ತಾಲೂಕಾ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ
ಒಡೆಯುವ ಮನಸ್ಸುಗಳನ್ನು ದೂರವಿಟ್ಟು ಒಳ್ಳೆಯ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸವಾಗಬೇಕು. ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರೊಳಗೊಂದಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ನಿವೃತ್ತ ಪ್ರಾಧ್ಯಾಪಕ ಎಂ.ಜಿ. ನಾಯ್ಕ ಹೇಳಿದರು.
ಹಿರೇಗುತ್ತಿಯಲ್ಲಿ ನಡೆದ ಕುಮಟಾ ತಾಲೂಕಾ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ನುಡಿಗಳನ್ನಾಡಿದರು.ಸಾಹಿತ್ಯ ವಿದ್ಯಾರ್ಥಿಗಳಿಗೆ ಮುಟ್ಟಬೇಕು. ಮುಂದಿನ ತಲೆಮಾರಿಗೆ ಕನ್ನಡ ನಾಡು- ನುಡಿ, ಸಾಹಿತ್ಯದ ಸೊಬಗನ್ನು ವರ್ಗಾಯಿಸುವ ಹೊಣೆಗಾರಿಕೆ ವಿದ್ಯಾರ್ಥಿಗಳ ಮೇಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಸಾಹಿತ್ಯ ಸಮ್ಮೇಳನ ಹಬ್ಬದ ರೂಪದಲ್ಲಿ ನಡೆದಿದೆ. ಕಸಾಪ ಘಟಕದ ಜೊತೆ ಹಿರೇಗುತ್ತಿಯ ಜನರ ಸಹಭಾಗಿತ್ವದೊಂದಿಗೆ ಸಮ್ಮೇಳನ ಯಶಸ್ವಿಯಾಗಿದೆ ಎಂದರು.ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೊನಿ ಮಾತನಾಡಿದರು.
ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಆಜ್ಞಾ ನಾಯಕ, ಪ್ರೊ. ಜಿ.ಡಿ. ಭಟ್, ಸಾಹಿತಿ ಪ್ರವೀಣ ಮಹಾಲೆ, ಉಲ್ಲಾಸ್ ಪೀಟರ್, ಎಂ.ಕೆ. ಪಟಗಾರ, ಅಣ್ಣಪ್ಪ ಸಿರ್ಸಿಕರ್, ಮಾರುತಿ ನಾಯ್ಕ, ಜಿ.ಸಿ. ಪಟಗಾರ, ಸಂಜೀವ ನಾಯಕ, ನೀಲಕಂಠ ನಾಯಕ, ಶ್ರೀಧರ ನಾಯಕ ಅವರನ್ನು ಪರಿಷತ್ತಿನ ಪರವಾಗಿ ಗೌರವಿಸಲಾಯಿತು.