ಬಳ್ಳಾರಿಯಲ್ಲಿ ಆ. 16ರಂದು ಗಣಿಬಾಧಿತ ಜನರ ಸಮಾವೇಶಕನ್ನಡಪ್ರಭ ವಾರ್ತೆ ಹೊಸಪೇಟೆಗಣಿಗಾರಿಕೆಯಿಂದ ಜನರ ಬದುಕಿನ ಮೇಲೆ ಆಗಿರುವ ದುಷ್ಪರಿಣಾಮ ಸರಿಪಡಿಸಲು ಸರ್ಕಾರದಿಂದ ಯಾವುದೇ ಪ್ರಯತ್ನ ಆಗಿಲ್ಲ. ಇರುವ ಕೆಎಂಇಆರ್‌ಸಿ ಹಣ ಸದ್ಬಳಕೆ ಮಾಡಿಕೊಂಡು ಆಗಿರುವ ಹಾನಿ ಸರಿಪಡಿಸಬೇಕು ಎಂದು ಜನಾಂದೋಲನಗಳ ಮಹಾಮೈತ್ರಿ, ಜನಸಂಗ್ರಾಮ್ ಪರಿಷತ್ ಮತ್ತು ಸಮಾನ ಮನಸ್ಕ ಸಂಘಟನೆಗಳ ಮುಖ್ಯಸ್ಥ ಎಸ್.ಆರ್. ಹಿರೇಮಠ ಒತ್ತಾಯಿಸಿದರು.ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿಗಾರಿಕೆ ಈ ಹಿಂದೆ ಅಕ್ರಮವಾಗಿತ್ತು. ಈಗ ಸಕ್ರಮವಾಗಿದ್ದರೂ ಜನ ಪರಿಸ್ಥಿತಿ ಬದಲಾಗಿಲ್ಲ. ಹಿಂದೆಂದೂ ನಡೆಯದ ದೊಡ್ಡ ಪ್ರಮಾಣದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ. ಸ್ಥಿರಗೊಳಿಸಿರುವ ಗಣಿಗಳನ್ನು ಕೆದರಿದರೆ ಮತ್ತೆ ಪರಿಸರಕ್ಕೆ ಹಾನಿಯಾಗುತ್ತದೆ. ಈ ಬಗ್ಗೆ ಮೇ 1ರಂದು ಸಿಇಸಿ 157 ಪುಟಗಳ ಸಮಗ್ರ ವರದಿಯಲ್ಲಿ ಸ್ಟೆಬಲೈಸ್ಡ್ (ಸ್ಥಿರಗೊಳಿಸಿರುವ) ಡಂಪ್ ಮುಟ್ಟುವಂತಿಲ್ಲ ಎಂದಿತ್ತು. ಆದರೆ, ಹಣಕ್ಕಾಗಿ ಎಲ್ಲವನ್ನೂ ಹರಾಜು ಮಾಡಲಾಗಿದೆ. ನೂರಕ್ಕೂ ಅಧಿಕ ಕೋಟಿ ಹಣದ ದುರಾಸೆಯಿಂದ ಮಾಡಬಾರದ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದರ ಹಿಂದೆ ಪ್ರಭಾವಿ ಶಕ್ತಿಗಳಿವೆ. ಸುಪ್ರೀಂ ಕೋರ್ಟ್ ಹಲವಾರು ಆದೇಶಗಳನ್ನು ಉಲ್ಲಂಘಿಸಲಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಡಂಪ್ ಹರಾಜು ಮಾಡಲಾಗಿದೆ ಎಂದು ಆರೋಪಿಸಿದರು.
ಸರ್ಕಾರಕ್ಕೆ ನ್ಯಾಯದ ಬಗ್ಗೆ ಪರಿಕಲ್ಪನೆ ಇದ್ದರೆ ಗಣಿಬಾಧಿತ ಜನರ ಜೀವನ ಸುಧಾರಣೆಗೆ ಈ ಕೆಲಸ ಮಾಡಬೇಕು. ಛೀಮಾರಿ ಹಾಕಿಸಿಕೊಳ್ಳಬೇಡಿ. ಮಾಫಿಯಾ, ಅಧಿಕಾರಿಗಳ ದುಷ್ಟಕೂಟ ಇವತ್ತಿಗೂ ಸಕ್ರಿಯವಾಗಿದೆ. ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಇಲಾಖೆಯ ಅಧಿಕಾರಿಗಳು ಹಾಗೂ ಇತರರ ಕುಮ್ಮಕ್ಕು ಇದೆ. ಇನ್ಮುಂದೆ ಇವರಿಗೆ ಸದ್ಬುದ್ಧಿ ಬರಲಿ. ಒಂದು ಮಿಲಿಯನ್ ಮೆಟ್ರಿಕ್ ಟನ್‌ಗಿಂತಲೂ ಹೆಚ್ಚಿಗೆ ಮಾಡುವವರನ್ನು ಬಂದ್ ಮಾಡಿಸಬೇಕು ಎಂದು ಆಗ್ರಹಿಸಿದರು.ಸಹ ಸಂಚಾಲಕ ಕೆ.ವಿ. ಭಟ್ ಮಾತನಾಡಿ, ಗಣಿಬಾಧಿತ ಜನ ಸಮುದಾಯದ ಜನರ ಅಭಿವೃದ್ಧಿಗೆ ಹಣ ಬಳಸಬೇಕು. ನಾಲ್ಕು ಜಿಲ್ಲೆಗಳಲ್ಲಿ ಇದಕ್ಕೆ ಸಂಘಟನೆಯಿಂದ ಕ್ರಿಯಾ ಯೋಜನೆ ಮಾಡುವ ಪ್ರಯತ್ನ ನಡೆದಿದೆ. ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಕ್ರಿಯಾಯೋಜನೆಗೆ ಅಲ್ಲಿನ ಜನರ ಅಭಿಪ್ರಾಯ ಪಡೆದು ವರದಿ ಸಲ್ಲಿಸಲಾಗುವುದು. ಜನಬದುಕಿನ ಪುನಶ್ಚೇತನಕ್ಕೆ ಹಣ ಬಳಕೆಯಾಗಬೇಕು. ಹಳ್ಳಿಗಳಲ್ಲಿ ಪುನಶ್ಚೇತನ ಆಗಬೇಕು. ಇದಕ್ಕಾಗಿ ಸಮಾವೇಶ ಆಯೋಜಿಸಿದ್ದು, ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವರು. ಇದರ ಬಗ್ಗೆ ಜನರಿಗೆ ಅರಿವು ಮೂಡಬೇಕು. ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.ರೈತ ಸಂಘದ ಸಂಘಟನಾ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಮಾತನಾಡಿ, ಬಳ್ಳಾರಿಯಲ್ಲಿ ಆ. 16ರಂದು ಗಣಿಬಾಧಿತ ಜನರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ನ್ಯಾ. ಸಂತೋಷ್ ಹೆಗ್ಡೆ ಉದ್ಘಾಟಿಸುವರು. ಸಮಾವೇಶದಲ್ಲಿ ತುಮಕೂರು, ಚಿತ್ರದುರ್ಗ ಮತ್ತು ಅಖಂಡ ಜಿಲ್ಲೆಯ ಜನರು ಪಾಲ್ಗೊಳ್ಳುವರು. ಹೊಸಪೇಟೆ ಸುತ್ತಮುತ್ತಲಿನ 20 ಗ್ರಾಮಗಳಲ್ಲಿ ಗಣಿಬಾಧಿತ ಜನರಿದ್ದಾರೆ. ಮೂಲಭೂತ ಸಮಸ್ಯೆ, ಧೂಳು, ಶಾಲೆ, ಕುಡಿಯುವ ನೀರು ಸೇರಿ ಹಲವಾರು ಸಮಸ್ಯೆಗಳಿವೆ. ಇದನ್ನು ಬಿಟ್ಟು ರಸ್ತೆ, ಕಟ್ಟಡ ನಿರ್ಮಿಸಿ ಜನರ ಹಣವನ್ನು ನುಂಗುತ್ತಿದ್ದಾರೆ. ಇದಕ್ಕಾಗಿ ಹೋರಾಟ ರೂಪಿಸಲಾಗಿದೆ ಎಂದು ತಿಳಿಸಿದರು.ಮುಖಂಡರಾದ ಎನ್. ರಮೇಶ್, ಬಾಷಾ, ಹಟ್ಟಿ ಕಾಳಪ್ಪ, ವೈ. ಗೋವಿಂದ, ಗಂಟೆ ಸೋಮಶೇಖರ ಮತ್ತಿತರರಿದ್ದರು.