ವಿಜೃಂಭಣೆಯಿಂದ ನಡೆದ ಮತ್ತಿತಾಳೇಶ್ವರಸ್ವಾಮಿ ದಿವ್ಯ ರಥೋತ್ಸವ

KannadaprabhaNewsNetwork | Published : Apr 1, 2024 12:46 AM

ಸಾರಾಂಶ

ದೇವಸ್ಥಾನದ ಆವರಣದ ಕಲ್ಯಾಣಿ ಬಳಿ ಮತ್ತಿತಾಳೇಶ್ವರಸ್ವಾಮಿ ಸೇರಿದಂತೆ ವಿವಿಧ ದೇವರ ಉತ್ಸವ ಮೂರ್ತಿಗಳು, ತಾಲೂಕಿನ ಮಠದ ಹೊನ್ನನಾಯಕನಳ್ಳಿ ಮಂಟೇಸ್ವಾಮಿ ಬಸವಪ್ಪ, ಕಂಡಾಯಗಳಿಗೆ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಹೂ ಹೊಂಬಾಳೆ ಪೂಜೆ ಸಲ್ಲಿಸಿದ ವಿಶೇಷವಾಗಿ ಶೃಂಗರಿಸಿದ ರಥದಲ್ಲಿ ಮತ್ತಿತಾಳೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಇತಿಹಾಸ ಪ್ರಸಿದ್ಧ ಮತ್ತಿತಾಳೇಶ್ವರಸ್ವಾಮಿ ದಿವ್ಯ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.

ತಾಲೂಕಿನ ಕಲ್ಲುವೀರನಹಳ್ಳಿ, ಕಂದೇಗಾಲ, ಅಮೃತೇಶ್ವರನಹಳ್ಳಿ ಹಾಗೂ ಮೊಳೆದೊಡ್ಡಿ ಗ್ರಾಮಗಳ ಮಧ್ಯೆ ಇರುವ ದೇವಾಲಯದ ಆವರಣದಲ್ಲಿ ಕಳೆದ ದಿನಗಳಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಪ್ರಮುಖ ಭಾಗ ಭಾನುವಾರ ದಿವ್ಯ ರಥೋತ್ಸವಕ್ಕೆ ಬೆಂಗಳೂರು, ಮೈಸೂರು, ರಾಮನಗರ ಸೇರಿದಂತೆ ಜಿಲ್ಲೆಯ ಹಲವು ತಾಲೂಕುಗಳ ಭಕ್ತರ ದಂಡು ಆಗಮಿಸಿತ್ತು.

ರಥೋತ್ಸವದ ಅಂಗವಾಗಿ ದೇವಸ್ಥಾನ ಮತ್ತು ಮತ್ತಿತಾಳೇಶ್ವರಸ್ವಾಮಿ, ಮಹದೇಶ್ವರಸ್ವಾಮಿ ಮೂರ್ತಿಗೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಬೆಂಗಳೂರು, ಮೈಸೂರು, ರಾಮನಗರ ಸೇರಿದಂತೆ ವಿವಿಧೆಡೆ ಆಗಮಿಸಿದ ಭಕ್ತರು ಬಂದಿದ್ದ ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದುಕೊಂಡರು.

ಮಧ್ಯಾಹ್ನ 1 ಗಂಟೆ ವೇಳೆಗೆ ದೇವಸ್ಥಾನದ ಆವರಣದ ಕಲ್ಯಾಣಿ ಬಳಿ ಮತ್ತಿತಾಳೇಶ್ವರಸ್ವಾಮಿ ಸೇರಿದಂತೆ ವಿವಿಧ ದೇವರ ಉತ್ಸವ ಮೂರ್ತಿಗಳು, ತಾಲೂಕಿನ ಮಠದ ಹೊನ್ನನಾಯಕನಳ್ಳಿ ಮಂಟೇಸ್ವಾಮಿ ಬಸವಪ್ಪ, ಕಂಡಾಯಗಳಿಗೆ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಹೂ ಹೊಂಬಾಳೆ ಪೂಜೆ ಸಲ್ಲಿಸಿದ ವಿಶೇಷವಾಗಿ ಶೃಂಗರಿಸಿದ ರಥದಲ್ಲಿ ಮತ್ತಿತಾಳೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಸಂಪ್ರದಾಯದಂತೆ ದೇವಸ್ಥಾನದ ಆಗಮಿಕರು ಹಾಗೂ ಅರ್ಚಕರು ರಥಕ್ಕೆ ಪೂಜೆ ಸಲ್ಲಿಸಿ ನಂತರ ದೇವರ ಕಳಸವನ್ನು ರಥಕ್ಕೆ ಅಳವಡಿಸಿ ಮತ್ತಿತಾಳೇಶ್ವರಸ್ವಾಮಿ ಉತ್ಸವ ಮೂರ್ತಿಗೆ ಅರ್ಚಕರು ಪೂಜೆ ಸಲ್ಲಿಸಿದರು.

ಗ್ರೇಡ್-2 ತಹಸೀಲ್ದಾರ್ ಬಿ.ವಿ.ಕುಮಾರ್ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಪಿ.ಎಂ.ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರು ರಥಕ್ಕೆ ಪೂಜೆ ಸಲ್ಲಿಸಿದರು. ದೇವರಮೂರ್ತಿಗಳ ಪ್ರದಕ್ಷಿಣೆ ನಂತರ ಯುವಕರು ಸೇರಿದಂತೆ ನೂರಾರು ಮಂದಿ ರಥವನ್ನು ಎಳೆಯಲು ಆರಂಭಿಸುತ್ತಿದ್ದಂತೆಯೇ ನೆರದಿದ್ದ ಸಾವಿರಾರು ಭಕ್ತರು ಹಣ್ಣುಜವನ ಎಸೆದು ಭಕ್ತಿ ಸಮರ್ಪಿಸಿದರು.

ಜಾತ್ರೆಗೆ ಆಗಮಿಸಿದ ಭಕ್ತರಿಗೆ ಹರಕೆ ಹೊತ್ತ ಜನರು ಪ್ರಸಾದ, ಪಾನಕ ಮತ್ತು ಮಜ್ಜಿಗೆ ವಿತರಿಸಿದರು. ರಥೋತ್ಸವದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮಾಂತರ ಸಿಪಿಐ ಬಿ.ಜೆ.ಮಹೇಶ್, ಪಿಎಸ್ಐ ಶ್ರವಣ ಸ ದಾಸರಡ್ಡಿ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿತ್ತು. ವಿವಿಧೆಡೆ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ಭಕ್ತರು ಭಾಗಿಯಾಗಿದ್ದರು.

ಈ ವೇಳೆ ಗ್ರಾಪಂ ಅಧ್ಯಕ್ಷ ಚನ್ನಿಗರಾಮು, ಟಿಎಪಿಸಿಎಂಎಸ್ ನಿರ್ದೇಶಕರಾದ ಕೆ.ಜೆ.ದೇವರಾಜು, ಕುಳ್ಳಚನ್ನಂಕಯ್ಯ, ಎಂ.ಲಿಂಗರಾಜು, ಕೆ.ಎಸ್.ದ್ಯಾಪೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ, ಸಿ.ಪಿ.ರಾಜು, ಮುಖಂಡರಾದ ಆರ್.ಎನ್.ವಿಶ್ವಾಸ್, ಮುಟ್ಟನಹಳ್ಳಿ ಅಂಬರೀಶ್, ಶ್ರೀನಿವಾಸ್, ಜಗದೀಶ್, ದಿಲೀಪ್ ಕುಮಾರ್(ವಿಶ್ವ), ಜಲ್ಲಿ ಚನ್ನಪ್ಪ, ಶಿವಮಾದೇಗೌಡ ಇದ್ದರು.

Share this article