ಭಕ್ತ ಸಾಗರದ ಮಧ್ಯೆ ಮೌನೇಶ್ವರ ರಥೋತ್ಸವ

KannadaprabhaNewsNetwork |  
Published : Sep 03, 2024, 01:37 AM IST
ಪೋಟೊ- ೨-ಎಸ್.ಎಚ್.ಟಿ. ೧ಕೆ- ಕ್ಷೇತ್ರ ಶ್ರೀ ವರವಿ ಮೌನೇಶ್ವರರ ದಿವ್ಯ ರಥೋತ್ಸವ. | Kannada Prabha

ಸಾರಾಂಶ

ರಥವನ್ನು ದೇವಾಲಯದ ಪಶ್ಚಿಮ ದಿಕ್ಕಿನಿಂದ ಪೂರ್ವ ದಿಕ್ಕಿನ ತುದಿಯವರೆಗೆ ಸಂಜೆ ೫-೩೦ರಿಂದ ೬ರ ವರೆಗೆ ಎಳೆಯಲಾಯಿತು

ಶಿರಹಟ್ಟಿ: ತಾಲೂಕಿನ ಕ್ಷೇತ್ರ ಶ್ರೀವರವಿ ಮೌನೇಶ್ವರರ ರಥೋತ್ಸವ ಜನಸಾಗರದ ನಡುವೆ ಜಯಘೋಷದ ಮಧ್ಯೆ ಸಡಗರ ಸಂಭ್ರಮದಿಂದ ಶ್ರಾವಣ ಸೋಮವಾರದಂದು ಸಂಜೆ ಭಕ್ತಿಭಾವಗಳ ಸಮರ್ಪಣೆಯ ನಡುವೆ ವಿಜೃಂಭಣೆಯಿಂದ ಜರುಗಿತು.

ಆಗಾಗ್ಗೆ ಸುರಿದ ಮಳೆಯಲ್ಲಿಯೇ ಭಕ್ತ ಸಮೂಹ ತಂಡೋಪತಂಡವಾಗಿ ವರವಿ ಮೌನೇಶ್ವರ ರಥೋತ್ಸವದೆಡೆಗೆ ಧಾವಿಸಿ ಬರುತ್ತಿದ್ದರು. ಬಸ್‌,ಕಾರು,ಜೀಪು, ಚಕ್ಕಡಿ ಮತ್ತು ಅಟೋಗಳಲ್ಲದೇ ಶಕ್ತಿ ಯೋಜನೆ ಜಾರಿಯಿಂದ ಉಚಿತವಾಗಿ ಮಹಿಳೆಯರೆಲ್ಲ ಸರ್ಕಾರಿ ಬಸ್‌ ಏರಿ ಬರುತ್ತಿರುವುದು ಸಾಮಾನ್ಯವಾಗಿತ್ತು.

ರಥವನ್ನು ದೇವಾಲಯದ ಪಶ್ಚಿಮ ದಿಕ್ಕಿನಿಂದ ಪೂರ್ವ ದಿಕ್ಕಿನ ತುದಿಯವರೆಗೆ ಸಂಜೆ ೫-೩೦ರಿಂದ ೬ರ ವರೆಗೆ ಎಳೆಯಲಾಯಿತು. ಇಳಿಹೊತ್ತು. ಸೂರ್ಯ ಮುಳುಗುವ ಸಂದರ್ಭದಲ್ಲಿ ಸುಕ್ಷೇತ್ರದ ಆವರಣದಲ್ಲಿ ಅಪಾರ ಸಂಖ್ಯೆ ಭಕ್ತರು ಮೌನೇಶ್ವರರ ರಥೋತ್ಸವವನ್ನು ಕಣ್ತುಂಬಿಕೊಳ್ಳುವ ಉತ್ಸುಕದಲ್ಲಿದ್ದರು. ಪೀಠಾಧಿಪತಿ ಮೌನೇಶ್ವರ ಮಹಾಸ್ವಾಮಿಗಳು ರಥೋತ್ಸವಕ್ಕೆ ಚಾಲನೆ ನೀಡುವುದೇ ತಡ, ಭಕ್ತವೃಂದ ಮೌನೇಶ್ವರ ಮಹಾರಾಜ ಕೀ ಜೈ ಎಂಬ ಮುಗಿಲು ಮುಟ್ಟುವ ಜಯಘೋಷ ಮಾಡುತ್ತಾ ರಥ ಎಳೆದು ಸಂಭ್ರಮಿಸಿದರು.

ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತವೃಂದ ರಥವನ್ನು ಭಕ್ತಿ ಭಾವಗಳಿಂದ ಎಳೆದರು. ಭಕ್ತ ಸಮೂಹ ಬಾಳೆಹಣ್ಣು ಹಾಗೂ ಉತ್ತತ್ತಿಯನ್ನು ರಥದ ಮೇಲೆ ಎಸೆದು ತಮ್ಮ ಭಕ್ತಿಯ ಸಮರ್ಪಣೆ ಮಾಡಿ ಕೈಮುಗಿದು ನಮಿಸಿದರು. ಇಷ್ಠಾರ್ಥ ಈಡೇರಿಸುವಂತೆ ಬೇಡಿಕೊಂಡರು. ಕರ್ನಾಟಕ ಮಾತ್ರವಲ್ಲ ನೆರೆಯ ಆಂಧ್ರ, ಮಹಾರಾಷ್ಟ್ರದಿಂದಲೂ ಭಕ್ತರು ಆಗಮಿಸಿ ದರ್ಶನಾಶೀರ್ವಾದ ಪಡೆದು ಕೃತಾರ್ಥರಾದರು.

ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿ, ದೇವರ ಕೃಪೆಯಿಂದ ನಾಡಿನ ಎಲ್ಲ ಜನರ ಬದುಕು ಹಸನಾಗಿರಲಿ, ಮಳೆ ಬೆಳೆ ಚೆನ್ನಾಗಿ ಬಂದು ಜನತೆಯ ಮನೆ ಮನ ಬೆಳಗುವಂತಾಗಲಿ ಎಂದು ಹರಸಿದರು. ಮಾನವ ತನ್ನ ಜೀವನದಲ್ಲಿ ಮೇಲು ಕೀಳು ಎಂಬ ಬೇಧಭಾವ ಮರೆತು ಎಲ್ಲ ಧರ್ಮದ ತಿರುಳು ಒಂದೇ ಎಂಬುದನ್ನು ಅರಿತು, ಸನ್ಮಾರ್ಗದಲ್ಲಿ ನಡೆದಾಗಲೇ ಮಾನವನಾಗಿ ಹುಟ್ಟಿದ್ದಕ್ಕೂ ಸಾರ್ಥಕ ಎಂದು ನುಡಿದರು.

ಸಿಪಿಐ ನಾಗರಾಜ ಮಾಢಳ್ಳಿ, ಪಿಎಸ್‌ಐ ಶಿವಾನಂದ ಲಮಾಣಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು