ಹೊನ್ನಾವರ: ಸಾಮಾಜಿಕ ಬೆಳವಣಿಗೆ ಜವಾಬ್ದಾರಿ ಎಲ್ಲರಲ್ಲಿ ಬೆಳೆಯಲಿ. ತಮ್ಮ ಊರು ಎಂಬ ಅಭಿಮಾನ ಎಲ್ಲರಲ್ಲಿ ಇರಲಿ. ನಾವು ಪಡೆದುಕೊಂಡ ಸಂಸ್ಕಾರಗಳು ಒಳ್ಳೆಯ ಕೆಲಸ ಮಾಡಲು ಪ್ರೇರೇಪಿಸುತ್ತದೆ ಎಂದು ಗೋಕರ್ಣ ಪರ್ತಗಾಳಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಆಶೀರ್ವಚನ ನೀಡಿದರು.
ನಾವು ಮಾಡುವ ದಾನ ಯಾವ ಕಾರಣಕ್ಕೆ ಎಂಬುದು ತಿಳಿದಿರಬೇಕು. ಅದು ಸಾತ್ವಿಕ ದಾನ ಎನಿಸಿಕೊಳ್ಳುತ್ತದೆ. ನಾವು ಬೆಳೆದಂತೆ ಲವಲವಿಕೆ ಮಾಯವಾಗುತ್ತದೆ. ಆದರೆ ಪೂರ್ವ ಪ್ರಾಥಮಿಕ ಮಕ್ಕಳಲ್ಲಿ ಲವಲವಿಕೆ ಇರುತ್ತದೆ. ಮುಂದಿನ ಜನಾಂಗಕ್ಕೂ ಒಳ್ಳೆಯ ವಿಚಾರಗಳು ರವಾನೆ ಆಗಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು. ಗುರುಪರಂಪರೆಯ ಮೇಲೆ ಗೌರವವಿರಲಿ. ಹೊನ್ನಾವರದಲ್ಲಿ ಎಂಜಿನಿಯರಿಂಗ್ ಕಾಲೇಜ್ ನಿರ್ಮಾಣ ಆಗಬೇಕು. ಶಿಕ್ಷಣ ಮತ್ತು ಉದ್ಯೋಗ ಎಲ್ಲವೂ ನಮ್ಮಲ್ಲಿಯೇ ಆಗಬೇಕು. ನಮ್ಮ ಮೂಲವನ್ನು ಮರೆಯದೆ ಬೆಳೆಯಬೇಕು. ಶಿಕ್ಷಣಕ್ಕೆ ತಕ್ಕುದಾಗಿ ಉದ್ಯೋಗ ನಮ್ಮಲ್ಲಿ ಸೃಷ್ಟಿಯಾಗುವಂತಾಗಲಿ ಎಂದು ಹರಸಿದರು.
ದಾನಿ ಪುಣೆ ಕೆ.ಟಿ.ಆರ್. ಕಪ್ಲಿಂಗ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಶಿವಶಂಕರ ಕೃಷ್ಣರಾವ್ ಪಿಕಳೆ ಮಾತನಾಡಿ, ಗಳಿಸಿದ ಹಣ ಸಮಾಜಕ್ಕೆ ನೀಡಬೇಕು. ಊರಿಗೆ, ಶಾಲೆಗೆ, ಕಾಲೇಜಿಗೆ ಶೌಚಗೃಹ ನಿರ್ಮಿಸಿಕೊಟ್ಟಿದ್ದೇನೆ. ಅಲ್ಲದೆ ಹೊನ್ನಾವರ ತಾಲೂಕಿನ ನ್ಯೂ ಇಂಗ್ಲಿಷ್ ಶಾಲೆಗೂ ಸಹಾಯ ಮಾಡಿದ್ದೇನೆ. ಹೊನ್ನಾವರ ಮತ್ತು ಕುಮಟಾ ತಾಲೂಕಿಗೆ ಸೇರಿ ೧೦ ಪ್ರಾಜೆಕ್ಟ್ ಮಾಡಿದ್ದು, ಅದರಲ್ಲಿ ೫ ಶೌಚಾಲಯ, ೩ ಸೋಲಾರ್ ಪ್ರೊಜೆಕ್ಟ್ ಮಾಡಲಾಗಿದೆ. ಒಟ್ಟು ₹೨ ಕೋಟಿ ೧೨ ಲಕ್ಷ ಖರ್ಚಾಗಿದೆ. ಇದರಲ್ಲಿ ಹೆಚ್ಚಿನ ಹಣ ಹೊನ್ನಾವರ ತಾಲೂಕಿಗೆ ದಕ್ಕಿದೆ ಎಂದರು.ಹಾಂಗ್ಯೋ ಐಸ್‌ಕ್ರೀಮ್ ಮ್ಯಾನೇಜಿಂಗ್ ಡೈರೆಕ್ಟರ್ ಪ್ರದೀಪ ಪೈ ಮಾತನಾಡಿ, ಹೊನ್ನಾವರ ಜಿಲ್ಲೆಯ ಬ್ರೇನ್ ಇದ್ದಂತೆ. ಹೊನ್ನಾವರದಲ್ಲಿ ದಾನಿಗಳ ಸಂಖ್ಯೆ ಹೆಚ್ಚಲಿ. ನ್ಯೂ ಇಂಗ್ಲಿಷ್ ಶಾಲೆ ಕಾಲೇಜುಗಳನ್ನು ನಿರ್ಮಿಸುವಂತಾಗಲಿ ಎಂದು ಆಶಿಸಿದರು.
ನ್ಯೂ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ರಘುನಾಥ ಜಿ. ಪೈ, ಉಪಾಧ್ಯಕ್ಷ ನಾಗರಾಜ್ ಕಾಮತ, ಕಟ್ಟಡ ವಿನ್ಯಾಸಕಾರ ಯೋಗೇಶ್ಚಂದ್ರ ಧಾರಾ ಉಪಸ್ಥಿತರಿದ್ದರು.