ಸಕಾಲದಲ್ಲಿ ಎಲ್ಲರಿಗೂ ಸೇವೆ ದೊರೆಯುವಂತಾಗಲಿ: ಪ್ರಕಾಶ್

KannadaprabhaNewsNetwork | Published : Dec 27, 2024 12:47 AM

ಸಾರಾಂಶ

ಪ್ರಸಕ್ತದಲ್ಲಿ ಎಲ್ಲಾ ಸೇವೆಗಳು ಗಣಕೀಕೃತವಾಗಿರುವುದರಿಂದ ಗ್ರಾಮ ಪಂಚಾಯಿತಿ ಹಂತದಲ್ಲಿ ಗ್ರಾಪಂ ಆಪರೇಟರ್‌ ಪಾತ್ರ ಶ್ಲಾಘನೀಯ.

ಕೊಪ್ಪಳ ತಾಪಂಯಲ್ಲಿ ಗ್ರಾಪಂ ಕಂಪ್ಯೂಟರ್ ಆಪರೇಟರ್ ದಿನಾಚರಣೆಯಲ್ಲಿ ಜಿಪಂ ಯೋಜನಾ ನಿರ್ದೇಶಕಕನ್ನಡಪ್ರಭ ವಾರ್ತೆ ಕೊಪ್ಪಳ

ಪ್ರಸಕ್ತದಲ್ಲಿ ಎಲ್ಲಾ ಸೇವೆಗಳು ಗಣಕೀಕೃತವಾಗಿರುವುದರಿಂದ ಗ್ರಾಮ ಪಂಚಾಯಿತಿ ಹಂತದಲ್ಲಿ ಗ್ರಾಪಂ ಆಪರೇಟರ್‌ ಪಾತ್ರ ಶ್ಲಾಘನೀಯ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಪ್ರಕಾಶ್ ವಿ. ಹೇಳಿದರು.

ಇಲ್ಲಿನ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಪಂ ಕಂಪ್ಯೂಟರ್‌ ಆಪರೇಟರ್‌ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡಿದರು.

ಕಂಪ್ಯೂಟರ್‌ ಪಿತಾಮಹರೆಂದೆ ಖ್ಯಾತರಾದ ಚಾರ್ಲ್ ಬ್ಯಾಬೇಜ್‌ ಕಂಪ್ಯೂಟರ್‌ ಕಂಡು ಹಿಡಿದ ಪರಿಣಾಮವಾಗಿ ಎಲ್ಲಾ ಇಲಾಖೆಗಳಲ್ಲಿ ಮಾಹಿತಿಯು ಗಣಕೀಕರಣವಾಗಿರುವುದರಿಂದ ಇಲಾಖೆಯ ಸೇವೆಗಳ ಮಾಹಿತಿ, ಜಗತ್ತಿನ ಬಗ್ಗೆ ಮಾಹಿತಿಯನ್ನು ನಾವು ಒಂದು ಕ್ಷಣದಲ್ಲಿ ಪಡೆಯಬಹುದಾಗಿದೆ ಎಂದರು. ಗ್ರಾಮ ಪಂಚಾಯತಿಯಲ್ಲಿ ಎಲ್ಲಾ ಸೇವೆಗಳು ಆನ್‌ ಲೈನ್‌ ಇರುವುದರಿಂದ ಗ್ರಾಮ ಪಂಚಾಯತಿಯಿಂದ ಸಾರ್ವಜನಿಕರಿಗೆ ಹಲವಾರು ಸೇವೆಗಳು ಸಕಾಲದಲ್ಲಿ ದೊರೆಯುತ್ತಿವೆ. ಈ ಮುಂಚೆ ಗ್ರಾಪಂಯಲ್ಲಿ ಕೈ ಬರವಣಿಗೆಯ ರೂಪದಲ್ಲಿ ದಾಖಲಾತಿ ಲಭ್ಯವಿದ್ದವು. ಮಹಾತ್ಮಾ ಗಾಂಧಿ ನರೇಗಾ ಯೋಜನೆ ಜಾರಿಯಾದಾಗಿನಿಂದ ಪ್ರತಿ ಗ್ರಾಪಂ ಕಂಪ್ಯೂಟರ್‌ ಆಪರೇಟರ್ ಹುದ್ದೆ ಅವಶ್ಯವಿದ್ದ ಪ್ರಯುಕ್ತ ಈ ಹುದ್ದೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹೊಸದಾಗಿ ಸೃಜಿಸಿತು. ಇದರ ಪರಿಣಾಮವಾಗಿ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಗಣಕಯಂತ್ರ ನಿರ್ವಾಹಕರ ನೇಮಕಾತಿ ಮಾಡಿಕೊಳ್ಳಲಾಯಿತು. ಗ್ರಾಪಂಯಿಂದ ದೊರೆಯುವ ಎಲ್ಲಾ ಸೇವೆಗಳು ಸಕಾಲದಲ್ಲಿ ಎಲ್ಲರಿಗೂ ದೊರೆಯುವಂತಾಗಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ತಾಪಂ ಇಒ ದುಂಡಪ್ಪ ತುರಾದಿ ಮಾತನಾಡಿ, ಗಣಕಯಂತ್ರ ನಿರ್ವಾಹಕರು ಪ್ರಸಕ್ತ ಕೆಲಸದಲ್ಲಿ ಹೆಚ್ಚು ಆಸಕ್ತಿ ವಹಿಸಿ ನಿರ್ವಹಿಸುತ್ತಿರುವರಿಂದ ಎಲ್ಲಾ ಯೋಜನೆಗಳಲ್ಲಿ ತಾಲೂಕುನಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ ಎಂದರು.

ಚಾರ್ಲ್ ಬ್ಯಾಬೇಜ್‌ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡುವ ಮೂಲಕ ಸ್ಮರಿಸಲಾಯಿತು. ಬಿಸರಳ್ಳಿ ಗ್ರಾಪಂ ಕಂಪ್ಯೂಟರ್‌ ಆಪರೇಟರ್‌ ನಿಸಾರ ಅಹಮದ್ ದಿನಾಚರಣೆಯ ಕುರಿತು ಮಾತನಾಡಿದರು. ಗೊಂಡಬಾಳ ಗ್ರಾಪಂ ಡಿಇಒ ಮಾರುತಿ ಹಣವಾಳ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ (ಗ್ರಾಉ)ಯಂಕಪ್ಪ, ಪಂಚಾಯತ್‌ ರಾಜ್‌ ಸಹಾಯಕ ನಿರ್ದೇಶಕ ಮಹೇಶ್‌, ತಾಲೂಕು ಯೋಜನಾಧಿಕಾರಿ ರಾಜೇಸಾಬ ನದಾಫ್‌, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಲೂಕಿನ ಎಲ್ಲಾ ಗ್ರಾಪಂಗಳ ಕಂಪ್ಯೂಟರ್‌ ಆಪರೇಟರ್‌ಗಳು ಭಾಗವಹಿಸಿದ್ದರು.

Share this article