ಅಂಕೋಲಾ: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿಗಳ ಪರಿಶೀಲನೆ ತಡೆಹಿಡಿಯುವಂತೆ ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.
ಆದರೆ ಬ್ರಿಟಿಷ್ ಸರ್ಕಾರ ಇದ್ದಾಗಿನ ದಾಖಲೆ ಒದಗಿಸಲು ಬಡ ಅರಣ್ಯ ಅತಿಕ್ರಮಣದಾರರಿಂದ ಸಾಧ್ಯವಾಗುವುದಿಲ್ಲ. ಅಲ್ಲದೇ ಯಾವುದೇ ಜನಪ್ರತಿನಿಧಿಗಳು ಇಲ್ಲದೇ ಅರ್ಜಿಗಳನ್ನು ಪರಿಶೀಲಿಸುವುದು ಮತ್ತು ಹೊಸ ಹೊಸ ಮಾನದಂಡಗಳನ್ನು ತರಲು ಹೇಳುವುದನ್ನು ಒಪ್ಪಲು ಸಾಧ್ಯವಿಲ್ಲ.
ಗ್ರಾಮ ಅರಣ್ಯ ಹಕ್ಕು ಸಮಿತಿಗಳು ಅನುಮೋದಿಸಿರುವ ಬಡ ರೈತರ ಅರ್ಜಿಗಳನ್ನು ಯಾವುದೇ ಷರತ್ತಿಲ್ಲದೇ ಅನುಮೋದಿಸಬೇಕು ಮತ್ತು ಹಕ್ಕು ಪತ್ರ ನೀಡಬೇಕು. ಅದು ಬಿಟ್ಟು ಪದೇ ಪದೇ ಮೂರು ತಲೆಮಾರಿನ ಹಿಂದಿನ ದಾಖಲೆ ಕೇಳಿ ಅನಾವಶ್ಯಕ ವೆಚ್ಚ ಮತ್ತು ಸಮಯ ಹಾಳುಮಾಡುತ್ತಿರುವುದು ಸರಿಯಲ್ಲ.ಮೂರು ತಲೆಮಾರು ಅಥವಾ 75 ವರ್ಷ ಮಾನದಂಡ ವಾಪಸ್ ಪಡೆಯಬೇಕು. 2006ರ ವರೆಗಿನ ಎಲ್ಲ ಅತಿಕ್ರಮಣದಾರರ ಅರ್ಜಿಗಳನ್ನು ಮಾನ್ಯ ಮಾಡಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ವಿನಾಯಿತಿ ಕೋರಿ ಪತ್ರ ಬರೆದಿದ್ದು, ಅದನ್ನು ಪರಿಗಣಿಸಿ ಅರ್ಜಿ ತೀರ್ಮಾನ ಮಾಡಬೇಕು. ಜನಪ್ರತಿನಿಧಿಗಳಿಲ್ಲದೇ ಅರ್ಜಿ ಪರಿಶೀಲನೆ ಸರಿ ಅಲ್ಲ. ಗ್ರಾಮ ಅರಣ್ಯ ಹಕ್ಕು ಸಮಿತಿ ಒಪ್ಪಿಗೆ ಸೂಚಿಸಿರುವ ಅರ್ಜಿಗಳಿಗೆ ಹಕ್ಕುಪತ್ರ ನೀಡಬೇಕು. ಇವತ್ತಿನ ಪರಿಶೀಲನಾ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.
ತಾಲೂಕಾಧ್ಯಕ್ಷ ಗೌರೀಶ ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ, ಪ್ರಮುಖರಾದ ಜಿ.ಎಂ. ಶೆಟ್ಟಿ, ರಮಾನಂದ ನಾಯಕ, ಮಾದೇವ ಗೌಡ ಹಾಗೂ ನೂರಾರು ಅರಣ್ಯ ಅತಿಕ್ರಮಣದಾರರು ಪಾಲ್ಗೊಂಡಿದ್ದರು.