ಯಲ್ಲಾಪುರ: ನಮ್ಮ ಸಂಘದ ಸಾಂಪತ್ತಿಕ ಸ್ಥಿತಿ ಉತ್ತಮವಾಗಿದೆ. ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ₹೫೨.೬೫ ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುಬ್ರಾಯ ಕೃಷ್ಣ ಭಟ್ಟ ಬೋಳ್ಮನೆ ಹೇಳಿದರು.
ಸಂಘದ ಏಳ್ಗೆಗೆ ಸದಸ್ಯರೇ ಜೀವಾಳ. ಸದಸ್ಯರು ಸಂಘದ ಮೂಲಕವೇ ಎಲ್ಲ ವ್ಯವಹಾರ ಮಾಡಬೇಕು. ಸಂಘದ ಮೂಲಕ ಅಡಕೆ, ಕಾಳುಮೆಣಸು ವಿಕ್ರಿ ಮಾಡಿದವರಿಗೆ ₹೧೮.೭೦ ಲಕ್ಷ ಮತ್ತು ಕಿರಾಣಿ ಗ್ರಾಹಕರಿಗೆ ₹೨ ಲಕ್ಷ ಪ್ರೋತ್ಸಾಹಧನ ನೀಡಿದ್ದೇವೆ. ಸಂಘದ ಮುಖಾಂತರ ವರ್ಷದಲ್ಲಿ ೫೨೧೩ ಕ್ವಿಂಟಲ್ ಅಡಕೆ ವಿಕ್ರಿಯಾಗಿದೆ. ಕಳೆದ ಎಲ್ಲಾ ವರ್ಷಗಳಿಗೆ ಹೋಲಿಸಿದರೆ ಹೆಚ್ಚಿನ ವಿಕ್ರಿಯಾಗಿದೆ. ಈ ವರ್ಷದಲ್ಲಿ ದುಡಿಯುವ ಬಂಡವಾಳ ₹೫೫.೪೪ ಲಕ್ಷ; ಕಾಯ್ದಿಟ್ಟ ನಿಧಿ ₹೯೧ ಲಕ್ಷ ಹಾಗೂ ಇತರ ನಿಧಿಗಳು ₹೪.೧೬ ಕೋಟಿ ಇದ್ದು, ಕಳೆದ ವರ್ಷಗಳಿಗೆ ಹೋಲಿಸಿ ನೋಡಿದಾಗ ಸಂಘವು ಸದಸ್ಯರಿಗೆ ನೀಡಿದ ಸಾಲದ ಪ್ರಮಾಣದಂತೆಯೇ ನಿಧಿಗಳು ಹಾಗೂ ದುಡಿಯುವ ಬಂಡವಾಳದ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿದ್ದ ಟಿಎಂಎಸ್ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿದ್ದ ಸಹ್ಯಾದ್ರಿ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ್ ಮಾತನಾಡಿ, ಸಹಕಾರಿ ಸಂಘದ ಮೂಲಕ ಸದಸ್ಯರು ಇನ್ನು ಹೆಚ್ಚು ವ್ಯವಹಾರ ಮಾಡುವ ಮೂಲಕ ಹೆಚ್ಚಿನ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು.
ಆಡಳಿತ ಮಂಡಳಿಯ ನಿರ್ದೇಶಕ ಸುಬ್ರಾಯ ನಾರಾಯಣ ಭಟ್ಟ ಕುಂಟೆಗುಳಿ ಮಾತನಾಡಿದರು. ಮುಖ್ಯ ಕಾರ್ಯ ನಿರ್ವಾಹಕ ದತ್ತಾತ್ರೆಯ ಗಾಂವ್ಕರ ನೆಲೆಪಾಲ ವಾರ್ಷಿಕ ವರದಿ ವಾಚಿಸಿದರು.ಯಕ್ಷಗಾನ ಭಾಗವತ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ರವಿ ಮಹಾಬಲೇಶ್ವರ ಹುಳ್ಸೆ ಸ್ವಾಗತಿಸಿದರು. ಸಂಘದ ನಿರ್ದೇಶಕ ರಸ್ಮಾ ರಾಮಣಿ ಕುಣಬಿ ವಂದಿಸಿದರು.ಸುಂದರ ಪೌರಾಣಿಕ ಪ್ರಸಂಗ "ಶಿವ ಪಂಚಾಕ್ಷರಿ ಮಹಿಮೆ " ಯಕ್ಷಗಾನವನ್ನು ರಾಘವೇಂದ್ರ ಆಚಾರ್ಯ ಜನ್ಸಾಲೆ ತಂಡದವರು ಪ್ರದರ್ಶಿಸಿದರು.