ಬದುಕು ಶೃತಿಗೊಳಿಸಿದ ವೀಣೆಯಂತಾಗಲಿ: ಸದಾಶಿವಾನಂದ ಶ್ರೀಗಳು

KannadaprabhaNewsNetwork | Published : Mar 6, 2025 12:33 AM

ಸಾರಾಂಶ

ಗದಗ ನಗರದ ಅಡವೀಂದ್ರಸ್ವಾಮಿ ಮಠದಲ್ಲಿ ಮಂಗಳವಾರ 333ನೇ ಶಿವಾನುಭವ, ಗಾನಯೋಗಿ ಪಂಚಾಕ್ಷರಿ ಸಂಗೀತ ಪರಂಪರಾ ಸಮ್ಮೇಳನ, ಗುರುಕುಮಾರ ಪಂಚಾಕ್ಷರಿ ಸಮ್ಮಾನ-2025 ಸಮಾರಂಭ ನಡೆಯಿತು.

ಗದಗ: ತಂತಿ ತಾಳದ ಹಿಂದೆ ಜೀವನದ ಪರಮರಹಸ್ಯವಿದೆ. ಸಂಗೀತಕ್ಕೆ ರೋಗ ನಿವಾರಿಸುವ ಅದ್ಭುತ ಶಕ್ತಿ ಇದೆ. ಸಂಗೀತ ಸಾಧನೆಗೆ ಸಾಮರ್ಥ್ಯ ಬರುವುದು ತಪಸ್ಸು ಇದ್ದಾಗ, ಬದುಕು ಶೃತಿಗೊಳಿಸಿದ ವೀಣೆಯಂತಾಗಬೇಕು ಎಂದು ಗದಗ ಶಿವಾನಂದ ಬ್ರಹನ್ಮಠದ ಸದಾಶಿವಾನಂದ ಶ್ರೀಗಳು ಹೇಳಿದರು.

ನಗರದ ಅಡವೀಂದ್ರಸ್ವಾಮಿ ಮಠದಲ್ಲಿ ಶ್ರೀಮಠದ ಕೃಪಾಶ್ರಯದಲ್ಲಿ ಗುರು ಪಂಚಾಕ್ಷರಿ ಸೇವಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಜರುಗಿದ 333ನೇ ಶಿವಾನುಭವ, ಗಾನಯೋಗಿ ಪಂಚಾಕ್ಷರಿ ಸಂಗೀತ ಪರಂಪರಾ ಸಮ್ಮೇಳನ, ಗುರುಕುಮಾರ ಪಂಚಾಕ್ಷರಿ ಸಮ್ಮಾನ-2025 ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹಸಿರು ಕ್ರಾಂತಿಯ ಹೆಸರಿನಲ್ಲಿ ಹದ ಮತ್ತು ಫಲವತ್ತಾದ ಭೂಮಿಗೆ ರಾಸಾಯನಿಕ ಹಾಕಿ ಹಾಕಿ ಆ ಭೂಮಿಯ ಬೆಳೆಯ ಅನ್ನವನ್ನುಂಡು ಮಾನವನ ಶರೀರ ರೋಗದ ಆಲಯವಾಗುತ್ತಿದೆ. ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಆಹಾರಕ್ಕಾಗಿ ಪರಿತಪಿಸಬೇಕಾದೀತು ಎಂದರು. ಅಡುಗೆ ಮನೆಯಲ್ಲಿ ಮಸಾಲೆ ಸಾಮಗ್ರಿಗಳ ಡಬ್ಬಾಗಳು ಔಷಧ ಮಾತ್ರೆಯ ಡಬ್ಬಗಳಾಗಿ ಪರಿವರ್ತನೆಗೊಂಡಿವೆ. ಸಣ್ಣಪುಟ್ಟ ಕಾಯಿಲೆಗಳಿಗೆ ಮನೆಯ ಮದ್ದು ಆಗಬೇಕಿದ್ದ ಅಡುಗೆ ಮನೆ ಔಷಧಾಲಯ ಆಗುತ್ತಿವೆ. ಆದ್ದರಿಂದ ಭೂಮಿಯ ಫಲವತ್ತತೆ ಕಾಯ್ದುಕೊಂಡಲ್ಲಿ ಸದೃಢ ಆರೋಗ್ಯ ಕಾಯ್ದುಕೊಳ್ಳಲು ಪೌಷ್ಟಿಕ ಆಹಾರ ಲಭ್ಯವಾಗಲು ಸಾಧ್ಯ. ನೆಮ್ಮದಿಯ ಬದುಕಿಗೆ ಆಹ್ಲಾದಕರ ಸಂಗೀತ ಅವಶ್ಯ ಎಂದರು.

ನೇತೃತ್ವ ವಹಿಸಿದ್ದ ಹರ್ಲಾಪುರದ ಕೊಟ್ಟೂರೇಶ್ವರ ಮಠದ ಕೊಟ್ಟೂರೇಶ್ವರ ಮಹಾಸ್ವಾಮಿಗಳು ಮಾತನಾಡಿ, ಸಂಗೀತ ಆತ್ಮಸಂತೃಪ್ತಿ ಭಾವವನ್ನು ಸ್ಫುರಿಸುವುದು. ಭಾವ ತುಂಬಿ ಹಾಡುವ ಗಾಯಕನಿಗೆ ಆಗುವ ತೃಪ್ತಿ ಕೇಳುಗನಿಗೂ ಹೆಚ್ಚು ತೃಪ್ತಿ ನೀಡುವ ಶಕ್ತಿ ಸಂಗೀತಕ್ಕಿದೆ. ಬದುಕಿನ ಬವಣೆ ಕಳೆಯುವ ಅದ್ಭುತ ತಾಕತ್ತು ಸಂಗೀತ ಕಲೆಗೆ ಇದೆ. ನಾಡಿನ ಅಂಧ, ಅನಾಥ, ಅಂಗವಿಕಲರ ಬದುಕಿಗೆ ಪಂಚಾಕ್ಷರ ಪುಟ್ಟರಾಜ ಗವಾಯಿಗಳು ಬೆಳಕಾದವರು. ಭಿಕ್ಷೆಯ ಪಾತ್ರೆ ಹಿಡಿದವರಿಗೆ ಅಕ್ಷಯ ಪಾತ್ರೆ ನೀಡಿದ ಪುಣ್ಯಾತ್ಮರಾಗಿದ್ದಾರೆ ಎಂದು ಬಣ್ಣಿಸಿದರು.

ಸಮ್ಮುಖವನ್ನು ಅಡವೀಂದ್ರ ಮಠದ ಧರ್ಮದರ್ಶಿ ವೇ. ಮಹೇಶ್ವರಸ್ವಾಮಿಗಳು ವಹಿಸಿದ್ದರು. ಸೇವಾ ಸಮಿತಿ ಅಧ್ಯಕ್ಷ ಡಾ. ರಾಜಗುರು ಗುರುಸ್ವಾಮಿ ಕಲಿಕೇರಿ ಅಧ್ಯಕ್ಷತೆ ವಹಿಸಿದ್ದರು. ರಾಣಿ ಚೆನ್ನಮ್ಮ ಕೋಆಪರೇಟಿವ್‌ ಬ್ಯಾಂಕ್ ಅಧ್ಯಕ್ಷ ಡಾ. ಎಸ್.ಕೆ. ಮ್ಯಾಗೇರಿ ಉದ್ಘಾಟಿಸಿದರು.

ಆರೋಗ್ಯದ ಮೂಲ ಸಂಗೀತ ವಿಷಯವಾಗಿ ಡಾ. ಮಹಾಂತೇಶ ಸಜ್ಜನ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಶಿವಾನುಭವ ಸಮಿತಿಯ ಡಾ. ಎಸ್.ಕೆ. ನಾಲತ್ವಾಡಮಠ, ಸರಸ್ವತಿ ಸಜ್ಜನ ಆಗಮಿಸಿದ್ದರು. ಪ್ರಸಾದ ಸೇವೆಯನ್ನು ಎಸ್.ಆರ್. ನಾಲತ್ವಾಡಮಠ, ಮೀನಾಕ್ಷಿ ಬೆನಕಣ್ಣವರ, ಶ್ರೀಶೈಲ ಗದಗಿನಮಠ, ರಾಚಪ್ಪ ಕಾಳಗಿ ವಹಿಸಿಕೊಂಡಿದ್ದರು.

ಕಲಾವಿದರಾದ ಮಲ್ಲಿಕಾರ್ಜುನ ಭಜಂತ್ರಿ, ಶ್ಯಾಮರಾವ್ ಪುಲಾರಿ, ವಿರೂಪಾಕ್ಷಯ್ಯ ಹೊಸಳ್ಳಿಮಠ, ಬಸವರಾಜ ಹೊನ್ನಿಗನೂರ, ಹುಚ್ಚಯ್ಯ ಹಿರೇಮಠ, ಸುಕ್ರುಸಾಬ ಮುಲ್ಲಾ, ವೀರಭದ್ರಪ್ಪ ಅಂಗಡಿ, ವಿಜಯಲಕ್ಷ್ಮೀ ಹಿರೇಮಠ ಅವರಿಂದ ಜರುಗಿದ ಸಂಗೀತ ಕಾರ್ಯಕ್ರಮ ಜನಮನ ಸೆಳೆಯಿತು.

ಡಾ. ಶಿವಬಸಯ್ಯ ಗಡ್ಡದಮಠ ಸ್ವಾಗತಿಸಿದರು. ವಿ.ಎಂ. ಕುಂದ್ರಾಳಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಸೇವಾ ಸಮಿತಿ ಕಾರ್ಯದರ್ಶಿ ಮಲ್ಲಯ್ಯ ಶಿರೋಳಮಠ ವಂದಿಸಿದರು.

Share this article