- ಚನ್ನಗಿರಿ ಪ್ರಕರಣ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ । ಅಮಾಯಕರನ್ನು ವಶಕ್ಕೆ ಪಡೆಯದಂತೆ ಮನವಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಚನ್ನಗಿರಿಯಲ್ಲಿ ಪೊಲೀಸ್ ಠಾಣೆ, ಸಿಬ್ಬಂದಿ, ವಾಹನಗಳ ಮೇಲೆ ಕಲ್ಲು ತೂರಾಟ ದುರಾದೃಷ್ಟಕರ ಬೆಳವಣಿಗೆ. ಈ ಪ್ರಕರಣದಲ್ಲಿ ಆದಿಲ್ ಸಾವಿಗೆ ನ್ಯಾಯ ಸಿಗಬೇಕು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಆಗ್ರಹಿಸಿದರು.ಚನ್ನಗಿರಿ ಪಟ್ಟಣದ ಟಿಪ್ಪು ನಗರದಲ್ಲಿ ಮೃತ ಆದಿಲ್ ನಿವಾಸಕ್ಕೆ ಸೋಮವಾರ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್ಐಆರ್ ದಾಖಲಿಸದೇ, ಆದಿಲ್‌ಗೆ ಪೊಲೀಸರು ಯಾಕೆ ವಶಕ್ಕೆ ಪಡೆದರು ಎಂದರು.
ಕಲ್ಲು ತೂರಾಟ, ಸ್ವತ್ತು ಹಾನಿ, ಕರ್ತವ್ಯಕ್ಕೆ ಅಡ್ಡಿ, ಹಲ್ಲೆಗೆ ಸಂಬಂಧಿಸಿದಂತೆ ಒಟ್ಟು 28 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ 50ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸರಿಂದ ಮಾಹಿತಿ ಸಿಕ್ಕಿದೆ. ಆರೋಪಿಗಳ ಬಂಧಿಸಲಿ. ಆದರೆ, ಅಮಾಯಕರನ್ನು ಯಾವುದೇ ಕಾರಣಕ್ಕೂ ಬಂಧಿಸಬಾರದು. ಗಲಾಟೆಗಳಾದಾಗ ಎಷ್ಟೋ ಜನ ನೋಡಲೆಂದು ಬಂದವರೂ ಇರುತ್ತಾರೆ ಎಂದು ತಿಳಿಸಿದರು.ಲಾಕಪ್ ಡೆತ್ ಆಗಿದೆಯೋ, ಇಲ್ಲವೋ ಗೊತ್ತಿಲ್ಲ. ಈಗಾಗಲೇ ಆದಿಲ್ ಶವದ ಮರಣೋತ್ತರ ಪರೀಕ್ಷೆಯಾಗಿದೆ. ಪರೀಕ್ಷೆ ವರದಿ ಪೊಲೀಸ್ ಇಲಾಖೆ ಕೈ ಸೇರಿದ ಬಳಿಕವಷ್ಟೇ ಸಾವಿನ ಸತ್ಯಾಂಶ ಹೊರಬರಲಿದೆ. ಠಾಣೆ ಮೇಲೆ ಕಲ್ಲು ತೂರಾಟ ಘಟನೆಗೆ ಇಡೀ ಸಮುದಾಯವನ್ನೇ ಗುರಿಯಾಗಿಸುವುದೂ ಸರಿಯಲ್ಲ. ಹಿಂದು ಪರ ಸಂಘಟನೆಗಳು ಚನ್ನಗಿರಿಯಲ್ಲಿ ಪ್ರತಿಭಟಿಸಿವೆ. ಪೊಲೀಸರ ಮೇಲೆ ಹೆಚ್ಚು ಒತ್ತಡವಿದ್ದಾಗ ಅಮಾಯಕರನ್ನೂ ಬಂಧಿಸುವ ಸಾಧ್ಯತೆ ಇರುತ್ತದೆ. ಆದಿಲ್ ಸಾವು ಹಾಗೂ ಪೊಲೀಸ್ ಠಾಣೆ ಆವರಣದ ಅಹಿತಕರ ಘಟನೆಗಳ ಕುರಿತಂತೆ ಪಾರದರ್ಶಕ, ನಿಷ್ಪಕ್ಷಪಾತ ತನಿಖೆ ಆಗಬೇಕು. ಇಂತಹ ಘಟನೆ ಮರುಕಳಿಸದಂತೆ ಪೊಲೀಸ್ ಇಲಾಖೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.
ಮೃತ ಆದಿಲ್ ಕುಟುಂಬ ವರ್ಗದವರು, ಬಂಧು-ಬಳಗ, ಸಮಾಜದ ಮುಖಂಡರು, ಜಿ.ಬಿ.ವಿನಯಕುಮಾರ ಬೆಂಬಲಿಗರು ಇದ್ದರು. ಇದೇ ವೇಳೆ ಚನ್ನಗಿರಿ ಪೊಲೀಸ್ ಠಾಣೆಗೆ ತೆರಳಿ, ಎಎಸ್‌ಪಿ ಜೊತೆಗೆ ಘಟನೆ ಕುರಿತಂತೆ ಚರ್ಚಿಸಿ, ಅಮಾಯಕರ ಬಂಧಿಸದಂತೆ ಇಲಾಖೆಗೆ ವಿನಯಕುಮಾರ ಇತರರು ಮನವಿ ಮಾಡಿದರು.- - - -28ಕೆಡಿವಿಜಿ8:
ಚನ್ನಗಿರಿಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಮೃತ ಆದಿಲ್ ನಿವಾಸಕ್ಕೆ ತೆರಳಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. -28ಕೆಡಿವಿಜಿ9, 10:ಚನ್ನಗಿರಿ ಪೊಲೀಸ್ ಕಚೇರಿಗೆ ತೆರಳಿ ಎಎಸ್‌ಪಿ ಇತರೇ ಅಧಿಕಾರಿಗಳ ಜೊತೆಗೆ ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ ಚರ್ಚಿಸಿದರು.