ಕನ್ನಡಪ್ರಭ ವಾರ್ತೆ ನಾಗಮಂಗಲ
ರಾಜ್ಯದಲ್ಲಿ ಸಿಎಂ ಬದಲಾವಣೆ, ಸಂಪುಟ ಪುನಾರಚನೆ ಮತ್ತು ಸಚಿವರ ಖಾತೆ ಬದಲಾವಣೆಯ ಚರ್ಚೆಯ ಬೆನ್ನಲ್ಲೇ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗಲು ದೇವರು ಶಕ್ತಿ ನೀಡಲೆಂದು ಹರಕೆ ಹೊತ್ತಿರುವ ಅಭಿಮಾನಿಯೊಬ್ಬರು ತಿರುಪತಿಗೆ ಪಾದಯಾತ್ರೆ ಕೈಗೊಂಡಿದ್ದಾರೆ.ಸಚಿವ ಎನ್.ಚಲುವರಾಯಸ್ವಾಮಿ ಅವರ ಕಟ್ಟಾ ಬೆಂಬಲಿಗ ತಾಲೂಕಿನ ಜೋಡಿಚಿಕ್ಕನಹಳ್ಳಿ ಆನಂದ ಅವರೇ ಭವಿಷ್ಯದಲ್ಲಿ ಚಲುವರಾಯಸ್ವಾಮಿ ಸಿಎಂ ಆಗಲಿ ಎಂದು ಹರಕೆ ಹೊತ್ತು ಚಲುವರಾಯಸ್ವಾಮಿ ಫೋಟೋ ಹಿಡಿದುಕೊಂಡು ತಮ್ಮ ಹದಿನೈದು ಮಂದಿ ಸ್ನೇಹಿತರ ಜೊತೆಗೂಡಿ ತಿರುಪತಿಗೆ ಪಾದಯಾತ್ರೆ ನಡೆಸುತ್ತಿರುವ ಅಪ್ಪಟ ಅಭಿಮಾನಿ.
ಪಟ್ಟಣದ ಟಿ.ಬಿ.ಬಡಾವಣೆಯ ಕೆಲ ಸ್ನೇಹಿತರು ಸೇರಿದಂತೆ ತಾಲೂಕಿನ ಲಕ್ಕೇಗೌಡನಕೊಪ್ಪಲು ಮತ್ತು ದೊಡ್ಡಚಿಕ್ಕನಹಳ್ಳಿಯ ಹಲವು ಯುವಕರೊಂದಿಗೆ ಕಳೆದ ಬುಧವಾರದಿಂದ ತಿರುಪತಿಗೆ ಪಾದಯಾತ್ರೆ ನಡೆಸುತ್ತಿರುವ ಆನಂದ್ ನ.15ರಂದು ತಿರುಪತಿ ತಲುಪಿ ಇಷ್ಟಾರ್ಥ ನೆರವೇರಿಸುವಂತೆ ತಿಮ್ಮಪ್ಪನಲ್ಲಿ ಪ್ರಾರ್ಥಿಸಲಿದ್ದಾರೆಂದು ತಿಳಿದುಬಂದಿದೆ.ಪಾದಯಾತ್ರೆಯಲ್ಲಿದ್ದ ಆನಂದ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಕನ್ನಡ ಪ್ರಭಕ್ಕೆ ಪ್ರತಿಕ್ರಿಯಿಸಿ, ಕಳೆದ 1998ರಿಂದಲೂ ನಾನು ಎನ್.ಚಲುವರಾಯಸ್ವಾಮಿ ಅವರ ಅಭಿಮಾನಿಯಾಗಿದ್ದೇನೆ. ಅವರು ಶಾಸಕ, ಸಂಸದ ಮತ್ತು ಸಚಿವರಾಗಿದ್ದ ಅವಧಿಯಲ್ಲಿ ಜಿಲ್ಲೆ ಮತ್ತು ತಾಲೂಕಿನಲ್ಲಿ ಮಾಡಿರುವ ಅನೇಕ ಶಾಶ್ವತ ಅಭಿವೃದ್ಧಿ ಕಾರ್ಯಗಳು ಸಾಕ್ಷಿಗುಡ್ಡೆಗಳಾಗಿ ಉಳಿದಿವೆ. ಈಗ ಕೃಷಿ ಸಚಿವರಾಗಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿರುವುದರಿಂದ ರೈತರು ಮತ್ತು ಜನಸಾಮಾನ್ಯರಿಗೆ ಬಹಳಷ್ಟು ಅನುಕೂಲವಾಗುತ್ತಿದೆ ಎಂದರು.
ಎಸ್.ಎಂ.ಕೃಷ್ಣ ಅವರನ್ನು ಹೊರತುಪಡಿಸಿದರೆ ಜಿಲ್ಲೆಯಿಂದ ಮತ್ಯಾರೂ ಮುಖ್ಯಮಂತ್ರಿಯಾಗಿಲ್ಲ. ಹಳೇ ಮೈಸೂರು ಭಾಗದಲ್ಲಿ ಪ್ರಭಾವಿ ನಾಯಕನಾಗಿ ಎಲ್ಲರ ವಿಶ್ವಾಸಗಳಿಸಿರುವ ಎನ್.ಚಲುವರಾಯಸ್ವಾಮಿ ಅವರಿಗೆ ಮುಖ್ಯಮಂತ್ರಿಯಾಗುವ ವ್ಯಕ್ತಿತ್ವ ಇದೆ. ಅವರು ಸಿಎಂ ಆದರೆ ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.ಹಾಗಾಗಿ ಮುಂದೊಂದು ದಿನ ಭವಿಷ್ಯದಲ್ಲಿ ಎನ್.ಚಲುವರಾಯಸ್ವಾಮಿ ಮುಖ್ಯಮಂತ್ರಿಯಾಗಬೇಕು. ಅಲ್ಲಿವರೆಗೂ ಅವರ ಆಯಸ್ಸು, ಆರೋಗ್ಯ, ರಾಜಕೀಯ ಶ್ರೇಯಸ್ಸು ಮತ್ತು ಜನಸೇವೆ ಮಾಡುವ ಶಕ್ತಿ ಕರುಣಿಸಲೆಂದು ಹರಕೆ ಹೊತ್ತು ಕಳೆದ ನಾಲ್ಕು ವರ್ಷದಿಂದ ತಿರುಪತಿಗೆ ಪಾದಯಾತ್ರೆ ನಡೆಸುತ್ತಿರುವುದಾಗಿ ತಿಳಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದರೆ ನಮ್ಮೆಲ್ಲರಿಗೂ ಬಹಳ ಖುಷಿಯಾಗುತ್ತದೆ. ನವೆಂಬರ್ ತಿಂಗಳಲ್ಲೇ ಡಿಕೆಶಿ ಸಿಎಂ ಆಗಬೇಕೆಂಬುದು ನಮ್ಮೆಲ್ಲರ ಬಯಕೆ. ಚಲುವರಾಯಸ್ವಾಮಿ ಅವರ ರಾಜಕೀಯ ಶ್ರೇಯಸ್ಸಿನ ಜೊತೆಗೆ ಡಿ.ಕೆ.ಶಿವಕುಮಾರ್ ಅವರು ಶೀಘ್ರದಲ್ಲೇ ಮುಖ್ಯಮಂತ್ರಿಯಾಗಲೆಂದು ತಿರುಪತಿ ತಿಮ್ಮಪ್ಪನಲ್ಲಿ ಪ್ರಾರ್ಥಿಸುತ್ತೇನೆ ಎಂದರು.