- ಎ.ವಿ.ಕೆ. ಮಹಿಳಾ ಕಾಲೇಜಿನಲ್ಲಿ ಪದವಿ ಪ್ರದಾನ ದಿನ ಕಾರ್ಯಕ್ರಮ
- - - ಕನ್ನಡಪ್ರಭ ವಾರ್ತೆ ದಾವಣಗೆರೆ ನಾಳಿನ ಭವಿಷ್ಯದ ಶೈಕ್ಷಣಿಕ ಸಾಧನೆ ಜೊತೆಗೆ ಸಾಮಾಜಿಕ, ಕೌಟುಂಬಿಕ ಜೀವನವೂ ಯಶಸ್ಸು ಮತ್ತು ತೃಪ್ತಿಯಿಂದ ಕೂಡಿರಬೇಕು. ಹೀಗಾದಾಗ ಮಾತ್ರ ಬದುಕಿಗೆ ಅರ್ಥ ಬರುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಪ್ರೊ. ಆರ್.ಶಶಿಧರ್ ಹೇಳಿದರು.ನಗರದ ಎ.ವಿ.ಕೆ. ಮಹಿಳಾ ಕಾಲೇಜಿನ ಸಭಾಂಗಣಲ್ಲಿ ಭಾನುವಾರ ಎ.ವಿ.ಕೆ ಮಹಿಳಾ ಕಾಲೇಜಿನಿಂದ ಏರ್ಪಡಿಸಿದ್ದ 2021-24ನೇ ಸಾಲಿನ ವಿದ್ಯಾರ್ಥಿನಿಯರ ಪದವಿ ಪ್ರದಾನ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಇಂದು ಕೃತಕ ಬುದ್ಧಿಮತ್ತೆ ಯುಗವಾಗುತ್ತಿದ್ದು, ಇದರ ಮೂಲಕ ಜಗತ್ತು ಹೊಸ ಹೊಸ ಆವಿಷ್ಕಾರಗಳನ್ನು ನಡೆಸುತ್ತಿದೆ. ನೀವೂ ಕೂಡ ಬದಲಾದ ಕಾಲಕ್ಕೆ ಬದುಕನ್ನು ಒಳ್ಳೆಯ ಮಾರ್ಗದಲ್ಲಿ ಬದಲಿಸಿಕೊಂಡು ಜೀವಿಸಬೇಕು. ಆಧುನಿಕ ಶಿಕ್ಷಣ ಪದ್ಧತಿಯು ಅನೇಕ ಜ್ಞಾನ ಶಿಸ್ತುಗಳನ್ನು ಕಲಿಯುವ ಅವಕಾಶ ವಿದ್ಯಾರ್ಥಿಗಳಿಗೆ ಕಲ್ಪಿಸಿದೆ. ನಾಳಿನ ಭವಿಷ್ಯಕ್ಕೆ ಇಂದೇ ಉನ್ನತ ಗುರಿಗಳನ್ನು ಹೊಂದಿರಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವಿಗಳ ಜೊತೆ ಜೊತೆಗೆ ಅನೇಕ ಆನ್ ಲೈನ್ ಕೋರ್ಸ್‌ಗಳನ್ನು ಪಡೆಯಬಹುದು. ಧನಾತ್ಮಕ ಆಲೋಚನೆ ಇಟ್ಟುಕೊಂಡು ಸಾಗಬೇಕು ಎಂದು ಶುಭ ಕೋರಿದರು.ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯ ಸಂಪನ್ನ ಮುತಾಲಿಕ್ ಕಾರ್ಯಕ್ರಮ ಉದ್ಘಾಟಿಸಿ, ಕಾರ್ಯಕ್ರಮದ ಯಶಸ್ಸಿನ ಹಿಂದೆ ನಿಮಗೆ ವಿದ್ಯೆ ನೀಡಿದ ಗುರುಗಳ ಪರಿಶ್ರಮ ಇದೆ. ಅಲ್ಲದೆ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವ ಮೂಲಕ ಇನ್ನೂ ಹೆಚ್ಚು ಹೆಚ್ಚು ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಆಗಬೇಕು. ಆ ಉದ್ದೇಶದಿಂದ ಎವಿಕೆ ಮಹಿಳಾ ಕಾಲೇಜು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿಯೇ ಸ್ಥಾಪನೆ ಮಾಡಲಾಗಿದೆ. ಅಲ್ಲದೇ ಒಳ್ಳೆಯ ಶಿಕ್ಷಣ ಪಡೆದು ಗಂಡು- ಹೆಣ್ಣು ಎಂಬ ಭೇದ-ಭಾವ ಮರೆತು, ಸಹಬಾಳ್ವೆಯಿಂದ ಒಟ್ಟಿಗೆ ಬಾಳುವ ಶಿಕ್ಷಣ ನಿಮ್ಮದಾಗಿರಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯೆ ಪ್ರೊ.ಕಮಲಾ ಸೊಪ್ಪಿನ್ ಅಧ್ಯಕ್ಷತೆ ವಹಿಸಿ, ಕಾಲೇಜಿನಲ್ಲಿ 2ನೇ ಬಾರಿಗೆ ಗ್ರ‍್ಯಾಜುಯೇಷನ್ ಡೇ ಆಚರಣೆ ಮಾಡುತ್ತಿದ್ದೇವೆ. ವಿದ್ಯಾರ್ಥಿನಿಯರು ದಾವಣಗೆರೆ ವಿ.ವಿ.ಯ ಪದವಿ ಪರೀಕ್ಷೆಯಲ್ಲಿ 10 ರ‍್ಯಾಂಕ್ ಬಂದಿದೆ. ಇದೊಂದು ಮೈಲಿಗಲ್ಲು ದಿನ. ಅವರಿಗೆ ಬಾಪೂಜಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಡಾ. ಶಾಮನೂರು ಶಿವಶಂಕರಪ್ಪ ಅವರು ತಲಾ ₹5001 ಗಳ ಪ್ರೋತ್ಸಾಹಧನ ಚೆಕ್ ನೀಡಿ ಗೌರವಿಸಿದ್ದಾರೆ ಎಂದರು.ಐಕ್ಯೂಎಸಿ ಸಂಯೋಜಕ ಪ್ರೊ. ಆರ್.ಆರ್.ಶಿವಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ಗ್ರಂಥಪಾಲಕರು, ಬೋಧಕ- ಬೋಧಕೇತರರು ಉಪಸ್ಥಿತರಿದ್ದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಪ್ರಭಾವತಿ ಎಸ್.ಹೊರಡಿ ಸ್ವಾಗತಿಸಿದರೆ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ.ಗುರುರಾಜ ವಂದಿಸಿದರು. ಡಾ. ಆರ್.ಜಿ. ಕವಿತ, ಡಾ. ಜೆ.ಜಿ. ನಾಗವೇಣಿ ಕಾರ್ಯಕ್ರಮ ನಿರೂಪಿಸಿದರು. 232 ವಿದ್ಯಾರ್ಥಿನಿಯರು ಗೌನ್ ಹ್ಯಾಟ್, ಪದವಿ ಪಡೆದ ಪ್ರಮಾಣ ಪತ್ರ ಹಿಡಿದು ಫೋಟೋ ತೆಗೆಸಿಕೊಂಡು ಸಂಭ್ರಮ ಪಟ್ಟರು.
- - - -9ಕೆಡಿವಿಜಿ 34, 35.ಜೆಪಿಜಿ:ದಾವಣಗೆರೆಯ ಎವಿಕೆ ಮಹಿಳಾ ಕಾಲೇಜಿನಲ್ಲಿ ಪದವಿ ಪ್ರದಾನ ದಿನ ಕಾರ್ಯಕ್ರಮ ನಡೆಯಿತು.