ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನದಲ್ಲಿ, ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ‘ಕುಡ್ಲದ ಪಿಲಿಪರ್ಬ’ದ 4ನೇ ಆವೃತ್ತಿಯ ಸ್ಪರ್ಧಾಕೂಟ ಸೆ.30ರಂದು ನಗರದ ನೆಹರೂ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಅಂದು ಬೆಳಗ್ಗೆ 9.30ಕ್ಕೆ ಉದ್ಘಾಟನೆಯಾಗಲಿದ್ದು, 10 ಗಂಟೆಗೆ ಭವ್ಯ ವಿಶಾಲ ವೇದಿಕೆಯಲ್ಲಿ ಸ್ಪರ್ಧೆ ಆರಂಭವಾಗಲಿದೆ. 10 ತಂಡಗಳು ಭಾಗವಹಿಸಲಿವೆ ಎಂದು ಹೇಳಿದರು.ಭಾಗವಹಿಸುವ ಪ್ರತಿ ತಂಡವೂ ವೈಭವದ ಮೆರವಣಿಗೆಯ ಮೂಲಕ ವೇದಿಕೆಗೆ ಪ್ರವೇಶ ಮಾಡಲಿದ್ದು, ಪ್ರತಿ ತಂಡವೂ 20 ನಿಮಿಷಗಳ ಕಾಲ ಪ್ರದರ್ಶನ ನೀಡಲಿವೆ. ಅಕ್ಕಿಮುಡಿ ಹಾರಿಸುವುದು ಕಡ್ಡಾಯವಾಗಿದ್ದು, ಕರಿ ಹುಲಿಗಳು, ಮರಿ ಹುಲಿಗಳು, ಹಿಮ್ಮೇಳ, ಧರಣಿ ಮಂಡಲ ಹೀಗೆ ಇಡೀ ಕೂಟವು ವೈವಿಧ್ಯತೆಯಿಂದ ಕೂಡಿರಲಿದೆ ಎಂದರು.
ಸ್ಪರ್ಧಾಕೂಟದಲ್ಲಿ 6 ಮಂದಿ ತೀರ್ಪುಗಾರರು ಇದ್ದು, ನಾಲ್ಕು ಮಂದಿ ವೇದಿಕೆಯಲ್ಲಿ ಮತ್ತು ಇಬ್ಬರು ವಿಡಿಯೊ ವೀಕ್ಷಿಸುತ್ತಾ ಥರ್ಡ್ ಅಂಪಾಯರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಹುಲಿವೇಷ ತಂಡ ವೇದಿಕೆಗೆ ಆಗಮಿಸಿ, ಪ್ರದರ್ಶನ ನೀಡಿ ನಿರ್ಗಮಿಸುವವರೆಗಿನ ಎಲ್ಲವನ್ನೂ ವಿಡಿಯೋ ದಾಖಲಿಸಿ, ಅಗತ್ಯ ಬಿದ್ದರೆ ರೀಪ್ಲೇ ವೀಕ್ಷಿಸಿ ಬಳಿಕವೇ ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ಕಾಮತ್ ಹೇಳಿದರು.ತೀರ್ಪುಗಾರರ ತೀರ್ಮಾನವೇ ಅಂತಿಮ. ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಿ ಗೌರವಿಸಲಾಗುವುದು. ಅಲ್ಲದೆ ಶಿಸ್ತಿನ ತಂಡ, ಅತ್ಯುತ್ತಮ ಹುಲಿ ಮೆರವಣಿಗೆ ತಂಡ, ಪರ್ಬದ ಪಿಲಿ, ಕಪ್ಪು ಪಿಲಿ, ಮರಿ ಹುಲಿ, ಮುಡಿ, ಶಾಸೆ, ಬಣ್ಣಗಾರಿಕೆ, ಧರಣಿ ಮಂಡಲ ವಿಭಾಗಗಳಿಗೆ ಪ್ರತ್ಯೇಕ ಬಹುಮಾನ ನೀಡಿ, ಪ್ರತಿ ಹುಲಿವೇಷ ತಂಡಕ್ಕೆ ಗೌರವ ಮೊತ್ತ ನೀಡಲಾಗುವುದು ಎಂದರು.
ಪ್ರಥಮ ತಂಡಕ್ಕೆ 5 ಲಕ್ಷ ರು., ದ್ವಿತೀಯ 3 ಲಕ್ಷ ರು., ತೃತೀಯ ತಂಡಕ್ಕೆ 2 ಲಕ್ಷ ರು. ಹಾಗೂ ವೈಯಕ್ತಿಕವಾಗಿ 25 ಸಾವಿರ ರು. ಮತ್ತು ಭಾಗವಹಿಸಿದ ಎಲ್ಲ ತಂಡಗಳಿಗೆ 50 ಸಾವಿರ ರು. ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮಕ್ಕೆ ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾ ತಾರೆಯರು ಹಾಗೂ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. 5 ಸಾವಿರ ಜನರಿಗೆ ಕುಳಿತುಕೊಳ್ಳಲು ಗ್ಯಾಲರಿ ವ್ಯವಸ್ಥೆ ಮಾಡಲಾಗಿದ್ದು, ಗಣ್ಯ ವ್ಯಕ್ತಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆಯಾಗಿ 10 ಸಾವಿರ ಜನರು ಕೂರುವ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ತಂಡಗಳು: ಟೀಮ್ ಪರಶುರಾಮ, ಪಾಂಡೇಶ್ವರ ಶಾರದಾ ಹುಲಿ, ಶಿವಶಕ್ತಿ ಟೈಗರ್ಸ್ ಮಂಜೇಶ್ವರ, ಲೆಜೆಂಡ್ ಟೈಗರ್ಸ್ ಕುಡ್ಲ, ಕಾರ್ಕಳ ಟೈಗರ್ಸ್, ಟೀಮ್ ಅಗಸ್ತ್ಯ, ಟ್ಯಾಲೆಂಟ್ ಟೈಗರ್ಸ್, ನಂದಿಗುಡ್ಡ ಫ್ರೆಂಡ್ಸ್ ಬಾಬುಗುಡ್ಡ, ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ (ಎಂಎಫ್‌ಸಿ), ಹಾಗೂ ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್ ತಂಡಗಳು ಪ್ರದರ್ಶನ ನೀಡಲಿವೆ ಎಂದು ತಿಳಿಸಿದರು.ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಯತೀಶ್ ಬೈಕಂಪಾಡಿ, ಕಿರಣ್ ಶೆಣೈ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಜಗದೀಶ್ ಕದ್ರಿ, ಚೇತನ್ ಕಾಮತ್, ಸಹಾನ್ ಕೋಡಿಕೆರೆ, ಕಿರಣ್ ಶೆಣೈ ಇದ್ದರು.