ಮೌಲಾನಾ ಆಜಾದ್ ಶಾಲೆ ಕಾಮಗಾರಿ ಶೀಘ್ರ ಪುನಾರಂಭಿಸಿ

KannadaprabhaNewsNetwork |  
Published : Nov 15, 2024, 12:36 AM IST
14ಕೆಡಿವಿಜಿ1, 2-ದಾವಣಗೆರೆ ಬೀಡಿ ಲೇಔಟ್‌ನ ಮೌಲಾನ ಆಜಾದ್‌ ಸರ್ಕಾರಿ ಶಾಲೆಯ ಬಾಕಿ ಕಾಮಗಾರಿ ಪುನಾರಂಭಿಸುವಂತೆ ಆಮ್ ಆದ್ಮಿ ಪಕ್ಷದಿಂದ ಅಹೋರಾತ್ರಿ ಧರಣಿ ಆರಂಭಿಸಲಾಯಿತು. | Kannada Prabha

ಸಾರಾಂಶ

ದಾವಣಗೆರೆ ನಗರದ ಬೀಡಿ ಲೇಔಟ್‌ನಲ್ಲಿ ಸರ್ಕಾರಿ ಮೌಲಾನಾ ಆಜಾದ್‌ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ₹2 ಕೋಟಿ ವೆಚ್ಚದ ಕಾಮಗಾರಿ ಆರಂಭಿಸಲಾಗಿದೆ. ಈಗಾಗಲೇ ₹90 ಲಕ್ಷ ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ. ಅಪೂರ್ಣ ಕಾಮಗಾರಿಯಿಂದಾಗಿ ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈ ಹಿನ್ನೆಲೆ ಶೀಘ್ರ ಬಾಕಿ ಕೆಲಸ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಘಟಕದಿಂದ ಸರ್ಕಾರಿ ಶಾಲೆ ಉಳಿಸಿ, ಸರ್ಕಾರಿ ಶಾಲೆ ಬೆಳೆಸಿ ಆಂದೋಲನಡಿ ಶಾಲಾವರಣದಲ್ಲಿ ಗುರುವಾರ ಅಹೋ ರಾತ್ರಿ ಧರಣಿ ಆರಂಭಿಸಲಾಗಿದೆ.

- ₹1.10 ಕೋಟಿ ಕಾಮಗಾರಿ ಬಾಕಿ: ಧರಣಿಯಲ್ಲಿ ಎಎಪಿ ಶಿವಕುಮಾರಪ್ಪ ಆರೋಪ । ಜಿಲ್ಲಾಡಳಿತ ದಿವ್ಯಮೌನಕ್ಕೆ ಆಕ್ರೋಶ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ಬೀಡಿ ಲೇಔಟ್‌ನಲ್ಲಿ ಸರ್ಕಾರಿ ಮೌಲಾನಾ ಆಜಾದ್‌ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ₹2 ಕೋಟಿ ವೆಚ್ಚದ ಕಾಮಗಾರಿ ಆರಂಭಿಸಲಾಗಿದೆ. ಈಗಾಗಲೇ ₹90 ಲಕ್ಷ ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ. ಅಪೂರ್ಣ ಕಾಮಗಾರಿಯಿಂದಾಗಿ ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈ ಹಿನ್ನೆಲೆ ಶೀಘ್ರ ಬಾಕಿ ಕೆಲಸ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಘಟಕದಿಂದ ಸರ್ಕಾರಿ ಶಾಲೆ ಉಳಿಸಿ, ಸರ್ಕಾರಿ ಶಾಲೆ ಬೆಳೆಸಿ ಆಂದೋಲನಡಿ ಶಾಲಾವರಣದಲ್ಲಿ ಗುರುವಾರ ಅಹೋ ರಾತ್ರಿ ಧರಣಿ ಆರಂಭಿಸಲಾಗಿದೆ.

ಎಎಪಿ ಜಿಲ್ಲಾಧ್ಯಕ್ಷ ಕೆ.ಎಸ್‌.ಶಿವಕುಮಾರಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಆದಿಲ್ ಖಾನ್‌ ಇತರರ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು

ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ ಈ ಸಂದರ್ಭ ಮಾತನಾಡಿ, ಸರ್ಕಾರಿ ಮೌಲಾನಾ ಆಜಾದ್ ಶಾಲೆ ಕಟ್ಟಡ ಕಾಮಗಾರಿಗೆ ಸರ್ಕಾರದಿಂದ ₹2 ಕೋಟಿ ಮಂಜೂರಾಗಿದ್ದು, ₹1.10 ಕೋಟಿ ವೆಚ್ಚದ ಕಾಮಗಾರಿ ಬಾಕಿ ಇದೆ. ಆರ್‌ಟಿಐ ಕಾರ್ಯಕರ್ತರು ಕಳಪೆ ಕಾಮಗಾರಿ ಆಗಿರುವುದಾಗಿ ಲೋಕಾಯುಕ್ತ ಇಲಾಖೆಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ 8 ತಿಂಗಳಿನಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಬಾಕಿ ಕಾಮಗಾರಿಗಳ ಕೈಗೊಳ್ಳಲು ಯಾವುದೇ ಅಡಚಣೆ ಇಲ್ಲವೆಂದು ಲೋಕಾಯುಕ್ತ ನ್ಯಾಯಾಧೀಶರು ಹೇಳಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ, ಕಾಮಗಾರಿ ಪುನಾರಂಭಿಸಿಲ್ಲ ಎಂದು ಕಿಡಿಕಾರಿದರು.

ಅಷ್ಟೇ ಅಲ್ಲದೇ, ಕಾಮಗಾರಿ ಪುನಾರಂಭಿಸಲು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿಗೂ ಮನವಿ ಸಲ್ಲಿಸಲಾಗಿದೆ. ಈ ವೇಳೆ ಕಾಮಗಾರಿ ಶೀಘ್ರ ಪುನಾರಂಭಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ತಿಂಗಳುಗಳೇ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಆದಿಲ್ ಖಾನ್ ಮಾತನಾಡಿ, ಬೀಡಿ ಲೇಔಟ್‌ ಬಡವರು, ಶ್ರಮಿಕರು, ಕೂಲಿ ಕಾರ್ಮಿಕರು ಜೀವನ ನಡೆಸುತ್ತಿರುವ ಪ್ರದೇಶವಾಗಿದೆ. ಅಲ್ಲಿನ ಸರ್ಕಾರಿ ಶಾಲೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಶೀಘ್ರ ಹೊಸ ಕಟ್ಟಡದಲ್ಲಿ ತರಗತಿಗಳು ನಡೆಯುವಂತೆ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸ್ಪಂದಿಸುವುದು ಸಂಬಂಧಿಸಿದ ಇಲಾಖೆ, ಅಧಿಕಾರಿಗಳ ಕೆಲಸ. ಆದರೆ, ನೆಪ ಹೇಳಿಕೊಂಡು ವಿಳಂಬ ಮಾಡುತ್ತಿರುವುದು ಸರಿಯಲ್ಲ. ತಕ್ಷಣವೇ ಶಾಲೆಯ ಕಟ್ಟಡ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ, ಕೆ.ರವೀಂದ್ರ, ಶಬ್ಬೀರ್ ಅಹಮ್ಮದ್‌, ಪ್ರೊ.ಧರ್ಮನಾಯ್ಕ, ಸಾಜಿದ್ ಅಹಮ್ಮದ್‌, ಮೊಹಮ್ಮದ್ ಯೂಸೂಪ್‌, ಜಿಲನ್ ರಜ್ವಿ, ಸುರೇಶ ಶಿಡ್ಲಪ್ಪ, ಜಾವೇದ್‌, ಫಕೃದ್ದೀನ್, ಮಾಬೂಲ್ ಅಹಮ್ಮದ್ ಇತರರು ಇದ್ದರು.

ಪೊಲೀಸ್ ಅಧಿಕಾರಿಗಳು ಧರಣಿ ಸ್ಥಳಕ್ಕೆ ಭೇಟಿ ನೀಡಿ, ಆಮ್ ಆದ್ಮಿ ಪಕ್ಷದ ಮುಖಂಡರ ಜೊತೆಗೆ ಚರ್ಚಿಸಿ, ಶಾಲೆ ಅಪೂರ್ಣ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.

- - -

ಬಾಕ್ಸ್‌ * ಭದ್ರತೆ ಇಲ್ಲದ ಶಾಲೆಯೀಗ ಅನೈತಿಕ ಚಟುವಟಿಕೆ ತಾಣ ಮೌಲಾನಾ ಆಜಾದ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಕೇಳಲು ಬಹಳಷ್ಟು ಸಮಸ್ಯೆ ಆಗುತ್ತಿದೆ. ಬೋಧನಾ ಕೊಠಡಿಗಳಿಗೆ ಕಿಟಕಿ, ಬಾಗಿಲು, ಗಿಲಾವ್, ನೆಲ, ಮತ್ತು ಕಪ್ಪು ಹಲಗಿ ವ್ಯವಸ್ಥೆಗಳೇ ಇಲ್ಲ. ಸಮಸ್ಯೆಗಳ ನಡುವೆಯೇ ಶಿಕ್ಷಕರು ಅನಿವಾರ್ಯವಾಗಿ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ. ಮಕ್ಕಳು ಸಹ ಅವ್ಯವಸ್ಥೆಗಳ ನಡುವೆಯೇ ಕುಳಿತು ಶಿಕ್ಷಣ ಪಡೆಯುವ ದುಸ್ಥಿತಿ ಇದೆ. ಶಾಲೆ ಕೊಠಡಿಗಳಿಗೆ ಭದ್ರವಾದ ಕಿಟಕಿ, ಬಾಗಿಲುಗಳು ಇಲ್ಲ. ವಿದ್ಯಾ ಕೇಂದ್ರವಾದ ಶಾಲೆಯ ಜಾಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ. ಹೀಗಿದ್ದರೂ, ಜಿಲ್ಲಾಡಳಿತ ಮಾತ್ರ ಮೌನವಾಗಿದೆ ಎಂದು ಎಎಪಿ ಮುಖಂಡರು ದೂರಿದರು.

- - - -14ಕೆಡಿವಿಜಿ1, 2:

ದಾವಣಗೆರೆ ಬೀಡಿ ಲೇಔಟ್‌ನ ಮೌಲಾನಾ ಆಜಾದ್‌ ಸರ್ಕಾರಿ ಶಾಲೆಯ ಬಾಕಿ ಕಾಮಗಾರಿ ಪುನಾರಂಭಿಸುವಂತೆ ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿಯಿಂದ ಶಾಲೆ ಆವರಣದಲ್ಲಿ ಅಹೋರಾತ್ರಿ ಧರಣಿ ಆರಂಭಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!