19 ಜನ ಟ್ರ್ಯಾಕ್ಟರ್‌ನಲ್ಲಿ ಕೊಪ್ಪಳ ತಾಲೂಕಿನ ಹುಲಿಗೆಮ್ಮದೇವಿ ದರ್ಶನಕ್ಕೆಂದು ತೆರಳುತ್ತಿದ್ದರು. ಆ ವೇಳೆ ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ ಗಡಿಯಲ್ಲಿರುವ ತುಂಗಭದ್ರಾ ಸೇತುವೆ ಮೇಲೆ ಟ್ರ್ಯಾಕ್ಟರ್‌ ಸಾಗುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಬಂದ ಬೃಹತ್‌ ಕಂಟೈನರ್‌ ಲಾರಿ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಟ್ರ್ಯಾಕ್ಟರ್‌ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸೇತುವೆ ಕೆಳಗೆ ಬಿದ್ದಿದೆ. ಘಟನೆಯಲ್ಲಿ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಾಯಗೊಂಡ 13 ಮಂದಿಯನ್ನು ವಿಜಯನಗರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುನಿರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಾಯಕಾರಿ ಸೇತುವೆ:

ತುಂಗಭದ್ರಾ ನದಿಗೆ ಸುಮಾರು 40 ವರ್ಷಗಳ ಹಿಂದೆ ಕಟ್ಟಲಾದ ಈ ಸೇತುವೆಯು ಬೈಕ್‌ ಸವಾರರು, ಆಟೋ ಚಾಲಕರು ಹಾಗೂ ಟ್ರ್ಯಾಕ್ಟರ್‌ನಲ್ಲಿ ಚಲಿಸುವವರಿಗೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಸೇತುವೆ ಮೇಲೆ ಹೆಚ್ಚಿನ ಅಪಘಾತಗಳು ಸಂಭವಿಸುತ್ತಲೇ ಇದೆ. ಇದಕ್ಕೆ ಮುಖ್ಯ ಕಾರಣ ಸೇತುವೆ ಚಿಕ್ಕದಾಗಿದೆ. ಕೊಪ್ಪಳದ ಉಕ್ಕಿನ ಕಾರ್ಖಾನೆಗಳಿಗೆ ಸಂಡೂರಿನಿಂದ ಕಬ್ಬಿಣದ ಅದಿರು ಪೂರೈಸಿ ಮತ್ತೆ ಮೈನ್ಸ್ ಲಾರಿಗಳು ಶರವೇಗದಲ್ಲಿ ಚಲಿಸುತ್ತಿದ್ದು, ಇದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ.

ಸಂಸದ ತುಕಾರಾಂ ಆಸ್ಪತ್ರೆಗೆ ದೌಡು:

ದುರ್ಘಟನೆ ಬೆನ್ನಲ್ಲೇ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ ಬಳ್ಳಾರಿ ಸಂಸದ ಈ. ತುಕಾರಾಂ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಅಲ್ಲದೇ ಮೃತ ವ್ಯಕ್ತಿಯ ಕುಟುಂಬಕ್ಕೆ ಸಾಂತ್ವನ ಹೇಳಿ ಸ್ಥೈರ್ಯ ತುಂಬಿದರು.

₹5 ಲಕ್ಷ ಪರಿಹಾರ ಘೋಷಣೆ:ಮುಖ್ಯಮಂತ್ರಿ ಜತೆ ದೂರವಾಣಿಯಲ್ಲಿ ಮಾತನಾಡಿದ ಸಂಸದ ಈ.ತುಕಾರಾಂ ಅವರು ಅವರ ಒಪ್ಪಿಗೆಯ ಮೇರೆಗೆ ಮೃತ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರದಿಂದ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದಲ್ಲಿನ ಅಂಕು-ಡೊಂಕು ತಿದ್ದುವ ಮಠಗಳು
ಗೊಲ್ಲರಹಟ್ಟಿಯ ಪರಿಸ್ಥಿತಿ ಆ ಕೃಷ್ಣನಿಗೆ ಪ್ರೀತಿ