25, 26ರಂದು ಕೊಪ್ಪಳದಲ್ಲಿ ಮೇ ಸಾಹಿತ್ಯ ಮೇಳ: ಸೂಳಿಬಾವಿ

KannadaprabhaNewsNetwork |  
Published : May 21, 2024, 12:35 AM IST
20ಕೆಪಿಎಲ್22 ಕೊಪ್ಪಳ ನಗರದ ಮೀಡಿಯಾ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಬಸವರಾಜ ಸೂಳಿಬಾವಿ ಮಾತಾಡುತ್ತಿರುವುದು. | Kannada Prabha

ಸಾರಾಂಶ

ಮೇ 25 ಹಾಗೂ 26ರಂದು 10ನೇ ಮೇ ಸಾಹಿತ್ಯ ಮೇಳವು ನಗರದ ಶಿವಶಾಂತವೀರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಅಂದು ಮೇಳದ ದಶಮಾನೋತ್ಸವ ಸಹ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಮೇ 25 ಹಾಗೂ 26ರಂದು 10ನೇ ಮೇ ಸಾಹಿತ್ಯ ಮೇಳವು ನಗರದ ಶಿವಶಾಂತವೀರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಅಂದು ಮೇಳದ ದಶಮಾನೋತ್ಸವ ಸಹ ನಡೆಯಲಿದೆ ಎಂದು ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ವಿವರ ನೀಡಿದ ಅವರು, ಪ್ರಭುತ್ವದ ಪರವಾಗಿ, ‌ಜನಪರವಾಗಿರುವ ಎರಡೂ ವಾದಗಳು ಮೊದಲಿನಿಂದಲೂ ಇವೆ. ಜನಮುಖಿಯಾಗಿರುವ ಮನಸ್ಸು ಸೇರಿ ಪ್ರಕೃತಿಯಲ್ಲಿ ಚಿಗುರುವಂತೆ ಮೇ ತಿಂಗಳಲ್ಲಿ ಮೇಳ ನಡೆಸಲಾಗುತ್ತಿದೆ. ದುಡಿಯುವ ವರ್ಗಗಳ ಪರವಾಗಿ ಮೇ ಮೇಳ ನಡೆಯಲಿದೆ ಎಂದರು.

ಮೇ ಸಾಹಿತ್ಯ ಮೇಳವು ಜನರಿಗಾಗಿ, ಜನರಿಂದಲೇ ನಡೆಯುವ ಸಮ್ಮೇಳನವಾಗಿದೆ. ಮೇ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ಪ್ರಾಯೋಜಕತ್ವ ಇಲ್ಲ. ರಾಜಕೀಯ ನಾಯಕರ ಹಣ ಬಳಕೆ ಮಾಡಲ್ಲ, ಬದಲಾಗಿ ಸಾಮಾನ್ಯರ ಸಹಾಯಧನದಿಂದಲೇ ಸಮ್ಮೇಳನ ನಡೆಸಲಾಗುತ್ತದೆ. ಪ್ರತಿಯೊಂದು ಪಾರದರ್ಶಕವಾಗಿರುತ್ತದೆ. ಪ್ರತಿ ಸಮ್ಮೇಳನದಲ್ಲಿಯೂ ಪೈಸಾ ಟೂ ಪೈಸಾ ಲೆಕ್ಕ ನೀಡಲಾಗುತ್ತದೆ. ಕೊಟ್ಟಿರುವ ದೇಣಿಗೆ ಯಾವುದಕ್ಕೆ ಬಳಕೆಯಾಯಿತು ಎನ್ನುವ ಮಾಹಿತಿ ನೀಡಲಾಗುತ್ತದೆ ಎಂದರು.

ದಾಸೋಹದ ಪದ್ಧತಿಯಿಂದ ಮೇಳ ನಡೆಯುತ್ತಿದೆ. ಮೇಳ ಮುಕ್ತವಾಗಿದ್ದು, ಯಾರು ಬೇಕಾದರೂ ಭಾಗವಹಿಸಬಹುದು. ಪ್ರತಿನಿಧಿಯಾಗಿರುವವರಿಗೆ ಮೇಳದ ಕಿಟ್ ನೀಡಲಾಗುವುದು. ಅವರು ಮಾತ್ರ ನೊಂದಣಿ ಮಾಡಿಕೊಳ್ಳಬಹುದು. ಸಾರ್ವಜನಿಕರು ನೇರವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು ಎಂದರು.

ಸಂವಿಧಾನ, ಧರ್ಮ, ರಾಜಕಾರಣದ ಕುರಿತು ಗೋಷ್ಠಿಗಳು ನಡೆಯಲಿದೆ. ಇಲ್ಲಿ ತೆಗೆದುಕೊಂಡ ನಿರ್ಣಯಗಳ ಅನುಷ್ಠಾನಗೊಳಿಸಲು ಯತ್ನಿಸುತ್ತೇವೆ ಎಂದರು.

ಮೇಳದಲ್ಲಿ ನಾಡು- ನುಡಿಗಾಗಿ ದುಡಿದಿರುವ ಸವಿರಾಜ ಆನಂದೂರರಿಗೆ ವಿಭಾ ಸಾಹಿತ್ಯ ಪ್ರಶಸ್ತಿ, ಇಂದೂಧರ ಹೊನ್ನಾಪುರರಿಗೆ ಚಂದ್ರಶೇಖರ ಹೊಸಮನಿಯವರ ಅಂಬೇಡ್ಕರ್ ಮಾರ್ಗಿ ಪತ್ರಿಕಾ ಪ್ರಶಸ್ತಿ, ಹುಚ್ಚಮ್ಮ ಚೌದ್ರಿಯವರಿಗೆ ಸಮಾಜಮುಖಿ ಪ್ರಶಸ್ತಿ, ಮೈಸೂರಿನ ಜನಾರ್ದನ ಜನ್ನಿಯವರಿಗೆ ಪಂಚಪ್ಪ ಸಮುದಾಯ ಮಾರ್ಗಿ, ಮಾಧವಿ ಭಂಡಾರಿಯವರಿಗೆ ನವಲಕಲ್ ಬ್ರಹನ್ಮಠದ ಶಾಂತವೀರಮ್ಮ ಕಥಾ ಪ್ರಶಸ್ತಿ, ಶಿವಾಜಿ ಚಿತ್ರಪ್ಪ ಕಾಗಣೇಕರರಿಗೆ ಸಂಶಿ ನಿಂಗಪ್ಪ ರೈತ ಚೇತನ ಪ್ರಶಸ್ತಿ, ಎಸ್.ಆರ್. ಹಿರೇಮಠರಿಗೆ ಬಂಡ್ರಿ ನರಸಪ್ಪ ಶ್ರಮ ಜೀವಿ ಪ್ರಶಸ್ತಿ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಸವರಾಜ ಶೀಲವಂತರ, ಟಿ. ರತ್ನಾಕರ, ಅಲ್ಲಮಪ್ರಭು ಬೆಟ್ಟದೂರು ಹಾಗೂ ಮಹಾಂತೇಶ ಮಲ್ಲನಗೌಡರ ಇದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''