ದಸರಾ ಸರ್ವರ ಒಗ್ಗೂಡಿವಿಕೆಗೆ ಕಾರಣವಾಗಲಿ: ಆರ್. ಐಶ್ವರ್ಯ

KannadaprabhaNewsNetwork |  
Published : Sep 27, 2025, 12:02 AM IST

ಸಾರಾಂಶ

ಮಡಿಕೇರಿ ಗಾಂಧಿ ಮೈದಾನದಲ್ಲಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಮೂರನೇ ದಿನದ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮಡಿಕೇರಿ ದಸರಾ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಮಡಿಕೇರಿ

ದಸರಾ ಎಂಬುದೇ ಸಂಭ್ರಮಕ್ಕೆ ಸಂಕೇತವಾಗಿರುವ ಉತ್ಸವವಾಗಿದ್ದು, ನಾಡಹಬ್ಬವನ್ನು ಸಂತೋಷದಿಂದ ಎಲ್ಲರೂ ಒಗ್ಗೂಡಿ ಆಚರಿಸಿದರೆ ಈ ಹಬ್ಬ ಅರ್ಥಪೂರ್ಣವಾಗುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಕರೆ ನೀಡಿದ್ದಾರೆ.ನಗರದ ಗಾಂಧಿ ಮೈದಾನದಲ್ಲಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಆಯೋಜಿತ ಮೂರನೇ ದಿನದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ಅವರು ಮಾತನಾಡಿದರು.

ದಸರಾ ಸಂದರ್ಭ ದಶದಿನಗಳ ಕಾಲ ಸಾಂಸ್ಕೃತಿಕ ತೇರು ಸಂಭ್ರಮದಿಂದ ನಡೆಯುತ್ತದೆ. ಸ್ತ್ರೀಶಕ್ತಿಯನ್ನು ವಿಜೃಂಭಿಸುವ ಉತ್ಸವವಾಗಿ ದಸರಾ ಕಂಗೊಳಿಸುತ್ತದೆ. ವಿವಿಧ ಅವತಾರಗಳಲ್ಲಿ ಕಂಗೊಳಿಸುವ ಶಕ್ತಿರೂಪಿಣಿ ಸ್ತ್ರೀಶಕ್ತಿಗೆ ನಮಿಸುವ ಅವಕಾಶ ದಸರಾದಲ್ಲಿ ದೊರಕಲಿದೆ ಎಂದರು.ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ದಸರಾ ಈ ವರ್ಷ ಸೆಪ್ಟೆಂಬರ್‌ನಲ್ಲಿಯೇ ಬಂದಿರುವುದರಿಂದಾಗಿ ಮಳೆಯ ಸವಾಲನ್ನೂ ಎದುರಿಸಬೇಕಾಗಿದೆ. ಶೋಭಾಯಾತ್ರೆಗೆ ಯಾವುದೇ ಸಮಸ್ಯೆಯಾಗದಂತೆ ಮಳೆಯ ಆರ್ಭಟ ಕಡಮೆಯಾಗಲಿ ಎಂದೂ ಹಾರೈಸಿದರು.ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಸಮಿತಿ ಅಧ್ಯಕ್ಷ ಬಿ.ಕೆ. ಜಗದೀಶ್ ಮಾತನಾಡಿ, ಮಳೆಯಿಂದಾಗಿ ದಶಮಂಟಪಗಳ ತಯಾರಿ ಬಹಳ ಕಷ್ಟಸಾಧ್ಯವಾಗುತ್ತಿದೆ. ಮಂಟಪಗಳ ತಯಾರಿ ಮಳೆಯಿಂದಾಗಿ ಬಹಳ ನಿಧಾನಗತಿಯಲ್ಲಿ ಸಾಗಿದ್ದು, ಶೋಭಾಯಾತ್ರೆಗೆ ವರುಣನ ಅವಕೃಪೆಯಿಲ್ಲದಂತೆ ದೇವಾನುದೇವತೆಯರು ಹಾರೈಸಬೇಕೆಂದು ಪ್ರಾರ್ಥಿಸಿದರು.

ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಹಾಜರಿದ್ದರು.

ಎಸ್‌ಪಿಬಿಗೆ ಗಾನನಮನ:

ಮೂರನೇ ದಿನದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕ ಎಸ್.ಬಿ. ಬಾಲಸುಬ್ರಹ್ಮಣ್ಯಂ ಅವರ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಪುಪ್ಪ ನಮನ ಮತ್ತು ಗಾನ ನಮನವನ್ನು ಕೂರ್ಗ್‌ ಸನ್‌ರೈಸ್ ಮೇಲೋಡಿಸ್ ತಂಡದಿಂದ ಸಲ್ಲಿಸಲಾಯಿತು. ರವಿ ನೇತೃತ್ವದ ಈ ತಂಡ ಎಸ್‌ಪಿಬಿ ಅವರ ಜನಪ್ರಿಯ ಗೀತೆಗಳನ್ನು ಹಾಡಿ ರಂಜಿಸಿತು. ಮಂಗಳೂರಿನ ಜ್ಞಾನ ಐತಾಳ್ ತಂಡದ ಹಾಡು, ನೃತ್ಯಕ್ಕೆ ಪ್ರೇಕ್ಷಕರು ಮನಸೋತರೆ, ಸುಳ್ಯದ ಸುಗಿಪು ತಂಡದಿಂದ ಅಯೋಧ್ಯೆಯ ಬಾಲರಾಮನ ಮೂರ್ತಿ ಶಿಲ್ಪಿ ಅರುಣ್ ಯೋಗಿರಾಜ್ ಕುರಿತ ನೃತ್ಯರೂಪಕ ವಿನೂತನ ರೀತಿಯಿಂದಾಗಿ ಗಮನ ಸಳೆಯಿತು. ಮಡಿಕೇರಿ ಬಾಲಕರ ಬಾಲಮಂದಿರದ ವಿದ್ಯಾರ್ಥಿಗಳು ಶಿವತಾಂಡವ ನೃತ್ಯ ಮಾಡಿದರೆ, ನಾಪೋಕ್ಲುವಿನ ಓಂಕಾರ್ ತಂಡದ ರಸಮಂಜರಿ ಕೂಡ ದಿನದ ಕಾರ್ಯಕ್ರಮಗಳಲ್ಲಿನ ಆಕರ್ಷಣೆಯಾಗಿತ್ತು.

ಮಡಿಕೇರಿ ದಸರಾ ಬ್ರಾಂಡ್ ಆಗಲಿ:

ಕೊಡಗು ಪತ್ರಕರ್ತರ ಸಂಘ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, 160 ವರ್ಷಗಳ ಇತಿಹಾಸವಿರುವ ಮಡಿಕೇರಿ ದಸರಾದಲ್ಲಿ ಕರಗೋತ್ಸವ, ದಶಮಂಟಪಗಳ ಶೋಭಾಯಾತ್ರೆ, ಸಾಂಸ್ಕೃತಿಕ, ಕ್ರೀಡೆ, ಕವಿಗೋಷ್ಠಿ, ಮಕ್ಕಳ ದಸರಾ, ಯುವದಸರಾ, ಜಾನಪದ ದಸರಾ, ಕಾಫಿ ದಸರಾ, ಮಹಿಳಾ ದಸರಾ ಸೇರಿದಂತೆ ಸಾಕಷ್ಟ ವೈವಿಧ್ಯತೆಗಳಿದ್ದರೂ ರಾಜ್ಯವ್ಯಾಪಿ ನಿರೀಕ್ಷಿತ ಪ್ರಚಾರ ಸಿಕ್ಕುತ್ತಿಲ್ಲ. ಮಡಿಕೇರಿ ದಸರಾ ಬ್ರಾಂಡ್ ಆಗಲೇಇಲ್ಲ. ಮಡಿಕೇರಿ ದಸರಾವನ್ನು ಕೂಡ ಬ್ರಾಂಡ್ ರೂಪದಲ್ಲಿ ಗಮನಿಸುವಂತಾದರೆ ಪ್ರಾಯೋಜಕತ್ವವು ಸುಲಭ ಸಾಧ್ಯವಾಗಿ ಸರ್ಕಾರ ನೀಡುವ ಅತ್ಯಲ್ಪ ಅನುದಾನಕ್ಕಾಗಿ ಕೈಯೊಡ್ಡುವ ಪರಿಸ್ಥಿತಿ ಬರಲಾರದು ಎಂದು ಅಭಿಪ್ರಾಯಪಟ್ಟರು.

ಮಡಿಕೇರಿ ಹೊರತಾಗಿ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ದಸರಾ ಬಗ್ಗೆ ಹೆಚ್ಚಿನ ಪ್ರಚಾರವಾದರೆ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರು ದಸರಾ ಕಾರ್ಯಕ್ರಮಗಳಿಗೆ ಬರುತ್ತಾರೆ ಎಂದೂ ಅನಿಲ್ ಹೇಳಿದರು.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ