ಬನ್ನಂಜೆ 90 ವಿಶ್ವನಮನ ಕಾರ್ಯಕ್ರಮದಲ್ಲಿ ಆಶೀರ್ವಚನ
ಬನ್ನಂಜೆ ಗೋವಿಂದಾಚಾರ್ಯರ ಮಾತು ಗಂಗಾ ಪ್ರವಾಹದಂತೆ. ಅವರ ವ್ಯಕ್ತಿತ್ವ ಮತ್ತು ಚಿಂತನೆಗಳು ಕಥೆಯಾಗಿ ಉಳಿದು ಮುಂದಿನ ತಲೆಮಾರುಗಳಿಗೆ ದಾರಿದೀಪವಾಗಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.ತಾಲೂಕಿನ ಕೆಕ್ಕಾರಿನ ರಘೋತ್ತಮ ಮಠದ ಶ್ರೀವಿದ್ಯಾರಣ್ಯ ಸಂಸ್ಕೃತ ಪಾಠಶಾಲಾ ಸಭಾಂಗಣದಲ್ಲಿ ಶ್ರೀರಾಮಚಂದ್ರಾಪುರ ಮಠ, ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಹಾಗೂ ಶ್ರೀಮಠದ ಹೊನ್ನಾವರ ಮತ್ತು ಕುಮಟಾ ಮಂಡಲಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಬನ್ನಂಜೆ 90 ವಿಶ್ವನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನುಡಿದರು.ಬನ್ನಂಜೆ ಅವರ ಮಾತುಗಳಿಗೆ ಆಳ ಮತ್ತು ಅಗಲ ಎರಡೂ ಇದ್ದವು. ಮಕ್ಕಳಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಅವರು ವಿಚಾರ ಮಂಡಿಸುತ್ತಿದ್ದರು. ಗೋಕರ್ಣದಲ್ಲಿ ನಾವು ಬಾಲ್ಯದಲ್ಲಿದ್ದಾಗಲೇ ಅವರ ಪ್ರವಚನಗಳನ್ನು ಕೇಳುತ್ತಿದ್ದೆವು. ಅವರ ವಾಗ್ಮಿತೆ ದೈವಕೃಪೆಯಿಂದ ಲಭಿಸಿದ್ದು, ಕೇವಲ ಮಾನವ ಪ್ರಯತ್ನದಿಂದ ಸಾಧ್ಯವಾಗುವಂಥದ್ದಲ್ಲ ಎಂದು ಬಣ್ಣಿಸಿದರು.ಸಂಸ್ಕೃತ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ಬನ್ನಂಜೆ ಗೋವಿಂದಾಚಾರ್ಯರ 90ನೇ ಜನ್ಮವರ್ಷದ ಅಂಗವಾಗಿ ರಾಜ್ಯ ಹಾಗೂ ವಿದೇಶಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬನ್ನಂಜೆ ಅವರ ಜೀವನಾಧಾರಿತ ಬಯೋಪಿಕ್ ಸಿನಿಮಾ ಆಗಸ್ಟ್ 3ರಂದು ಬಿಡುಗಡೆಯಾಗಲಿದ್ದು, ಬಹುಶ್ರುತ ವಿದ್ವಾಂಸರೊಬ್ಬರ ಕುರಿತಾಗಿ ನಿರ್ಮಾಣವಾಗುತ್ತಿರುವ ಪ್ರಥಮ ಚಿತ್ರ ಇದಾಗಿದೆ ಎಂದು ತಿಳಿಸಿದರು.ವಿದ್ವಾನ್ ರಮೇಶ ವಾಸುದೇವ ಗಮಕಿ ಮಾತನಾಡಿ, ಕೇವಲ ಕಲಿಕೆಯಲ್ಲ, ವಿದ್ಯೆಗೆ ಶರಣಾಗಬೇಕು ಎಂಬ ಸಂದೇಶವನ್ನು ಬನ್ನಂಜೆ ನೀಡುತ್ತಿದ್ದರು. ಭಾರತದಲ್ಲಿ ಜ್ಞಾನ ಮತ್ತು ಗಾನ ಒಟ್ಟಿಗೆ ಸಾಗಬೇಕು ಎಂಬುದು ಅವರ ಚಿಂತನೆಯಾಗಿತ್ತು ಎಂದು ಹೇಳಿದರು.ವಿದ್ವಾಂಸ ಜಗದೀಶ ಶರ್ಮಾ ಸಂಪ ಮಾತನಾಡಿ, ಬನ್ನಂಜೆ ಬಹುಶೃತ ವಿದ್ವಾಂಸರು. ಅವರ ಪ್ರವಚನಗಳ ಧ್ವನಿ ಗ್ರಹಣವೇ ವಿಶೇಷ. ಒಂದೊಂದು ಪದಕ್ಕೂ ಹತ್ತಾರು ಅರ್ಥವಿಸ್ತಾರ ಅವರ ಶಕ್ತಿ ಹಾಗೂ ಅಧ್ಯಯನದ ಫಲ. ಅವರ ಸ್ಮರಣೆಯ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು.ಶ್ರೀರಾಮಚಂದ್ರಾಪುರ ಮಠದ ಶಾಸನ ತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಹೆರವಟ್ಟ, ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ ಮಾತನಾಡಿದರು.
ಹಿರಿಯ ಕಲಾವಿದ ಪ್ರೊ. ಎಸ್. ಶಂಭು ಭಟ್ಟ ಕಡತೋಕ ಹಾಗೂ ಉದ್ಯಮಿ ಸುಬ್ರಾಯ ಭಟ್ಟ ಕೋಣಾರೆ ಉಪಸ್ಥಿತರಿದ್ದರು. ಕವಿತಾ ಉಡುಪ ಹಾಗೂ ಸುಮಾ ಶಾಸ್ತ್ರಿ ಅವರಿಂದ ಬನ್ನಂಜೆ ಹಾಡುಗಬ್ಬ ಕಾರ್ಯಕ್ರಮ ನಡೆಯಿತು. ಅಧ್ಯಾಪಕ ರಾಘವೇಂದ್ರ ಹೆಗಡೆ ನಿರೂಪಿಸಿದರು.ಕಾರ್ಯಕ್ರಮದ ಅಂಗವಾಗಿ ವಿಶ್ವಶಾಂತಿ ಸರಣಿಯಲ್ಲಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ವಿರಚಿತ ವಿಶ್ವಾಭಿಗಮನಮ್ ಯಕ್ಷನೃತ್ಯ ರೂಪಕ ಪ್ರದರ್ಶನಗೊಂಡಿತು. ಶಿರಸಿಯ ಯುವ ಕಲಾವಿದೆ ಕು. ತುಳಸಿ ಹೆಗಡೆ ಅವರ ಪ್ರಸ್ತುತಿಯಲ್ಲಿ ಸೊಗಸಾಗಿ ಮೂಡಿ ಬಂತು. ಶ್ರೀಕೃಷ್ಣನವ್ಯಕ್ತಿತ್ವ, ರಾಧೆಯ ನಿರ್ಮಲ ಪ್ರೇಮ ಭಕ್ತಿ, ಸೂಕ್ಷ್ಮ ಅಭಿನಯ, ಸುಂದರ ಲಾಲಿತ್ಯಪೂರ್ಣ ಕುಣಿತಗಳು ಸೇರಿದ ಅಪಾರ ಆಸಕ್ತರನ್ನು ರಂಜಿಸಿತು. ಗೋಕುಲ ವಾಸಿಗಳ ಒಡನಾಟ ಹಾಗೂ ಜೀವನ ಆದರ್ಶವಾಗಿ ಕಂಡು ಬಂದಿತು.ರೂಪಕದ ಹಿಮ್ಮೇಳದಲ್ಲಿ ಸುಶ್ರಾವ್ಯ ಕಂಠ ಸಿರಿಯ ಖ್ಯಾತ ಭಾಗವತ ಕೇಶವ ಹೆಗಡೆ ಕೊಳಗಿ, ರಸ ಭಾವ ಪ್ರಚೋದಕ ಅಪೂರ್ವದ ಪೆಟ್ಟುಗಳ ಪ್ರಸಿದ್ಧ ಮದ್ದಲೆವಾದಕ ಶಂಕರ ಭಾಗವತ್, ಚಂಡೆವಾದಕ ವಿಘ್ನೇಶ್ವರ ಗೌಡ ಹಾಗೂ ಪ್ರಸಾಧನ ಕಲಾವಿದ ಗಣಪತಿ ಹೆಗಡೆ ಮೂರೂರು ಸಹಕರಿಸಿದರು.ಕಾರ್ಯಕ್ರಮಕ್ಕೆ ಶ್ರೀಮಠದ ಹೊನ್ನಾವರ ಹಾಗೂ ಕುಮಟಾ ಮಂಡಲ, ಶ್ರೀ ರಘೋತ್ತಮ ಮಠ ಮಹಾಸಮಿತಿ ಹಾಗೂ ಕ್ರಿಯಾಸಮಿತಿ ಸಹಕಾರ ನೀಡಿದ್ದವು.