ಕೊಪ್ಪಳದಲ್ಲಿ 25, 26ರಂದು ಮೇ ಸಾಹಿತ್ಯ ಸಮ್ಮೇಳನ

KannadaprabhaNewsNetwork | Updated : May 11 2024, 10:35 AM IST

ಸಾರಾಂಶ

ಇದೇ ಮೊದಲ ಬಾರಿಗೆ ಕೊಪ್ಪಳದಲ್ಲಿ ಮೇ 25, 26ರಂದು ನಡೆಯುವ ಮೇ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಜೋರಾಗಿ ನಡೆದಿದೆ. ದೇಶ ಮಟ್ಟದ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಕೊಪ್ಪಳ: ಇದೇ ಮೊದಲ ಬಾರಿಗೆ ಕೊಪ್ಪಳದಲ್ಲಿ ಮೇ 25, 26ರಂದು ನಡೆಯುವ ಮೇ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಜೋರಾಗಿ ನಡೆದಿದ್ದು, ಹಲವರು ಸ್ವಯಂ ಪ್ರೇರಣೆಯಿಂದ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಹಲವಾರು ಸಭೆಗಳನ್ನು ಪೂರ್ವಭಾವಿಯಾಗಿ ನಡೆಸಿದ್ದು, ನಿರೀಕ್ಷೆ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾನಾ ರಾಜ್ಯದಿಂದ ಭಾಗಿಯಾಗಲು ಪ್ರತಿನಿಧಿಗಳು ನೋಂದಾಯಿಸಿಕೊಳ್ಳುತ್ತಿದ್ದಾರೆ.

ಲಡಾಯಿ ಪ್ರಕಾಶನ ಮತ್ತು ವಿವಿಧ ಸಂಘಟನೆಗಳು ಜಂಟಿಯಾಗಿ ಹಮ್ಮಿಕೊಂಡಿರುವ ಈ 10ನೇ ಮೇ ಸಮ್ಮೇಳನ ಕೊಪ್ಪಳ ನಗರದ ಶಿವಶಾಂತ ಮಂಗಲಭವನದಲ್ಲಿ ಎರಡು ದಿನಗಳ ಕಾಲ ನಡೆಯಲಿದೆ.

ರಾಜ್ಯದ ಖ್ಯಾತ ಸಾಹಿತಿಗಳು, ಹೋರಾಟಗಾರರು ಭಾಗವಹಿಸುವ ಜತೆಗೆ ಹೊರ ರಾಜ್ಯದದಿಂದ ಖ್ಯಾತ ಹೋರಾಟಗಾರ ರಾಕೇಶ ಟಿಕಾಯತ್, ದಾಮೋದರ ಮೌಜೋ, ಜೂಪಕ ಸುಭದ್ರ ಹಾಗೂ ಪಿ.ಎನ್. ಗೋಪಿಕೃಷ್ಣನ್ ಪಾಲ್ಗೊಳ್ಳುತ್ತಿರುವುದು ವಿಶೇಷ. ಅದರ ಜತೆಗೆ ದೆಹಲಿ ಜೆಎನ್‌ಯು ವಿದ್ಯಾರ್ಥಿಯೋರ್ವರು ಸಹ ಭಾಗಿಯಾಗುತ್ತಿದ್ದಾರೆ.

ಸಭೆಯಲ್ಲಿ ಹಲವು ತೀರ್ಮಾನ:  ಮೇ ಸಾಹಿತ್ಯ ಸಮ್ಮೇಳನ ಕುರಿತು ಶುಕ್ರವಾರ ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿ ಇರುವ ಗುರುಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹಲವು ಮಹತ್ವದ ತೀರ್ಪುಗಳನ್ನು ಕೈಗೊಳ್ಳಲಾಗಿದೆ.

ರಮೇಶ ಗಬ್ಬೂರು, ಶರೀಫ್ ಬಿಳಿಯಲಿ, ಸೋಮಶೇಖರ, ಗೌರಿ ಗೋನಾಳ ಮತ್ತು ಮರಿಯಮ್ಮ ಒಂದೊಂದು ಹಾಡು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

400 ಜನರಿಗೆ ವಸತಿ ವ್ಯವಸ್ಥೆ: ಮೇ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆಗಮಿಸುವ ರಾಜ್ಯ ಮತ್ತು ಹೊರ ರಾಜ್ಯಗಳ ಪ್ರತಿನಿಧಿಗಳಿಗೆ ಎರಡು ದಿನಗಳ ವಸತಿ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದ್ದು, ಅದರಂತೆ ಇದುವರೆಗೂ ಸುಮಾರು 400 ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಇದರ ನೋಂದಾಯಿತ ಪ್ರತಿನಿಧಿಗಳು ಇನ್ನು ಹೆಚ್ಚುತ್ತಲೇ ಇರುವುದರಿಂದ ಇನ್ನಷ್ಟು ವಸತಿ ವ್ಯವಸ್ಥೆ ಅಗತ್ಯದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಮೇ ಸಮ್ಮೇಳನಕ್ಕೆ ಪ್ರತಿನಿಧಿಗಳಿಗೆ ಓಡಾಡಲು ಅನುಕೂಲ ಮಾಡಿಕೊಡಲು ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಅದು ಸಾಲದಿರುವ ಕಾರಣ ಒಂದಷ್ಟು ಬಾಡಿಗೆ ವಾಹನ ಸಹ ಪಡೆಯಲು ತೀರ್ಮಾನಿಸಲಾಗಿದೆ.

ಎರಡು ದಿನಗಳ ಉಪಾಹಾರ ಮತ್ತು ಊಟದ ವ್ಯವಸ್ಥೆಗೆ ಹಲವಾರು ದಾನಿಗಳು ಮುಂದೆ ಬಂದಿದ್ದು, ತಾವು ಏನೇನು ವ್ಯವಸ್ಥೆ ಮಾಡುತ್ತೇವೆ ಎಂದು ಈಗಾಗಲೇ ತಿಳಿಸಿದ್ದಾರೆ. ಅದರಂತೆ 1.20 ಕ್ವಿಂಟಲ್ ಅಕ್ಕಿಯನ್ನು ಮುತ್ತು ಮುಂಡರಗಿ, ಒಂದು ಕ್ವಿಂಟಲ್ ರವೆಯನ್ನು ಸತೀಶ ಗದಗ, 25 ಕೆಜಿ ತೊಗರಿ ಬೆಳೆಯನ್ನು ವಿ.ಬಿ. ರಡ್ಡೇರ್, 4000 ಬಾಳೆಹಣ್ಣನ್ನು ಡಿ.ಎಂ. ಬಡಿಗೇರ, ಅಗತ್ಯವಿದ್ದಷ್ಟು ಗೋದಿ ಹಿಟ್ಟನ್ನು ರವಿತೇಜ ಅಬ್ಬಿಗೇರಿ, ಸಾವಿರ ರೊಟ್ಟಿಯನ್ನು ಅಲ್ಲಮಪ್ರಭು ಬೆಟ್ಟದೂರು, 1500 ರೊಟ್ಟಿಗಳನ್ನು ಎಂ. ಗುರುಸಿದ್ದಪ್ಪ ಹಾಗೂ ಶರಣಪ್ಪ ಒಡಗೇರಿ ಅವರಿಂದ ಹೋಳಿಗೆ ವ್ಯವಸ್ಥೆಯನ್ನು ಮಾಡಿಸುವುದಾಗಿ ಹೇಳಿದ್ದಾರೆ. ಹೀಗೆ ಹಲವರು ಸಹ ಅನೇಕ ಜವಾಬ್ದಾರಿಯನ್ನು ನಿಭಾಯಿಸಿಕೊಳ್ಳುತ್ತಿದ್ದಾರೆ.

ತಾಲೂಕುವಾರು ಸಭೆ: ಮೇ ಸಾಹಿತ್ಯ ಸಮ್ಮೇಳನ ಸಿದ್ಧತೆ ಕುರಿತು ತಾಲೂಕುವಾರು ಸಭೆಗಳನ್ನು ನಡೆಸಲು ತೀರ್ಮಾನಿಸಲಾಯಿತು. ಏಳು ತಾಲೂಕುಗಳಲ್ಲಿ ಪ್ರತ್ಯೇಕ ಸಭೆ ಏರ್ಪಾಡು ಮಾಡುವ ಹೊಣೆಯನ್ನು ಶರಣು ಶೆಟ್ಟರ್ ಅವರಿಗೆ ನೀಡಲಾಯಿತು.

Share this article