ಬಳ್ಳಾರಿ: ಜನನವಾದ 45 ದಿನಗಳ ಅವಧಿಯಲ್ಲಿ ಶಿಶುವಿಗೆ ಪೆಂಟಾವಲೆಟ್ ಲಸಿಕೆಯನ್ನು ಹಾಕಿಸುವ ಮೂಲಕ ಮಾರಕ ರೋಗಗಳು ತಡೆಗಟ್ಟಲು ಪಾಲಕರು ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಹೇಳಿದರು.
ಬಾಲ್ಯದಲ್ಲಿ ಕಂಡು ಬರುವ ಮಾರಕ ಕಾಯಿಲೆಗಳಿಂದ ಮಕ್ಕಳ ಆರೋಗ್ಯದ ದೃಷ್ಟಿಯಿಂದ 12 ಮಾರಕ ರೋಗಗಳಿಗೆ ಸಂಬಂಧಿಸಿದ ಲಸಿಕೆಗಳನ್ನು ಮಕ್ಕಳಿಗೆ ನೆಗಡಿ, ಕೆಮ್ಮು, ಸಾಧಾರಣ ಜ್ವರ ಇದ್ದರೂ ಯಾವುದೇ ಹಿಂಜರಿಕೆಯಿಲ್ಲದೆ ಲಸಿಕೆ ಹಾಕಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ತಪ್ಪದೇ ಪಾಲಕರು ಲಸಿಕೆಗಳನ್ನು ಹಾಕಿಸಬೇಕು ಎಂದು ಕೋರಿದರು.
ಒಂದು ಚುಚ್ಚುಮದ್ದು ನೀಡುವ ಮೂಲಕ 5 ರೋಗಗಳನ್ನು ತಡೆಗಟ್ಟಲು ಸಹಾಯಕವಾಗುವ ಪೆಂಟಾವಲೆಟ್ ಲಸಿಕೆಯನ್ನು ಮಗುವಿನ ಒಂದೂವರೆ ತಿಂಗಳು, ಎರಡೂವರೆ ತಿಂಗಳು ಹಾಗೂ ಮೂರೂವರೆ ತಿಂಗಳು ವಯಸ್ಸಿನ ಅವಧಿಯಲ್ಲಿ ಹಾಕಿಸಬೇಕು. ಈ ಮೂಲಕ ಗಂಟಲು ಮಾರಿ, ನಾಯಿ ಕೆಮ್ಮು, ಧನುರ್ವಾಯು, ಯಕೃತ್ತಿನ ಉರಿ ಮತ್ತು ಊತ, ಕಾಮಾಲೆ, ಎಚ್‌ಇನ್‌ಪ್ಲ್ಯುಯೆಂಜಾ ಬಿ, ಮೆದುಳು ರೋಗ ಮೆನಂಜೆಟೀಸ್ ರೋಗಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ.ಮಕ್ಕಳ ಸದೃಢ ಆರೋಗ್ಯಕ್ಕಾಗಿ ತಪ್ಪದೇ ಲಸಿಕೆಗಳನ್ನು ಹಾಕಿಸಬೇಕು. ಒಂದು ವರ್ಷದ ಒಳಗಡೆ ಮಗುವಿಗೆ ಪೆಂಟಾವಲೆಟ್ ಲಸಿಕೆ ಹಾಕಿಸದೇ ಇದ್ದರೂ ಸಹ ತಪ್ಪದೇ ಲಸಿಕೆ ಹಾಕಿಸಲು ವಿನಂತಿಸಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಸುರೇಖಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್.ದಾಸಪ್ಪನವರ, ಡಿಎನ್‌ಒ ಗಿರೀಶ್, ಪಿಎಚ್‌ಸಿಒ ಕಾವ್ಯ, ಎಚ್‌ಐಒ ರಾಮಕೃಷ್ಣ, ಆಶಾ ಕಾರ್ಯಕರ್ತೆ ಹೈಯತುನ್ನೀಸಾ, ಅಂಗನವಾಡಿ ಕಾರ್ಯಕರ್ತೆ ಮರಿಯಮ್ಮ ಮತ್ತಿತರರಿದ್ದರು.
ಬಳ್ಳಾರಿಯ ದೇವಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗಿದ ಪೆಂಟಾವಲೆಟ್ ಲಸಿಕೆ ವಿಶೇಷ ಅಭಿಯಾನ ಕಾರ್ಯಕ್ರಮದಲ್ಲಿ ಶಿಶುಗಳಿಗೆ ಲಸಿಕೆ ಹಾಕಲಾಯಿತು.