ಶಿರಸಿ: ಅನ್ನ, ಅಕ್ಷರ- ಆರೋಗ್ಯ ಕೇಂದ್ರವನ್ನಾಗಿಟ್ಟುಕೊಂಡು ಪ್ರಕೃತಿಗೆ ಪೂರಕವಾದ ಚಟುವಟಿಕೆಯನ್ನು ನಡೆಸುತ್ತಿರುವ ಅದಮ್ಯ ಚೇತನ ಸಂಸ್ಥೆಯ ಕಾರ್ಯ ಶ್ಲಾಘನೀಯ. ಪರಿವರ್ತನೆ ನಮ್ಮಿಂದ ಪ್ರಾರಂಭವಾಗಿ ಹಿಂದಿನ ಕಾಲದ ಬಳುವಳಿಯಾದ ಶುದ್ಧ ಪರಿಸರವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.ಮಂಗಳವಾರ ತಾಲೂಕಿನ ಭೈರುಂಬೆಯ ಹುಳಗೋಳ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆ ಹಾಗೂ ಭೈರುಂಬೆಯ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಪ್ಲೇಟ್ ಬ್ಯಾಂಕ್ ಮತ್ತು ಖಗೋಳ ವೀಕ್ಷಣಾ ತರಬೇತಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.ಮಾಜಿ ಕೇಂದ್ರ ಸಚಿವ ದಿ. ಅನಂತಕುಮಾರ ಅವರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಈ ಭಾಗದ ಒಡನಾಟವಿತ್ತು. ಈ ಭಾಗದಲ್ಲಿ ಕೌಟುಂಬಿಕ ಪರಿಚಯ ಹೊಂದಿದ್ದಾರೆ. ಕೇಂದ್ರ ಸಚಿವರಾಗಿ ಪ್ರಭಾವಿಯಾಗಿ ಕೆಲಸ ಮಾಡುವ ಜತೆ ಸಮಾಜದಲ್ಲಿ ಕಂಡುಬರುತ್ತಿರುವ ಮೌಲ್ಯದ ಕುಸಿತದ ಹಿನ್ನೆಲೆ ಅದಮ್ಯ ಚೇತನ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಸಮಾಜಮುಖಿ ಕೆಲಸ ಮಾಡಿದ್ದರು. ಖಗೋಳ ಜ್ಞಾನ ಸರಿಯಾಗಿ ಬಳಸಿಕೊಂಡರೆ ಅಸ್ಸಾಂ ಮಾದರಿಯಲ್ಲಿ ಭೈರುಂಬೆಯಲ್ಲೂ ಖಗೋಲ ಪ್ರವಾಸೋದ್ಯಮ ಸೃಷ್ಟಿಸಲು ಸಾಧ್ಯವಿದೆ. ವಿಭವ ಮಂಗಳೂರಂತಹ ಯುವ ತಜ್ಞರ ನೆರವಿನಿಂದ ವಿದ್ಯಾರ್ಥಿಗಳಿಗೆ ಖಗೋಳ ಶಾಸ್ತ್ರ ಅಧ್ಯಯನಕ್ಕೆ ಸಹಕಾರಿಯಾಗಲಿ ಎಂದರು.
ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ ಮಾತನಾಡಿ, ಮಣ್ಣು, ನೀರಿನಲ್ಲಿ ಸೇರಿಕೊಳ್ಳುವ ಮೈಕ್ರೋ ಪ್ಲಾಸ್ಟಿಕ್ ಸಣ್ಣ ಉಪ್ಪಿನಲ್ಲೂ ಸೇರಿಕೊಂಡು ನಮ್ಮ ಉದರ ಸೇರುವಂತೆ ಆಗಿದೆ. ಪ್ರತಿ ಊಟ ಮಾಡುವಾಗಲೂ ಮೈಕ್ರೋ ಪ್ಲಾಸ್ಟಿಕ್ ಸೇರುತ್ತಿದ್ದು, ಇದರಿಂದ ಏನೇನು ಸಮಸ್ಯೆ ಆಗುತ್ತದೆ ಎಂಬ ಅಧ್ಯಯನ ಆಗಬೇಕಿದೆ. ಸಸ್ಯ ಶ್ಯಾಮಲಾ ಎಂದಿದ್ದ ಭಾರತಲ್ಲೂ ಒಳ್ಳೆಯ ಪರಿಸರ ಕಾಣೆಯಾಗುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯ ಜತೆ ವಾಯುಮಾಲಿನ್ಯದಲ್ಲೂ ನಂಬರ್ ಒನ್ ಸ್ಥಾನದಲ್ಲಿ ಬರುತ್ತಿದೆ. ಎಲ್ಲರ ಬದುಕು ಪರಿಸರದ ಮೇಲೂ ಪರಿಣಾಮ ಬೀರುತ್ತಿದೆ. ನಮ್ಮ ಬದುಕಿನ ಶೈಲಿಯಲ್ಲಿ ಬದಲಾಗುವುದು ಕಾರಣವಾಗಿದೆ. ಪರ್ಯಾಯವಾಗಿ ಬದಲೀ ಇಂಧನ ಮೂಲ ಬಳಸಬೇಕು ಎಂದರು.ಖಗೋಳ ವೀಕ್ಷಣಾ ಚಟುವಟಿಕೆಗಳ ಪರಿಚಯದ ಕುರಿತು ಆಗಸ ೩೬೦ ಸಂಚಾಲಕ ವಿಭವ ಮಂಗಳೂರು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಿದರು.ಬೆಂಗಳೂರಿನ ಓಕ್ ಸಿಸ್ಟಮ್ ಪ್ರೈ.ಲಿ. ನಿರ್ದೇಶಕ ಪ್ರದೀಪ ಓಕ್, ವಜ್ರ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಆರ್.ಎಸ್. ಹೆಗಡೆ ಭೈರುಂಬೆ, ವೃಕ್ಷಲಕ್ಷದ ಅನಂತ ಹೆಗಡೆ ಅಶೀಸರ, ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ, ಹುಳಗೋಳ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಕೆಶಿನ್ಮನೆ, ಶಾ.ಶಿ. ಹಾಗೂ ಗ್ರಾ.ಅ. ಸಂಸ್ಥೆಯ ಕಾರ್ಯದರ್ಶಿ ಎಂ.ವಿ. ಹೆಗಡೆ ಹುಳಗೋಳ, ಆರ್.ಎಸ್. ಭಟ್ಟ ನಿಡಗೋಡ ಮತ್ತಿತರರು ಇದ್ದರು. ಅನಂತ ಭಟ್ಟ ಹುಳಗೋಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.