ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಗರದ ವಾರ್ತಾ ಭವನದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ವರನಟ ಡಾ.ರಾಜಕುಮಾರ್ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡಾ.ರಾಜಕುಮಾರ್ ಚಲನಚಿತ್ರಗಳನ್ನು ನೋಡುವುದರ ಮೂಲಕ ನಾನು ಕನ್ನಡ ಕಲಿತಿದ್ದೇನೆ. ರಾಜಕುಮಾರ್ ಅವರು ಕನ್ನಡ ಭಾಷೆ ಬಿಟ್ಟು ಬೇರ್ಯಾವ ಭಾಷೆಗಳಲ್ಲಿ ನಟಿಸದೆ ತಮ್ಮ ಕನ್ನಡ ಅಭಿಮಾನ ತೋರಿದ್ದಾರೆ. ಅವರಂತೆ ನಾವೆಲ್ಲರೂ ನಾಡು-ನುಡಿಯ ಬಗ್ಗೆ ಅಭಿಮಾನ ಹೊಂದಬೇಕು ಎಂದು ಹೇಳಿದರು.
ಜೀವನದಲ್ಲಿ ಶಿಸ್ತನ್ನು ಹೇಗೆ ಪಾಲಿಸಬೇಕು ಎಂಬುದನ್ನು ಡಾ.ರಾಜಕುಮಾರ್ ಅವರ ಕಾಮನಬಿಲ್ಲು ಚಿತ್ರದಿಂದ ನಾವೆಲ್ಲ ಕಲಿಯಬೇಕು. ರಾಜಕುಮಾರ್ ಅವರು ತಮ್ಮ ಇಳಿ ವಯಸ್ಸಿನಲ್ಲೂ ಕೂಡ ವ್ಯಾಯಾಮ ಮಾಡುವುದರ ಮೂಲಕ ತಮ್ಮ ಶಿಸ್ತು ಬದ್ಧ ಜೀವನ ಸಾಗಿಸಿದರು. ನೂರು ದಿನಗಳ ಕಾಲ ಕಾಡಿನಲ್ಲಿದ್ದರೂ ತಮ್ಮ ಆರೋಗ್ಯ ಮತ್ತು ಜೀವನೋತ್ಸಾಹ ಕಾಯ್ದುಕೊಂಡಿರುವುದು ಅವರ ಶಿಸ್ತಿನ ಜೀವನಕ್ಕೆ ಸಾಕ್ಷಿಯಾಗಿದೆ. ಡಾ.ರಾಜ್ ಕನ್ನಡ ನೆಲ, ಜಲ, ಭಾಷೆ ಮೇಲೆ ಹೊಂದಿದಂತಹ ಅಭಿಮಾನದ ಸ್ವಲ್ಪ ಭಾಗವಾದರೂ ನಾವು ಅಳವಡಿಸಿಕೊಳ್ಳಬೇಕು. ಅಲ್ಲದೇ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಕನ್ನಡ ನಾಡು, ನೆಲ, ಜಲ, ಭಾಷೆಗೆ ಕೊಡುಗೆ ನೀಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.ಡಾ.ರಾಜಕುಮಾರ್ ಕುರಿತು ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಶಿರೀಷ್ ಜೋಶಿ, ಸಾರ್ವಜನಿಕ ಕ್ಷೇತ್ರದಲ್ಲಿ ಜನರ ಗಾಢವಾದ ಪ್ರೀತಿ ಗಳಿಸುವುದು ದೊಡ್ಡ ಸಾಧನೆಯೇ ಸರಿ. ಸಂಗೀತ ಕ್ಷೇತ್ರದಲ್ಲಿ ಭಿಮಸೇನ್ ಜೋಶಿ, ಉಸ್ತಾದ ಬಿಸ್ಮಿಲ್ಲಾ ಖಾನ್, ಸಾಹಿತ್ಯದಲ್ಲಿ ದ.ರಾ.ಬೇಂದ್ರೆ, ಅಂತಹ ಮಹಾನ್ ವ್ಯಕ್ತಿಗಳಿಗೆ ಅದೇ ರೀತಿ ಚಿತ್ರರಂಗದಲ್ಲಿ ಡಾ.ರಾಜಕುಮಾರ್ ಅವರಿಗೆ ಅಂತಹ ಗಾಢವಾದ ಪ್ರೀತಿ ಸಿಕ್ಕಿದೆ ಎಂದು ಹೇಳಿದರು.
ಅವರು ನಟನಾಗಿ ಮಾತ್ರವಲ್ಲದೇ ಒಬ್ಬ ಆದರ್ಶ ವ್ಯಕ್ತಿಯಾಗಿ ಕಾಣುತ್ತಾರೆ. ರಾಜಕುಮಾರ್ ಅವರು ಸಿನಿಮಾ ಕ್ಷೇತ್ರದ ಮೂಲಕ ಕನ್ನಡ ನಾಡು ನುಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ಹೆಚ್ಚಾಗಿ ಭಾಷೆ, ನೆಲ,ಜಲ ಮಹತ್ವದ ಕುರಿತ ಚಿತ್ರಗಳಿಗೆ ಒತ್ತು ನೀಡುತ್ತಿದ್ದರು. ಅವರು ಅನೇಕ ಕಲಾವಿದರು, ಸಹ ನಟರಿಗೂ ವೈಯಕ್ತಿಕವಾಗಿ ಸಹಾಯ ಹಸ್ತ ಚಾಚುತ್ತಿದ್ದರು. ರಾಜಕುಮಾರ್ ಸರಳ ಜೀವನಕ್ಕೆ ಆದ್ಯತೆ ನೀಡುತ್ತಿದ್ದರು. ಜನರ ಹೃದಯದಲ್ಲಿ ನೆಲನಿಂತ ಮಾನವೀಯ ಗುಣವುಳ್ಳ ನಾಯಕ ನಟರಾಗಿದ್ದ ಅವರಿಗೆ ನಟಸಾರ್ವಭೌಮ, ಗಾನ ಗಂಧರ್ವ ಎಂಬ ಬಿರುದುಗಳನ್ನು ಅಭಿಮಾನಿಗಳು ನೀಡಿದ್ದಾರೆ ಎಂದು ಜೋಶಿ ಹೇಳಿದರು.
ಸುನಿತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಮಂಜುನಾಥ ಹುಡೇದ ಹಾಗೂ ಗೋಕಾಕದ ಮಧುರ ಸಂಗೀತ ಗೆಳೆಯರ ಬಳಗದ ರಾಮಚಂದ್ರ ಕಾಕಡೆಯವರು ಪ್ರಸ್ತುತಪಡಿಸಿದ ಡಾ.ರಾಜಕುಮಾರ್ ಅವರ ಜನಪ್ರಿಯ ಗೀತಗಾಯನವು ಸಭಿಕರನ್ನು ಭಾವಪರವಶಗೊಳಿಸಿತು.
ವಾರ್ತಾ ಭವನದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ವರನಟ ಡಾ.ರಾಜಕುಮಾರ್ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಡಾ.ರಾಜಕುಮಾರ್ ಅವರ ಶ್ರಾವಣ ಬಂತು ಚಿತ್ರದ ಇದೇ ರಾಗದಲ್ಲಿ ಇದೇ ತಾಳದಲ್ಲಿ ಹಾಡನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಕನ್ನಡ ಪ್ರೇಮ ಮೆರೆದರು.