ಬಸವ ನೆಲದಲ್ಲಿ ಜನಿಸಿದವರೆಲ್ಲ ವಚನಾಧಾರಿತ ಜೀವನ ಶೈಲಿ ಹೊಂದಲಿ

KannadaprabhaNewsNetwork | Published : May 13, 2024 12:01 AM

ಸಾರಾಂಶ

ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆದಿದ್ದೆಯಾದಲ್ಲಿ ಭಾರತ ವಿಶ್ವದಲ್ಲಿ ಶಾಂತಿ, ಸೌಹಾರ್ದತೆ, ಸಮಾನತೆಗಾಗಿ ತನ್ನ ಹೆಗ್ಗುರತನ್ನು ಹೊಂದಲಿದೆ ಎಂದರು.

ಕನ್ನಡಪ್ರಭ ವಾರ್ತೆ ಬೀದರ್‌

ಬಸವಣ್ಣ ಸಮಾನತೆಯ ಹರಿಕಾರ, ಬಸವಾದಿ ಶರಣರು ನಡೆದಾಡಿದ ಈ ನೆಲದಲ್ಲಿ ಜನಿಸಿರುವ ನಾವೆಲ್ಲ ವಚನಾಧಾರಿತ ಜೀವನ ಶೈಲಿ ಪಾಲಿಸಿ, ಅಳವಡಿಸಿಕೊಳ್ಳುವ ಕರ್ತವ್ಯವನ್ನು ಪಾಲಿಸಬೇಕು ಎಂದು ಕನ್ನಡಪ್ರಭದ ಸಮನ್ವಯ, ವಿಶೇಷ ಯೋಜನೆಗಳ ಸಂಪಾದಕರಾದ ಬಿ.ವಿ ಮಲ್ಲಿಕಾರ್ಜುನಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಇಲ್ಲಿನ ಎಸ್‌ಆರ್‌ಎಸ್‌ ಫಂಕ್ಷನ್‌ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಕನ್ನಡಪ್ರಭದ ಬಸವಪ್ರಭ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆದಿದ್ದೆಯಾದಲ್ಲಿ ಭಾರತ ವಿಶ್ವದಲ್ಲಿ ಶಾಂತಿ, ಸೌಹಾರ್ದತೆ, ಸಮಾನತೆಗಾಗಿ ತನ್ನ ಹೆಗ್ಗುರತನ್ನು ಹೊಂದಲಿದೆ ಎಂದರು.ಶರಣರ ಕಾಯಕ, ದಾಸೋಹ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿವೆ. ಶರಣರ ವಚನಗಳನ್ನು ಎಲ್ಲೆಡೆ ಪಸರಿಸಲು ಸಣ್ಣದಾದ ಒಂದು ಪ್ರಯತ್ನವನ್ನು ಬಸವಪ್ರಭ ಪುಸ್ತಕದ ಮೂಲಕ ಕನ್ನಡಪ್ರಭ ದಿನಪತ್ರಿಕೆ ಮಾಡಿದ್ದು, ಈ ನಿಟ್ಟಿನಲ್ಲಿ ಪತ್ರಿಕೆಯ ಈ ಪುಸ್ತಕವನ್ನು ಪ್ರತಿಯೊಬ್ಬರೂ ಓದಿ ಅದರ ಸಾರಾಂಶ ಅರಿತು ಜೀವನ ಸಾಗಿಸುವ ಪ್ರಯತ್ನ ಮಾಡಿದ್ದೆಯಾದಲ್ಲಿ ಬಸವಾದಿ ಶರಣರ ತತ್ವಗಳ ಪಾಲನೆಗೆ ದಾರಿ ಸಿಕ್ಕೀತು ಎಂದು ಹೇಳಿದರು.ಬಸವ ಜಯಂತಿ ನಿಮಿತ್ತ ಕನ್ನಡಪ್ರಭ ಓದುಗರಲ್ಲದೆ ಇಡೀ ಓದುಗ ಸಮಾಜಕ್ಕೆ ಬಸವಪ್ರಭ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಗಿದೆ. ಸಂಗ್ರಹಯೋಗ್ಯ ಪುಸ್ತಕವಾದ ಇದಕ್ಕೆ ಲೇಖನಗಳು, ಚಿತ್ರಗಳು, ಮಾಹಿತಿ ಸೇರಿದಂತೆ ಮತ್ತಿತರ ರೂಪದಲ್ಲಿ ಸಹಕರಿಸದವರಿಗೆ ನಾವು ಧನ್ಯವಾದಗಳನ್ನು ಅರ್ಪಿಸಲೇಬೇಕಾಗುತ್ತದೆ ಹಾಗೆಯೇ ಇದಕ್ಕಾಗಿ ಶ್ರಮಿಸಿದ ಬೀದರ್‌ ಕನ್ನಡಪ್ರಭ ಬಳಗಕ್ಕೆ ಅಭಿನಂದನೆಗಳು ಎಂದು ಬಿ.ವಿ ಮಲ್ಲಿಕಾರ್ಜುನಯ್ಯ ತಿಳಿಸಿದರು.ಉರ್ದು, ಹಿಂದಿ, ಆಂಗ್ಲ, ಮರಾಠಿಗೆ ಬಸವಪ್ರಭ ತರ್ಜುಮೆಗೆ ಶಾಹೀನ್‌ ಸಹಕಾರ :

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಹೀನ್‌ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್‌ ಖದೀರ್‌ ಅವರು ಮಾತನಾಡಿ, ಕನ್ನಡಪ್ರಭದ ಬಸವಪ್ರಭ ಅತ್ಯುತ್ತಮವಾಗಿ ಮೂಡಿ ಬಂದಿದೆ. ಇದನ್ನು ಇನ್ನಷ್ಟು ಚಿಕ್ಕ ಗಾತ್ರಕ್ಕೆ ತಂದು ಹಿಂದಿ, ಉರ್ದು, ಮರಾಠಿ ಹಾಗೂ ಆಂಗ್ಲ ಭಾಷೆಗಳಲ್ಲಿ ತರ್ಜುಮೆ ಮಾಡಿಸಲು ಮುಂದೆ ಬಂದಿದ್ದೆಯಾದಲ್ಲಿ ಇದಕ್ಕೆ ಶಾಹೀನ್‌ ಸಮೂಹ ಶಿಕ್ಷಣ ಸಂಸ್ಥೆ ಸಂಪೂರ್ಣ ಸಹಕಾರ ನೀಡುವದಷ್ಟೇ ಅಲ್ಲ ಈ ಚಿಕ್ಕ ಪುಸ್ತಕಗಳನ್ನು ಮುಂಬರುವ ಬಸವ ಜಯಂತಿಗೆ ಬಿಡುಗಡೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಹೊರುತ್ತದೆ ಎಂದರು.ಬಹಿರಂಗವಾಗಿ ಧರ್ಮ ದ್ವೇಷದ ಮಾತು, ದ್ವೇಷ ಕಾರುವವರಿಗೆ ಬಸವ ತತ್ವ ತಿಳಿಸಿ :

ಇನ್ನು ಬಸವಾದಿ ಶರಣರು ನಡೆದಾಡಿ ಸಮಾನತೆಗಾಗಿ ಕ್ರಾಂತಿಯನ್ನೇ ಮಾಡಿ ತ್ಯಾಗ ಬಲಿದಾನ ನೀಡುವ ಮೂಲಕ ವಿಶ್ವಕ್ಕೆ ಭ್ರಾತೃತ್ವದ, ಜಾತ್ಯತೀತದ ಸಂದೇಶ ಸಾರಿದ ಕಲ್ಯಾಣದ ಈ ನಾಡಿನಲ್ಲಿ ಇತ್ತೀಚಗೆ ಜಾತಿ, ಧರ್ಮ ಆಧಾರಿತವಾಗಿ ಸಾರ್ವಜನಿಕವಾಗಿ ಭಾಷಣಗಳನ್ನು ಮಾಡುತ್ತಿರುವದು ಬೇಸರ ತರಿಸಿದೆ. ಈ ಸಂದರ್ಭಗಳಲ್ಲಿ ಬಸವ ತತ್ವ ಅನುಯಾಯಿಗಳು, ಹಿರಿಯರುಗಳು ಬಸವಣ್ಣನ ಸಹೋದರತ್ವದ ಸಂದೇಶಗಳನ್ನು ತಿಳಿಹೇಳುವ ಅನಿವಾರ್ಯತೆ ಅತೀ ಜರೂರಿಯಾಗಿದೆ ಎಂದು ಅಬ್ದುಲ್‌ ಖದೀರ್‌ ತಿಳಿಸಿದರು. ಅಟಲ್‌ ಬಿಹಾರಿ ವಾಜಪೇಯಿ ಫೌಂಡೇಶನ್‌ ಅಧ್ಯಕ್ಷರಾದ ಗುರುನಾಥ ಕೊಳ್ಳೂರ್‌ ಅವರು ಮಾತನಾಡಿ, ಕನ್ನಡಪ್ರಭ ಹೊರತರಲಾದ ಬಸವಪ್ರಭ ಪುಸ್ತಕದಲ್ಲಿರುವ ಲೇಖನಗಳು ಅದ್ಭುತವಾಗಿವೆ, ಇದೊಂದು ಸಂಗ್ರಹಯೋಗ್ಯ ಕೃತಿಯಾಗಿದೆ ಎಂದರು.ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕೆ ಅಕ್ಕ ಅವರು ಮಾತನಾಡಿ, ಬಸವಾದಿ ಶರಣರ ಸಂಪೂರ್ಣ ಚಿತ್ರಣವನ್ನು ಬಸವಪ್ರಭ ಪುಸ್ತಕ ಹೊಂದಿದ್ದು ಇದರ ಮೌಲ್ಯವನ್ನು ಹೆಚ್ಚಿಸಿದೆ. ಲೇಖನಗಳು ಅತ್ಯುತ್ತಮವಾಗಿ ಮೂಡಿಬಂದಿವೆ. ಇದೊಂದು ಸಂಗ್ರಹಯೋಗ್ಯ ಪುಸ್ತಕ. ಕಲ್ಯಾಣ ಸೇರಿದಂತೆ ಮತ್ತಿತರ ಕಡೆಯಿರುವ ಶರಣರ ಸ್ಮಾರಕಗಳ ಮಾಹಿತಿಯನ್ನು ಈ ಪುಸ್ತಕದಲ್ಲಿ ನೀಡಿದ್ದು ಸಂತಸ ಮೂಡಿಸಿದೆ ಎಂದರು.ಬಸವಪ್ರಭ ಪುಸ್ತಕವು 12ನೇ ಶತಮಾನದ ಬಸವಣ್ಣ ಹಾಗೂ ಬಸವಕಲ್ಯಾಣದ ದರ್ಶನ ಮಾಡಿಸಿದಂತಾಗಿದೆ. ಹಾಗೆಯೇ ಶಾಲಾ ಕಾಲೇಜು ಮಕ್ಕಳು ಬಸವಕಲ್ಯಾಣಕ್ಕೆ ಭೇಟಿ ನೀಡಿ, 12ನೇ ಶತಮಾನದ ಇತಿಹಾಸ ತಿಳಿಸುವಂತಾಗಲಿ. ಅದಕ್ಕಾಗಿ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ಸಲಹೆ ನೀಡಬೇಕು ಎಂದರು.ಭಾಲ್ಕಿಯ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಹಾಗೂ ಹುಲಸೂರು ಸಂಸ್ಥಾನ ಮಠದ ಡಾ. ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಬಸವ ಪ್ರಭ ಪುಸ್ತಕ ಕುರಿತಂತೆ ವರ್ಣಿಸಲು ಶಬ್ದಗಳೇ ಸಾಕಾಗುತ್ತಿಲ್ಲ. ಪುಸ್ತಕದಲ್ಲಿ ಓದುಗರಿಗೆ ಉತ್ತಮ ಲೇಖನ ನೀಡಿದ್ದಾರೆ. ಅಲ್ಲದೇ ಈ ಪುಸ್ತಕವನ್ನು ಉಚಿತವಾಗಿ ನೀಡುತ್ತಿರುವುದು ಮತ್ತೊಂದು ವಿಶೇಷತೆಯಾಗಿದೆ ಎಂದರು.ಇದೇ ಸಂದರ್ಭದಲ್ಲಿ ಪುಸ್ತಕಕ್ಕೆಲೇಖನಗಳನ್ನು ನೀಡಿದ ಲೇಖಕರುಗಳಾದ ಪಾರ್ವತಿ ಸೋನಾರೆ, ರಘುಶಂಕ ಭಾತಂಬ್ರಾ ಹಾಗೂ ಗುರುನಾಥ ಗಡ್ಡೆ ಸೇರಿದಂತೆ ಸಂಪಾದಕರಾದ ಬಿ.ವಿ ಮಲ್ಲಿಕಾರ್ಜುನಯ್ಯ ಅವರನ್ನು ಸನ್ಮಾನಿಸಲಾಯಿತು.

Share this article